ಪೊಲೀಸ್ ಇಲಾಖೆಯಲ್ಲಿ 25,749 ಹುದ್ದೆಗಳು ಖಾಲಿ; ಸರಕಾರದಿಂದ ಹೈಕೋರ್ಟ್‌ಗೆ ಮಾಹಿತಿ
ಬೆಂಗಳೂರು, ಜ.29: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಒಟ್ಟು 25,749 ಪೊಲೀಸ್ ಹುದ್ದೆಗಳು ಖಾಲಿಯಿವೆ ಎಂದು ಹೈಕೋರ್ಟ್‌ಗೆ ಸರಕಾರ ಮಾಹಿತಿ ನೀಡಿದೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ಅಂಕಿ-ಅಂಶ ಕುರಿತು ಮಾಹಿತಿ ನೀಡುವಂತೆ ಸರಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿತ್ತು. ಅದರಂತೆ ರಾಜ್ಯ ಗೃಹ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ನೇಮಕಾತಿ ಮತ್ತು ತರಬೇತಿ ವಿಭಾಗ) ರಾಘವೇಂದ್ರ ಔರಾದ್‌ಕರ್ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿ ಈ ಮಾಹಿತಿ ನೀಡಿದರು.
ರಾಜ್ಯದಲ್ಲಿ ಎ ಯಿಂದ ಡಿ ವೃಂದದವರೆಗೆ ಒಟ್ಟು 99,189 ಪೊಲೀಸ್ ಕಾರ್ಯ ನಿರ್ವಾಹಕ ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ ಸದ್ಯ 73,440 ಹುದ್ದೆಗಳು ಭರ್ತಿಯಾಗಿದ್ದು, 25,749 ಹುದ್ದೆಗಳು ಖಾಲಿಯಿವೆ. ಇದರಲ್ಲಿ 10 ಸಾವಿರಕ್ಕೂ ಹೆಚ್ಚು ಪೊಲೀಸ್ ಪೇದೆಗಳ ಹುದ್ದೆಗಳು ಖಾಲಿಯಿವೆ ಎಂದು ಮಾಹಿತಿ ನೀಡಲಾಗಿದೆ.
ಇನ್ನು ಸಚಿವಾಲಯ ಮತ್ತು ತಾಂತ್ರಿಕ ವಿಭಾಗದಲ್ಲಿ 1,03,457 ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 74,389 ಹುದ್ದೆಗಳು ಭರ್ತಿಯಾಗಿದೆ. 27,068 ಹುದ್ದೆಗಳು ಖಾಲಿಯಿವೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ. ಒಟ್ಟಾರೆ ಎ ಯಿಂದ ಡಿ ವೃಂದದವರೆಗೆ ಶೇ.25ರಷ್ಟು ಪೊಲೀಸ್ ಕಾರ್ಯ ನಿರ್ವಾಹಕ ಹುದ್ದೆಗಳು ಭರ್ತಿಯಾಗದೆ ಖಾಲಿಯಿವೆ.
2015-2016ನೆ ಸಾಲಿನಲ್ಲಿ ಒಟ್ಟು 2,442 ಪೊಲೀಸ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಸದ್ಯ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. 2016-2017ರ ಸಾಲಿನಲ್ಲಿ 1,365 ಹುದ್ದೆಗಳನ್ನು ಭರ್ತಿ ಮಾಡುವ ಪ್ರಸ್ತಾಪವಿದೆ. ಖಾಲಿಯಿರುವ ಹುದ್ದೆ ಗಳನ್ನು ಶೇ.80ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮತ್ತು ಶೇ.20ರಷ್ಟು ಭಡ್ತಿ ನೀಡಿ ಮೂಲಕ ಭರ್ತಿ ಮಾಡಲಾಗುವುದು ಎಂದು ಪ್ರಮಾಣ ಪತ್ರದಲ್ಲಿ ಮಾಹಿತಿ ನೀಡಲಾಗಿದೆ.
ಈ ಪ್ರಮಾಣಪತ್ರವನ್ನು ದಾಖಲಿಸಿಕೊಂಡ ನ್ಯಾ.ಎ. ಎನ್.ವೇಣುಗೋಪಾಲ ಗೌಡ ಅವರಿದ್ದ ಏಕಸದಸ್ಯ ಪೀಠ, ಖಾಲಿಯಿರುವ ಪೊಲೀಸ್ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು ಎಂದು ನಿರ್ದೇಶಿಸಿತು. ಈ ಮಧ್ಯೆ ಬೆಂಗಳೂರಿನ ಏಳು ವಿಭಾಗದ ಪೊಲೀಸ್ ಠಾಣೆಯಲ್ಲಿ ಹಲವು ವರ್ಷಗಳಿಂದ ತನಿಖೆ ಪೂರ್ಣ ಗೊಳ್ಳದ ಹಾಗೂ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ಪ್ರಕರಣಗಳ ಮಾಹಿತಿ ಸಂಗ್ರಹಿಸಲು ಪೊಲೀಸ್ ಆಯುಕ್ತರು ಫೆ.27ರೊಳಗೆ ಎಲ್ಲ ವಲಯಗಳ ಡಿಸಿಪಿಗಳೊಂದಿಗೆ ಚರ್ಚಿಸಬೇಕು. ಡಿಸಿಪಿಗಳು ಆಯುಕ್ತರಿಗೆ ವರದಿಯನ್ನು ಸಲ್ಲಿಸಬೇಕು. ಆ ವರದಿಯನ್ನು ಪೊಲೀಸ್ ಆಯುಕ್ತರು ಮತ್ತೆ ಕೂಲಂಕಶವಾಗಿ ಪರಿಗ ಣಿಸಿ ಮಾ.3ರಂದು ಕೋರ್ಟ್‌ಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದ ಪೀಠ ವಿಚಾರಣೆ ಮುಂದೂಡಿತು.