×
Ad

ಉದಯವಾಣಿ ವಿರುದ್ಧ 1 ಕೋಟಿ ರೂ. ಮಾನನಷ್ಟ: ಇಬ್ರಾಹೀಂ ಮುಸ್ಲಿಯಾರ್

Update: 2016-01-28 23:55 IST

ಸಕಲೇಶಪುರ, ಜ.28: ವಾರ್ತಾಭಾರತಿಗೆ ಧನ್ಯವಾದ. ನಾನು ರಿಯಾದ್‌ನಲ್ಲಿ ಉದ್ಯೋಗ ಮಾಡುತ್ತಾ ನೆಮ್ಮದಿಯಾಗಿದ್ದೇನೆ ಎಂದು ಉದಯವಾಣಿ ಪತ್ರಿಕೆಯಲ್ಲಿ ಭಯೋತ್ಪಾದಕ ಎಂದು ಚಿತ್ರಿಸಲಾಗುತ್ತಿರುವ ನೌಫಲ್ ತಿಳಿಸಿದರು.

 ಗುರುವಾರ ದೂರವಾಣಿಯಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ನೌಫಲ್, ನನಗೆ ಉದ್ಯೋಗ ಸಿಕ್ಕಿದೆ, 5 ವರ್ಷಗಳ ಒಪ್ಪಂದವಾಗಿದೆ. ಇಲ್ಲಿಯ ಸರಕಾರ ಗುರುತಿನ ಚೀಟಿಯೂ ನೀಡಿದೆ ಎಂದರು. ಉದಯವಾಣಿ ಸುಳ್ಳು ವರದಿಯಿಂದ ನನಗೆ ಭಾರೀ ಬೇಸರವಾಗಿತ್ತು. ಜೀವನದ ಮೇಲೆ ಜಿಗುಪ್ಸೆ ಉಂಟಾಗಿತ್ತು. ವಾರ್ತಾಭಾರತಿ ವರದಿ ಓದಿದ ನಂತರ ಪತ್ರಿಕೆಗಳ ಮೇಲೆ ವಿಶ್ವಾಸವಿರಿಸುವಂತಾಗಿದೆ ಎಂದು ಅವರು ಹೇಳಿದರು.
ಸುಳ್ಳು ವರದಿಗಳಿಂದ ನನ್ನ ಕುಟುಂಬ ತತ್ತರಿಸಿ ಹೋಗಿದೆ. ದೂರವಾಣಿಯಲ್ಲಿ ನನ್ನ ಪೋಷಕರು ನನಗೆ ಧೈರ್ಯವಾಗಿರು ಅನ್ನುತ್ತಾರೆ. ಆದರೆ ಅವರೇ ಅಳುತ್ತಿರುತ್ತಾರೆ. ನನ್ನ ಕುಟುಂಬ ಮಾನಸಿಕ ಹಿಂಸೆ ಅನುಭವಿಸುತ್ತಿದೆ. ಯಾವ ತಪ್ಪೂ ಮಾಡದ ನಮಗೆ ಈ ರೀತಿಯ ಕಿರುಕುಳ ಏಕೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಅವರು ಹೇಳಿದರು.
ನನ್ನ ತಂದೆ ಇಬ್ರಾಹೀಂ ಕೆ. ಮುಸ್ಲಿಯಾರ್ ಉತ್ತಮ ವಾಗ್ಮಿಯಾಗಿ ಎಲ್ಲರಿಗೂ ಚಿರ ಪರಿಚಿತರು. ತಂದೆಯವರ ಭಾಷಣವನ್ನು ಸಾವಿರಾರು ಜನರು ಕೇಳುತ್ತಾರೆ. ಅವರ ಸೌಹಾರ್ದದ ಮಾತುಗಳು ನನಗೆ ಇಷ್ಟವಾಗುತ್ತದೆ. ಅವರು ಅರಸೀಕೆರೆಯ ಕೊಡಿ ಮಠದ ಸ್ವಾಮೀಜಿಗೆ ಆಪ್ತರು. ನಾನು ಮತ್ತು ನನ್ನ ಕುಟುಂಬ ದೇಶಕ್ಕೆ ಮಾರಕವಾಗುವ ವಿಷಯವನ್ನು ಕನಸು ಮನಸಲ್ಲೂ ಚಿಂತಿಸುವುದಿಲ್ಲ. ನನ್ನ ಫೋನ್ ನಂಬರನ್ನು ನನ್ನ ಮನೆಯವರಿಂದ ಪಡೆದು ನನಗೆ ಯಾರು ಬೇಕಾದರೂ ಫೋನ್ ಮಾಡಬಹುದು. ನಾನು ಸಂಪರ್ಕದಲ್ಲಿರುತ್ತೇನೆ ಎಂದು ನೌಫಲ್ ಹೇಳಿದರು.
 
 ಕಣ್ಣೀರಿಟ್ಟ ನೌಫಲ್ ತಂದೆ: ವಾರ್ತಾಭಾರತಿಯಲ್ಲಿನ ವರದಿ ಓದಿ ಮನಸ್ಸಿಗೆ ಸಮಾಧಾನ ವಾಯಿತು ಎಂದು ಹೇಳುತ್ತಲೇ ಬಿಕ್ಕಳಿಸಿದ ನೌಫಲ್ ತಂದೆ ಇಬ್ರಾಹೀಂ ಕೆ. ಮುಸ್ಲಿಯಾರ್, ನಾನು ರಾತ್ರಿಯಿಡೀ ನಿದ್ದೆ ಮಾಡಲಿಲ್ಲ. ವಾರ್ತಾಭಾರತಿಯಲ್ಲಿ ಯಾವ ರೀತಿ ಸುದ್ದಿ ಇರುತ್ತದೋ ಎಂಬ ಆತಂಕವಿತ್ತು. ರಾತ್ರಿ 2 ಗಂಟೆಯ ಸುಮಾರಿಗೆ ನನ್ನ ಮೊಬೈಲ್‌ನಲ್ಲಿ ‘ವಾರ್ತಾಭಾರತಿ’ಯಲ್ಲಿನ ಸುದ್ದಿ ನೋಡಿ ನೆಮ್ಮದಿಯಾಯಿತು ಎಂದರು. ನೌಫಲ್ ಸಂಬಂಧಿ ಹೇಳಿಕೆ: ಕಳೆದ 27 ವರ್ಷಗಳಿಂದ ಕುಟುಂಬ ಸಮೇತರಾಗಿ ರಿಯಾದ್‌ನಲ್ಲಿ 2 ಸೂಪರ್ ಮಾರ್ಕೆಟ್ ನಡೆಸುತ್ತಿರುವ ನೌಫಲ್‌ರ ದೊಡ್ಡಮ್ಮನ ಮಗ ಕೆ.ಪಿ ಅಬ್ದುಲ್ ಅಝೀಝ್ ದೂರವಾಣಿ ಮುಖಾಂತರ ಪತ್ರಿಕೆಯೊಂದಿಗೆ ಮಾತನಾಡಿ, ನೌಫಲ್ ನಮ್ಮ ಕಣ್ಣಮುಂದೆ ನಮ್ಮ ಸೂಪರ್ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ಉದಯವಾಣಿ ಪತ್ರಿಕೆ ಈ ರೀತಿಯಾಗಿ ಸುಳ್ಳು ಬರೆಯುತ್ತಿರುವುದು ಏಕೆ ಎಂದು ಅರ್ಥವಾಗುತ್ತಿಲ್ಲ ಎಂದು ಕಿಡಿಕಾರಿದರು.
 ಮಾನನಷ್ಟ ಮೊಕದ್ದಮೆ:  ಉದಯವಾಣಿ ಪತ್ರಿಕೆಯ ವಿರುದ್ಧ 1 ಕೋಟಿ ರೂ. ಮಾನನಷ್ಟ ಹಾಗೂ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಉನ್ನತ ಪೋಲಿಸ್ ಅಧಿಕಾರಿಗಳಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಖಿತ ದೂರು ಸಲ್ಲಿಸುತ್ತೇನೆ ಎಂದು ಇಬ್ರಾಹೀಂ ಮುಸ್ಲಿಯಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News