×
Ad

ಸೋಲಾರ್ ವಿದ್ಯುತ್ ಯೋಜನೆ; ನ್ಯಾಯಾಂಗ ತನಿಖೆಗೆ ಜೆಡಿಎಸ್ ಆಗ್ರಹ

Update: 2016-01-29 23:08 IST

ಬೆಂಗಳೂರು, ಜ. 29: ರಾಜ್ಯದಲ್ಲಿ ನಡೆದಿರುವ ‘ಸೋಲಾರ್ ವಿದ್ಯುತ್’ ಯೋಜನೆ ಹಂಚಿಕೆಯ ಹಗರಣಗಳ ನ್ಯಾಯಾಂಗ ತನಿಖೆಗೆ ವಹಿಸಲು ರಾಜ್ಯಪಾಲರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ವಕ್ತಾರ ರಮೇಶ್ ಬಾಬು ಇಂದಿಲ್ಲಿ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 2 ಸಾವಿರ ಮೆ.ವ್ಯಾ ಸೋಲಾರ್ ವಿದ್ಯುತ್ ಉತ್ಪಾದನೆಗೆ ರಾಜ್ಯ ಸರಕಾರ ಮುಂದಾಗಿದ್ದು, ಈ ಸೋಲಾರ್ ವಿದ್ಯುತ್ ಉತ್ಪಾದನೆಯ ಒಂದು ಭಾಗವಾದ ಕೃಷಿ ವರ್ಗದ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದ್ದು, ಸದರಿ ಹಂಚಿಕೆಯ ಕುರಿತು ನ್ಯಾಯಾಂಗ ತನಿಖೆಗೆ ಜೆಡಿಎಸ್ ಈ ಹಿಂದೆಯೇ ಆಗ್ರಹಿಸಿತ್ತು.
ಸೋಲಾರ್ ವಿದ್ಯುತ್ ಯೋಜನೆಯ ಹಂಚಿಕೆಯನ್ನು ಆನ್‌ಲೈನ್ ಅರ್ಜಿಗಳ ಮುಖಾಂತರ ಕೇವಲ 7ನಿಮಿಷಗಳಲ್ಲಿ ಆಖೈರುಗೊಳಿಸಿ ಅವ್ಯವಹಾರ ನಡೆಸಲಾಗಿದೆ ಎಂಬುದು ವಿಧಾನಸಭೆಯಲ್ಲಿ ದೊಡ್ಡ ಚರ್ಚೆಯಾಗಿತ್ತು. ರೈತರ ಹೆಸರಿನಲ್ಲಿ ಕೆಲವೇ ವ್ಯಕ್ತಿಗಳಿಗೆ ನೀಡಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು ಎಂದು ತಿಳಿಸಿದ್ದಾರೆ. ಕೇರಳ ರಾಜ್ಯದಲ್ಲಿಯೂ ಸೋಲಾರ್ ವಿದ್ಯುತ್ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ತನಿಖೆಯೂ ನಡೆಯುತ್ತಿದೆ. ರಾಜ್ಯದಲ್ಲಿಯೂ ಅದೇ ರೀತಿಯ ಅಕ್ರಮ ಎಸಗಿರುವುದು ಮೇಲುನೋಟಕ್ಕೆ ಗೊತ್ತಾಗುತ್ತಿದೆ. ಆದುದರಿಂದ ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ರಮೇಶ್ ಬಾಬು ಪ್ರಕಟನೆಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News