‘ಇನ್ವೆಸ್ಟ್-ಕರ್ನಾಟಕ’: ಸರಕು ಸಾಗಣೆ ವಾಹನಗಳಿಗೆ ನಿಷೇಧ
ಬೆಂಗಳೂರು, ಜ. 29: ‘ಇನ್ವೆಸ್ಟ್-ಕರ್ನಾಟಕ’ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಫೆ.1ರಿಂದ ಫೆ.5ರ ವರೆಗೆ ಬೆಳಗ್ಗೆ 6ರಿಂದ ರಾತ್ರಿ 10ಗಂಟೆಯವರೆಗೆ ಎಲ್ಲ ರೀತಿಯ ಸಣ್ಣ ಮತ್ತು ಮಧ್ಯಮ ಸರಕು ಸಾಗಣೆಯ ವಾಹನಗಳ ಸಂಚಾರವನ್ನು ಕೆಳಕಂಡ ರಸ್ತೆಗಳಲ್ಲಿ ನಿಷೇಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಮೇಘರಿಕ್ ಆದೇಶಿಸಿದ್ದಾರೆ.
ಬಳ್ಳಾರಿ ರಸ್ತೆ-ಯಲಹಂಕದಿಂದ ಮೇಖ್ರಿವೃತ್ತದ ವರೆಗೆ, ರಮಣಮಹರ್ಷಿ ರಸ್ತೆ- ಮೇಖ್ರಿವೃತ್ತದಿಂದ ಕಾವೇರಿ ಜಂಕ್ಷನ್‌ವರೆಗೆ, ಸ್ಯಾಂಕಿ ರಸ್ತೆ-ರಾಜಭವನದಿಂದ ಯಶವಂತಪುರ ವೃತ್ತದ ವರೆಗೆ, ಸಿವಿ ರಾಮನ್ ರಸ್ತೆ-ಐಐಎಸ್‌ಸಿಯಿಂದ ಮೇಖ್ರಿ ವೃತ್ತದ ವರೆಗೆ, ಜಯಮಹಲ್ ರಸ್ತೆ-ಮೇಖ್ರಿ ವೃತ್ತದಿಂದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದವರೆಗೆ.
ಕನ್ನಿಂಗ್‌ಹ್ಯಾಮ್ ರಸ್ತೆ-ಬಾಳೇಕುಂದ್ರಿ ವೃತ್ತದಿಂದ ಲೀಮೆರಿಡಿಯನ್ ಹೊಟೇಲ್ ವರೆಗೆ, ಇನ್‌ಫೆಂಟ್ರಿ ರಸ್ತೆ-ಅಲಿ ಆಸ್ಕರ್ ರಸ್ತೆಯಿಂದ ಸಂಚಾರ ಕೇಂದ್ರ ಕಚೇರಿ ವರೆಗೆ, ರಾಜಭವನ ರಸ್ತೆ-ಸಿಟಿಒಯಿಂದ ಬಸವೇಶ್ವರ ವೃತ್ತದ ವರೆಗೆ, ರೇಸ್ ಕೋರ್ಸ್ ರಸ್ತೆ-ಬಸವೇಶ್ವರ ವೃತ್ತದಿಂದ ಆನಂದ ರಾವ್ ವೃತ್ತದ ವರೆಗೆ, ಕುಮಾರಕೃಪ ರಸ್ತೆ-ವಿಂಡ್ಸರ್ ಮ್ಯಾನರ್ ಜಂಕ್ಷನ್‌ನಿಂದ ಶಿವಾನಂದ ವೃತ್ತದವರೆಗೆ.
ಗಣ್ಯವ್ಯಕ್ತಿಗಳ ಹಾಗೂ ಬಂಡವಾಳ ಹೂಡಿಕೆದಾರರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಮಾವೇಶ ನಡೆಯುವ ಸ್ಥಳ ಹಾಗೂ ತಂಗುವ ಸ್ಥಳಗಳಿಗೆ ಸಂಚರಿಸುವ ಮಾರ್ಗಗಳಲ್ಲಿ ಉತ್ತಮ ಸಂಚಾರ ವ್ಯವಸ್ಥೆ ಹಾಗೂ ಸುರಕ್ಷತೆಯನ್ನು ಜಾರಿ ಮಾಡಲು, ಸಮಾವೇಶ ನಡೆಯುವ ಸ್ಥಳದ ಸುತ್ತಮುತ್ತಲ ಪ್ರದೇಶ ಮತ್ತು ಸಮಾವೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ, ಎಲ್ಲ್ಲ ರೀತಿಯ ಸಣ್ಣ ಮತ್ತು ಮಧ್ಯಮ ಗಾತ್ರದ ಗೂಡ್ಸ್ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
‘ಇನ್ವೆಸ್ಟ್ ಕರ್ನಾಟಕ’ ಸಮಾವೇಶದ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಹಾಗೂ ಗಣ್ಯಾತಿಗಣ್ಯ ವ್ಯಕ್ತಿಗಳ ಹಾಗೂ ಸಮಾವೇಶದಲ್ಲಿ ಪಾಲ್ಗೊಳ್ಳುವ ದೇಶ-ವಿದೇಶಿಯ ಪ್ರತಿನಿಧಿಗಳ ಸುಗಮ ಸಂಚಾರ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ಸಂಚಾರ ವ್ಯವಸ್ಥೆ ತಾತ್ಕಾಲಿಕವಾಗಿ ಜಾರಿ ಮಾಡಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಪ್ರಕಟನೆಯಲ್ಲಿ ಕೋರಿದ್ದಾರೆ.