×
Ad

‘ಇನ್ವೆಸ್ಟ್-ಕರ್ನಾಟಕ’ ಸಮಾವೇಶದಲ್ಲಿ ಪಾಲ್ಗೊಳ್ಳಿ: ಉದ್ಯಮಿಗಳಿಗೆ ಮುಖ್ಯಮಂತ್ರಿ ಮನವಿ

Update: 2016-01-29 23:08 IST

ಇಂಡೋ-ಅಮೆರಿಕ ವಾಣಿಜ್ಯ ಸಂಸ್ಥೆಗಳ ಒಕ್ಕೂಟ ಸಮಾವೇಶ
ಬೆಂಗಳೂರು, ಜ. 29: ಮುಂದಿನ ಹತ್ತು ವರ್ಷಗಳಲ್ಲಿ ಭಾರತ ಮತ್ತು ಅಮೆರಿಕ ನಡುವೆ 500ಬಿಲಿಯನ್ ಡಾಲರ್ ವ್ಯಾಪಾರ-ವಹಿವಾಟು ನಡೆಸುವ ಒಪ್ಪಂದಕ್ಕೆ ಪೂರಕವಾಗಿ ‘ಇನ್ವೆಸ್ಟ್-ಕರ್ನಾಟಕ’ ಹೂಡಿಕೆದಾರರ ಸಮಾವೇಶದಲ್ಲಿ ಉದ್ಯಮಿಗಳು ಪಾಲ್ಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಇಂಡೋ-ಅಮೆರಿಕ ವಾಣಿಜ್ಯ ಸಂಸ್ಥೆಗಳ ಒಕ್ಕೂಟದಿಂದ ಏರ್ಪಡಿಸಿದ್ದ ಸಮಾವೇಶವನ್ನು ಉದ್ಘಾ ಟಿಸಿ ಮಾತನಾಡಿದ ಅವರು, 2020ರ ವೇಳೆಗೆ ಭಾರತ- ಅಮೆರಿಕ ನಡುವೆ 500 ಬಿ. ಡಾಲರ್ ವಹಿವಾಟು ನಡೆಸುವ ಗುರಿ ಹಾಕಿಕೊಳ್ಳಲಾಗಿದ್ದು, ಆ ನಿಟ್ಟಿನಲ್ಲಿ ರಾಜ್ಯ ಸರಕಾರ ಅಗತ್ಯ ಸಹಕಾರ ನೀಡಲಿದೆ ಎಂದರು.
ಕೃಷಿ ಮಾರುಕಟ್ಟೆಗೆ ರಾಜ್ಯ ಸರಕಾರ ಹೆಚ್ಚಿನ ಒತ್ತು ನೀಡುತ್ತಿದ್ದು, ಆ ನಿಟ್ಟಿನಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಆನ್‌ಲೈನ್ ವ್ಯಾಪಾರ ಜಾರಿಗೆ ತಂದಿದೆ. ಇದರಿಂದ ರೈತರು ತಮ್ಮ ಉತ್ಪನ್ನವನ್ನು ಜಾಗತಿಕ ಮಟ್ಟದಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದು, ನಮ್ಮ ಮಾರುಕಟ್ಟೆ ವ್ಯವಸ್ಥೆ ಭಾರತದ ಇತರೆ ರಾಜ್ಯಗಳಿಗೂ ಮಾದರಿಯಾಗಿದೆ ಎಂದು ಸಿದ್ದರಾಮಯ್ಯ ಶ್ಲಾಘಿಸಿದರು.
ರಾಜ್ಯದ ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ವಿಫುಲ ಅವಕಾಶಗಳಿದ್ದು, ರೈತರು ಮತ್ತು ಉದ್ಯಮಗಳ ಮಧ್ಯೆ ಸಂಪರ್ಕ ಕಲ್ಪಿಸಲು ರಾಜ್ಯ ಸರಕಾರ ಉತ್ತಮ ವೇದಿಕೆ ಕಲ್ಪಿಸಲಿದೆ ಎಂದ ಸಿದ್ದರಾಮಯ್ಯ, ಆ ಮೂಲಕ ರಫ್ತು ವಹಿವಾಟಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಿದೆ ಎಂದು ತಿಳಿಸಿದರು.

ಸ್ವಯಂ ಉದ್ಯೋಗ ಪ್ರೋತ್ಸಾಹ, ಸ್ಟಾರ್ಟ್‌ಅಪ್ ನೀತಿಯನ್ನು ಜಾರಿಗೆ ತಂದ ಕೀರ್ತಿ ರಾಜ್ಯ ಸರಕಾರಕ್ಕೆ ಸಲ್ಲುತ್ತದೆ. ಇದರಿಂದಾಗಿ ರಾಜ್ಯದಲ್ಲಿ ಉದ್ಯಮ ಗಳ ಆರಂಭಕ್ಕೆ ಅನುಕೂಲವಾಗಿದೆ ಎಂದ ಅವರು, ಯುವಜನ ದೇಶದ ಆಸ್ತಿಯಾಗಿದ್ದು, ಅವರ ಆಲೋಚನೆಗೆ ಉತ್ತೇಜನ ನೀಡಲು ಸರಕಾರ ಆದ್ಯತೆ ನೀಡಿದೆ. ಆಂಗ್ಲ ಭಾಷೆ ಕಲಿಕೆಗೆ ತರಬೇತಿ ನೀಡುತ್ತಿದ್ದು, ಇದರಿಂದ ಜಾಗತಿಕ ಸಂವಹನಕ್ಕೆ ಅನುಕೂಲವಾಗಿದೆ ಎಂದರು.

ನಗರದ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ವಿವಿಧೆಡೆಗಳಲ್ಲಿ ಕೈಗಾರಿಕಾ ಕ್ಲಸ್ಟರ್ ಗಳನ್ನು ಸ್ಥಾಪಿಸಲಾಗುತ್ತಿದ್ದು, ಫೆ.3ರಿಂದ ಆರಂಭಗೊಳ್ಳಲಿರುವ ‘ಇನ್ವೆಸ್ಟ್- ಕರ್ನಾಟಕ’ ಹೂಡಿಕೆದಾರರ ಸಮಾವೇಶದಲ್ಲಿ ರಕ್ಷಣೆ, ಕೃಷಿ, ಆಹಾರೋ ತ್ಪಾದನೆ, ಆಟೋ ಮೊಬೈಲ್, ಇಂಧನ, ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವಂತೆ ಉದ್ಯಮಿಗಳನ್ನು ಕೋರಿದರು. ಇನ್ವೆಸ್ಟ್-ಕರ್ನಾಟಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ದೇಶ- ವಿದೇಶಗಳ ಸುಮಾರು 25 ಸಾವಿರ ಉದ್ಯಮಿಗಳು ಪಾಲ್ಗೊಳ್ಳುವ ನಿರೀಕ್ಷೆ ಯಿದೆ ಎಂದ ಸಿದ್ದರಾಮಯ್ಯ, ಈಗಾಗಲೇ ಸಮಾವೇಶಕ್ಕೆ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿದ್ದು, 500 ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗಿದೆ ಎಂದರು. ಸಮಾವೇಶದಲ್ಲಿ ಡಾ.ಲಲಿತ್‌ಕೊಂಡಯ್ಯ, ಎಫ್‌ಕೆಸಿಸಿಐನ ಸಂಪತ್‌ರಾಮನ್ ಸೇರಿದಂತೆ ಇನ್ನಿತರ ಉದ್ಯಮಿಗಳು ಹಾಜರಿದ್ದರು.

ಸಂಶೋಧನೆಗೆ ಒತ್ತು ನೀಡಿ
ಅಮೆರಿಕ ಮತ್ತು ಭಾರತ ಜಾಗತಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ನಮ್ಮಲ್ಲಿ ಜಿಡಿಪಿ ಶೇ.7ರ ದರದಲ್ಲಿ ವೃದ್ಧಿಯಾಗುತ್ತಿದ್ದರೆ, ಅಮೆರಿಕ ಶೇ.3ರ ದರದಲ್ಲಿ ಅಭಿವೃದ್ಧಿಯಾಗುತ್ತಿದೆ. ಹೀಗಾಗಿ ಉಭಯ ದೇಶಗಳು ಶಿಕ್ಷಣ, ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ಶಿಕ್ಷಣಕ್ಕಾಗಿ ಹತ್ತು ವರ್ಷಗಳ ‘ವೀಸಾ’ ನೀಡಬೇಕು. ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳನ್ನು ಅಲ್ಲೇ ಉಳಿಸಿಕೊಳ್ಳುವ ಬದಲು ಭಾರತಕ್ಕೆ ಕಳುಹಿಸಬೇಕು. ಅವರು ಇಲ್ಲಿ ಸೇವೆ ಸಲ್ಲಿಸಿ ಯಶಸ್ವಿಯಾದ ನಂತರ ಬೇಕಿದ್ದರೆ ಅಮೆರಿಕ ಅವರ ಸೇವೆ ಬಳಸಿಕೊಳ್ಳಲಿ.

ಯಾದಗಿರಿ: ಬಂಡವಾಳ ಹೂಡಿಕೆಗೆ ಸಮರ್ಥ ತಾಣ
13,500 ಕೋಟಿ ರೂ.ಹೂಡಿಕೆ ಪ್ರಸ್ತಾವನೆಗಳಿಗೆ ಅನುಮತಿ
ಬೆಂಗಳೂರು,ಜ.29: ಭವಿಷ್ಯದಲ್ಲಿ ಉತ್ತರ ಕರ್ನಾಟಕ ‘ಕೈಗಾರಿಕಾ ಕಾಶಿ’ಯಾಗಿ ಅಭಿವೃದ್ಧಿ ಹೊಂದುವ ಸಾಧ್ಯತೆಗಳಿದ್ದು, ಅದರ ಮುನ್ನುಡಿಯೇ ಈ ಬಾರಿಯ ‘ಇನ್ವೆಸ್ಟ್ ಕರ್ನಾಟಕ-2016’ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯುತ್ತಿದೆ.
ರಾಜ್ಯದ ಸಮಗ್ರ ಅಭಿವೃದ್ಧಿ ಒತ್ತಡ ನಿವಾರಣೆಗಾಗಿ ರಾಜಧಾನಿ ಬೆಂಗಳೂರಿನಿಂದ ಹೊರಗೆ ಕೈಗಾರಿಕ ಪ್ರದೇಶದ ಅಭಿವೃದ್ಧಿಗೆ ಸರಕಾರ ಹೆಚ್ಚು ಒತ್ತು ನೀಡುತ್ತಿದ್ದು, ಹೂಡಿಕೆದಾರರನ್ನು ಇಡೀ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಉತ್ತೇಜಿಸಲಾಗುತ್ತಿದೆ. ಎರಡನೆ ಮತ್ತು ಮೂರನೆ ವಲಯದ ನಗರಗಳ ಅಭಿವೃದ್ಧಿ ಮತ್ತು ಹೂಡಿಕೆಗೆ ಆಯ್ಕೆ ಮಾಡಲಾಗುತ್ತಿದೆ.
ಮುಂಬೈ ಕಾರಿಡಾರ್: ಚಿತ್ರದುರ್ಗ-ದಾವಣಗೆರೆ, ಹುಬ್ಬಳಿ- ಧಾರವಾಡ, ಮತ್ತು ಬೆಳಗಾವಿ ಜಿಲ್ಲೆಗಳನ್ನು ಮುಂಬೈ ಕೈಗಾರಿಕಾ ಕಾರಿಡಾರ್ ಮಾದರಿಯಲ್ಲಿ ಅಭಿವೃದ್ಧಿಗೆ ಉದ್ದೇಶಿಸಿದ್ದು, ಉತ್ತರ ಕರ್ನಾಟಕದ ಯಾದಗಿರಿಯಲ್ಲಿ ಸರಕಾರ 3,232ಎಕರೆ ಭೂ ಸ್ವಾಧೀನ ಪಡಿಸಿಕೊಳ್ಳ ಲಾಗಿದೆ. ಈ ಜಾಗದಲ್ಲಿ 1 ಸಾವಿರ ಎಕರೆಯಲ್ಲಿ ಜವಳಿ ಪಾರ್ಕ್ ಮತ್ತು 500 ಎಕರೆಯಲ್ಲಿ ಔಷಧಿ ಉದ್ಯಮ ಸ್ಥಾಪನೆಗೆ ಸರಕಾರ ಮೀಸಲಿಟ್ಟಿದೆ.
ರಾಜ್ಯ ಸರಕಾರದ ಈ ಸಕಾರಾತ್ಮಕ ನಡೆ ಹೂಡಿಕೆದಾ ರರನ್ನು ಇನ್ನಿಲ್ಲದಂತೆ ಸೆಳೆಯುತ್ತಿದ್ದು, ಪೂರಕವಾಗಿ ಸ್ಪಂದಿಸಿರುವ ಸರಕಾರ 13,500 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಒಪ್ಪಿಗೆ ನೀಡಿದೆ. ಈ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಕೈಗೊಂಡಿದೆ.


ಪ್ರಮುಖ ಯೋಜನೆಗಳು
ರೈಲ್ವೆ ಬೋಗಿ ನಿರ್ಮಾಣ ಘಟಕ ನಿರ್ಮಾಣಕ್ಕೆ 150 ಎಕರೆ ಜಾಗ ಹಸ್ತಾಂತರ
 ಹೈದರಾಬಾದ್ ಮೂಲದ 40ಕ್ಕೂ ಹೆಚ್ಚು ಔಷಧ ಉದ್ದಿಮೆ ಕಂಪೆನಿಗಳಿಗೆ ಜಾಗ ನಿಗದಿ
 ಹಿಂದೂಸ್ಥಾನ್ ಕೋಕಾಕೋಲ ಕಂಪೆನಿಯ ಯೋಜನೆಗೆ 250 ಎಕರೆ ಜಾಗ ಮಂಜೂರು ಮಾಡಲಾಗಿದೆ.
 ಎಂಫೈನಟ್ ಸಲ್ಯೂಷನ್ಸ್ (ಪೆಟ್ ಬಾಟಲ್ ಉತ್ಪಾದನೆಗಾರರು) ಕಂಪೆನಿ 490 ಕೋಟಿ ರೂ.ಹೂಡಿಕೆ ಮಾಡಲಿದ್ದು, 125 ಎಕರೆ ಜಾಗ ನೀಡಲಾಗಿದೆ.
  ಹೈಗ್ರೋ ಕೆಮಿಕಲ್ಸ್ ಕಂಪೆನಿಗೆ 10 ಎಕರೆ ಜಾಗ ನಿಗದಿ ಪಡಿಸಲಾಗಿದೆ.
  ಫುಡ್‌ಪಾರ್ಕ್‌ನಲ್ಲಿ ಜ್ಹವಾರ್ ಫುಡ್ಸ್ ಕಂಪೆನಿಗೆ 100 ಎಕರೆ ಜಾಗ ಮಂಜೂರು ಮಾಡಲಾಗಿದೆ.
 ಕಲ್ಯಾಣಿ ಸ್ಟೀಲ್ ಕಂಪೆನಿಗೆ ಸ್ಟೀಲ್ ಕಾರ್ಖಾನೆ 12ಸಾವಿರ ಕೋಟಿ ರೂ.ಹೂಡಿಕೆ ಯೋಜನೆಗೆ ಒಪ್ಪಂದವಾಗಿದೆ.

12 ಸಾವಿರ ಉದ್ಯೋಗ ಸೃಷ್ಟಿ
ಅತಿ ಹಿಂದುಳಿದ ಪ್ರದೇಶವೆಂದೇ ಹೆಸರಾಗಿರುವ ಯಾದಗಿರಿಯಲ್ಲಿ ಜವಳಿ ಪಾರ್ಕ್ ನಿರ್ಮಾಣವಾಗುತ್ತಿರು ವುದರಿಂದ ಹತ್ತಿ ಬೆಳೆಯುವ ರೈತರಿಗೆ ಮತ್ತು ನೇಕಾರರಿಗೆ ಅನುಕೂಲಕರವಾಗಲಿದೆ. ಈ ಹೂಡಿಕೆಯಿಂದ ರಾಜ್ಯದಲ್ಲಿ 12 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿವೆ.
ಇದೆಲ್ಲದಕ್ಕೂ ಕಳಸಪ್ರಾಯದಲ್ಲಿ ಯಾದಗಿರಿಯಲ್ಲಿ ಭಾರೀ ಪ್ರಮಾಣದ ಹೈಟೆಕ್ ಜವಳಿ ತರಬೇತಿ ಕೇಂದ್ರವನ್ನು ಯಾದಗಿರಿ ಜಿಲ್ಲೆಯಲ್ಲಿಯೇ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ. ಈ ಕೇಂದ್ರವನ್ನು ಜಿಲ್ಲೆಯ ಬಂಡಹಳ್ಳಿಯಲ್ಲಿ ಸುಮಾರು 10 ಕೋಟಿ ರೂ.ವೆಚ್ಚದಲ್ಲಿ ಐದು ಎಕರೆ ಜಾಗದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ.

ಅನುಷ್ಠಾನದ ಹಾದಿಯಲ್ಲಿರುವ ಯೋಜನೆಗಳು
ಸಿಪೆಟ್ (ಸೆಂಟರ್ ಫಾರ್ ದಿ ಸೆಂಟ್ರಲ್ ಇನ್ ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ಸ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿ) ಕರ್ನಾಟಕ ರಸಗೊಬ್ಬರ ತಯಾರಿಕೆ, ಔಷಧಿ ತಯಾರಿಕ ಘಟಕ ಮತ್ತು ಸಂಶೋಧನಾ ಸಂಸ್ಥೆಯೊಂದನ್ನು ಸ್ಥಾಪಿಸಲು ಉದ್ದೇಶಿಸಿದೆ.
ಔಷಧಿ ಘಟಕ ಸ್ಥಾಪನೆಗೆ ಸರಕಾರ ಜಾಗ ನಿಗದಿ ಮಾಡಬೇಕಿದ್ದು, ರಸಗೊಬ್ಬರ ಘಟಕ ಸ್ಥಾಪನೆಗೆ ಜಾಗ ನಿಗದಿ ಪಡಿಸಬೇಕಿದ್ದು, ಯಾದಗಿರಿಯಲ್ಲಿ ಔಷಧಿ ತಯಾರಿಕ ಘಟಕ ಸ್ಥಾಪನೆಗೆ ಹೆಚ್ಚು ಒತ್ತು ನೀಡಲಾಗಿದೆ.

2,500 ಹೂಡಿಕೆದಾರರು ಭಾಗಿ
ನಗರದ ಅರಮನೆ ಮೈದಾನದಲ್ಲಿ ಫೆ. 3ರಿಂದ 5ರವರೆಗೆ ನಡೆಸಲು ಉದ್ದೇಶಿಸಿರುವ ಇನ್ವೆಸ್ಟ್ ಕರ್ನಾಟಕ-2016 ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 2,500 ಹೂಡಿಕೆದಾರರು ಭಾಗಿಯಾಗುವ ನಿರೀಕ್ಷೆಯಿದೆ.
-ಆರ್.ವಿ.ದೇಶಪಾಂಡೆ, ಬೃಹತ್ ಕೈಗಾರಿಕಾ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News