ಕೇಂದ್ರರೈಲ್ವೆಸಚಿವರಿಗೆ ಸಂಸದರಿಂದ ಮನವಿ
ಚಾಮರಾಜನಗರ, ಜ.29: ಸಂಸದ ಆರ್.ಧ್ರುವನಾರಾಯಣ, ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರನ್ನು ಖುದ್ದು ಭೇಟಿ ಮಾಡಿ ಪ್ರಸಕ್ತ ರೈಲ್ವೆ ಬಜೆಟ್‌ನಲ್ಲಿ ಈ ಅನೇಕ ಬೇಡಿಕೆಗಳನ್ನು ಅಳವಡಿಸಿಕೊಳ್ಳಲು ಕೋರಿದ್ದಾರೆ.
ಚಾಮರಾಜನಗರ-ಕೊಳ್ಳೇಗಾಲ-ಮಳವಳ್ಳಿ-ಕನಕಪುರ-ಬೆಂಗಳೂರು ಮಾರ್ಗದ ರೈಲ್ವೆ ಕಾಮಗಾರಿಗೆ ರೂ.1,382.78 ಕೋಟಿ ರೂ.ಗೆ ಈಗಾಗಲೇ ಮಂಜೂರಾತಿ ದೊರೆತಿದ್ದು, ಇದುವರೆಗೆ ಕೇವಲ ರೂ.10 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಈ ಕಾಮಗಾರಿಯ ಶೀಘ್ರ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಉಳಿಕೆ ಹಣವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.
ಸಾರ್ವಜನಿಕರ ಬೇಡಿಕೆಗೆ ಅನುಗುಣ ವಾಗಿ ಮೈಸೂರು-ಶಿವಮೊಗ್ಗ ಮತ್ತು ಮೈಸೂರು-ಹುಬ್ಬಳ್ಳಿ-ದಾರವಾಡ ರೈಲು ಸಂಚಾರವನ್ನು ಚಾಮರಾಜನಗರ ರೈಲು ನಿಲ್ದಾಣದ ವರೆಗೆ ವಿಸ್ತರಣೆ ಮಾಡುವಂತೆ ಮನವಿ ಮಾಡಿದ್ದಾರೆ.
ಬಹಳ ದೂರದಿಂದ ಆಗಮಿಸುವ ರೈಲುಗಳು ಕೋಚ್ ನಿರ್ವಹಣೆ ಮತ್ತು ಕ್ಲೀನಿಂಗ್‌ಗಾಗಿ ಮೈಸೂರಿನ ರೈಲು ನಿಲ್ದಾಣದಲ್ಲಿ ಅನೇಕ ಗಂಟೆಗಳ ಕಾಲ ನಿಂತಿರುತ್ತದೆ. ಆದ್ದರಿಂದ ಚಾಮರಾಜನಗರ ರೈಲು ನಿಲ್ದಾಣದಲ್ಲಿ ರೈಲುಗಳ ಕೋಚ್ ನಿರ್ವಹಣೆ ಮತ್ತು ಕ್ಲೀನಿಂಗ್ ಯೂನಿಟ್ ಸ್ಥಾಪನೆ ಮಾಡಿದರೆ ದೂರ ಮಾರ್ಗದ ಅನೇಕ ರೈಲುಗಳು ಚಾಮರಾಜನಗರ ರೈಲುನಿಲ್ದಾಣಕ್ಕೆ ಬರುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದು ಸಂಸದ ಆರ್.ಧ್ರುವವನಾರಾಯಣ್ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭುರವರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.