ಸಿನೆಮಾಗಳ ನಡುವೆ ವರ್ಗೀಕರಣ ಬೇಡ: ನಟಿ ಜಯಾಬಚ್ಚನ್
8ನೆ ಅಂತಾರಾಷ್ಟ್ರೀಯ ಸಿನಿಮೋತ್ಸವ
ಬೆಂಗಳೂರು, ಜ.28: ಮಕ್ಕಳ ಸಿನೆಮಾ, ಕಲಾತ್ಮಕ ಸಿನೆಮಾ ಹಾಗೂ ವಾಣಿಜ್ಯ ಸಿನೆಮಾ ಎಂದು ವರ್ಗೀಕರಿಸಬಾರದು. ಇದರಿಂದ ಸಿನೆಮಾಗಳು ಎಲ್ಲ ವರ್ಗದ ಜನತೆಯನ್ನು ತಲುಪಲು ವಿಫಲವಾಗುತ್ತವೆ ಎಂದು ರಾಜ್ಯಸಭಾ ಸದಸ್ಯೆ ಹಾಗೂ ಹಿರಿಯ ನಟಿ ಜಯಾ ಬಚ್ಚನ್ ಅಭಿಪ್ರಾಯಿಸಿದರು.
ಶುಕ್ರವಾರ ವಾರ್ತಾ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡಮಿ ನಗರದ ಒರಿಯನ್ ಮಾಲ್‌ನಲ್ಲಿ ಆಯೋಜಿಸಿರುವ 8ನೆ ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಸಿನೆಮಾಗಳಲ್ಲಿ ಕಥೆಯ ಸಾರಾಂಶ ಒಂದು ವರ್ಗವನ್ನು ಕೇಂದ್ರೀಕರಿಸಿರುತ್ತದೆ. ಇದನ್ನೇ ಆಧಾರವಾಗಿಟ್ಟು ಕೊಂಡು ಸಿನೆಮಾವನ್ನು ಒಂದು ಸೀಮಿತ ವರ್ಗಕ್ಕೆ ಸೇರಿಸಬಾರದೆಂದು ತಿಳಿಸಿದರು.
ಚಿತ್ರನಿರ್ದೇಶಕರು ಹಾಗೂ ನಿರ್ಮಾಪಕರು ಸಾಮಾಜಿಕ ಚಿತ್ರಗಳತ್ತ ಹೆಚ್ಚಿನ ಒಲವು ತೋರಬೇಕು. ಒಂದು ಸಿನೆಮಾಗೆ ಕೋಟ್ಯಂತರ ರೂ. ಖರ್ಚು ಮಾಡಿ ತಯಾರಿಸುವ ಆ ಸಿನೆಮಾದಿಂದ ಸಮಾಜಕ್ಕೆ ಕಿಂಚಿತ್ತಾದರು ಉಪಯೋಗವಾಗಬೇಕು. ಇತ್ತೀಚಿನ ದಿನಗಳಲ್ಲಿ ಸಮಾಜಕ್ಕೆ ಪೂರಕವಾಗುವಂತಹ ಸಿನೆಮಾಗಳು ಮೂಡಿಬರುತ್ತಿವೆ ಎಂದು ಜಯಾ ಬಚ್ಚನ್ ಮೆಚ್ಚುಗೆ ವ್ಯಕ್ತಪಡಿಸಿದರು.
ಹಿಂದಿ ಸಿನೆಮಾಗಳು ಮಾತ್ರ ಭಾರತೀಯ ಸಿನೆಮಾಗಳೆಂದು ವಿದೇಶಿ ಜನತೆ ತಿಳಿದು ಕೊಂಡಿದ್ದಾರೆ. ಆದರೆ, ವಾಸ್ತವವಾಗಿ ದೇಶದ ಎಲ್ಲ ಪ್ರಾದೇಶಿಕ ಚಿತ್ರಗಳು ಭಾರತೀಯ ಸಿನೆಮಾಗಳೇ ಆಗಿವೆ. ಆಯಾ ರಾಜ್ಯದ ಭಾಷೆ, ಸಂಸ್ಕೃತಿ, ಜನಜೀವನ ಕುರಿತ ದೇಶದ ಎಲ್ಲ ಜನತೆಗೂ ತಿಳಿಸುವಲ್ಲಿ ಸಿನೆಮಾಗಳ ಪಾತ್ರ ಅಪಾರವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಫೆಸ್ಟಿವಲ್ ಪುಸ್ತಕ ಬಿಡುಗಡೆ ಮಾಡಿದರು. ನಟ ಅಶೋಕ್ ಅಮತ್‌ರಾಜ್, ತೆಲುಗು ನಟ ವೆಂಕಟೇಶ್, ಕನ್ನಡ ನಟ-ನಟಿಯರಾದ ಶಿವರಾಜ್‌ಕುಮಾರ್, ಅಂಬರೀಶ್, ಉಮಾಶ್ರೀ, ಡಾ.ಜಯಮಾಲಾ, ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಚಿತ್ರೋತ್ಸವದತ್ತ ಯುವಕರ ದಂಡು: ರಾಜಾಜಿನಗರದ ಒರಿಯನ್ ಮಾಲ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಯುವಕ, ಯುವತಿಯರ ಸಂಖ್ಯೆ ಹೆಚ್ಚಿತ್ತು. ಚಿತ್ರಗಳನ್ನು ನೋಡಿ ಒಂದು ಕಡೆ ಗುಂಪು ಸೇರಿ ಚಿತ್ರದ ಕುರಿತು ಚರ್ಚೆ ನಡೆಸುತ್ತಿದ್ದದ್ದು ಸಾಮಾನ್ಯವಾಗಿತ್ತು.
ಶಬ್ದ ತಾಂತ್ರಿಕತೆಗೆ ಹೆಚ್ಚಿನ ಪ್ರಾಶಸ್ತ್ಯ ಅಗತ್ಯ: ರಸೂಲ್
ಬೆಂಗಳೂರು, ಜ.29: ಸಿನೆಮಾ ಕ್ಷೇತ್ರಕ್ಕೆ ತೀರ ಅಗತ್ಯವಾಗಿರುವ ‘ಶಬ್ದ ತಾಂತ್ರಿಕತೆ’ ಒಂದು ಸೃಜನಾತ್ಮಕ ಕಲೆಯಾಗಿದ್ದು, ಇದನ್ನು ಹೆಚ್ಚು ಪ್ರಚಾರ ಪಡಿಸಬೇಕಾದ ಅಗತ್ಯವಿದೆ ಎಂದು ಚಿತ್ರ ಚಿತ್ರ ನಿರ್ದೇಶಕ ರಸೂಲ್ ಪೂಕುಟ್ಟಿ ತಿಳಿಸಿದ್ದಾರೆ.
ನಗರದ ಒರಿಯನ್ ಮಾಲ್ ಆಯೋಜಿಸಿರುವ 8ನೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶಬ್ದ ತಾಂತ್ರಿಕತೆ ಕುರಿತು ಮಾತನಾಡಿದ ಅವರು, ಯಾವುದೆ ಸಿನೆಮಾ ಯಶಸ್ವಿಯಾಗಬೇಕಾದರೆ ಶಬ್ದ ತಾಂತ್ರಿಕತೆಯ ನೈಪುಣ್ಯ ಇರಲೇಬೇಕು. ಆದರೆ, ಈ ಕಲೆಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಆಧುನಿಕ ತಂತ್ರಜ್ಞಾನಕ್ಕೆ ತೆರೆದುಕೊಂಡಿರುವ ಸಿನೆಮಾ ನೈಜತೆಯಿಂದ ದೂರ ಸರಿಯುತ್ತಿದೆ. ಪ್ರತಿ ತುಣುಕನ್ನು ಡಬ್ಬಿಂಗ್ ಮಾಡಿ ಆಕರ್ಷಣೆಗೊಳಿಸಲಾಗುತ್ತಿದ್ದು, ಆ ಮೂಲಕ ಚಿತ್ರ ವೀಕ್ಷಕರಿಗೆ ವಂಚಿಸಲಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ನಡುವೆಯು ನೈಜತೆಯನ್ನು ಉಳಿಸಿಕೊಳ್ಳುವತ್ತ ಹೆಚ್ಚಿನ ಆಸಕ್ತಿ ವಹಿಸಬೇಕೆಂದು ಅವರು ತಿಳಿಸಿದರು.