×
Ad

ಸದ್ಯಕ್ಕೆ ಶಿವಮೊಗ್ಗಕ್ಕೆ ‘ಸ್ಮಾರ್ಟ್ ಸಿಟಿ’ ಭಾಗ್ಯವಿಲ್ಲ

Update: 2016-01-30 19:29 IST

 ಎಪ್ರಿಲ್‌ನಲ್ಲಿ ಅವಕಾಶವಿಲ್ಲ - ಆಗಸ್ಟ್‌ವರೆಗೂ ವೇಯ್ಟಿಂಗ್ ಲೀಸ್ಟ್‌ನಲ್ಲಿ!!

 ಶಿವಮೊಗ್ಗ, ಜ. 30: ಸದ್ಯದ ಮಟ್ಟಿಗೆ ಶಿವಮೊಗ್ಗ ನಗರವು ‘ಸ್ಮಾರ್ಟ್ ಸಿಟಿ’ ಯೋಜನೆಯಡಿ ಅಭಿವೃದ್ಧಿಯಾಗುವ ಭಾಗ್ಯವಿಲ್ಲವಾಗಿದೆ. ಇದಕ್ಕಾಗಿ ಏಳೆಂಟು ತಿಂಗಳು ಕಾಯುವುದು ಅನಿವಾರ್ಯವಾಗಿದೆ. ಮುಂಬರುವ ಆಗಸ್ಟ್ ತಿಂಗಳಲ್ಲಿ ನಡೆಯುವ 2ನೆ ಸುತ್ತಿನ ಆಯ್ಕೆವರೆಗೂ ಕಾಯಬೇಕಾಗಿದೆ. ಒಂದು ವೇಳೆ 2ನೆ ಸುತ್ತಿನಲ್ಲಿಯೂ ಆಯ್ಕೆಯಾಗದಿದ್ದರೆ, 2017 ನೆ ವರ್ಷದವರೆಗೂ ಕಾಯಲೇಬೇಕಾಗಿರುವುದು ಅನಿವಾರ್ಯವಾಗಿದೆ.

ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಎ.ಆರ್.ರವಿಯವರು ಶನಿವಾರ ‘ಸ್ಮಾರ್ಟ್ ಸಿಟಿ’ ಯೋಜನೆಗೆ ಸಂಬಂಧಿಸಿದಂತೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು. ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಪ್ರಥಮ ಹಂತದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 20 ನಗರಗಳ ಆಯ್ಕೆ ಮಾಡಲು 97 ನಗರಗಳಿಂದ ಸಲ್ಲಿಸಿದ ಪ್ರಸ್ತಾವನೆಯನ್ನು ಹಿರಿಯ ಅಧಿಕಾರಿಗಳ ನೇತೃತ್ವದ ತಜ್ಞರ ತಂಡವು ವೌಲ್ಯಮಾಪನ ನಡೆಸಿದೆ.

ಈ ವೌಲ್ಯಮಾಪನದಲ್ಲಿ ಅತಿ ಹೆಚ್ಚು ಅಂಕಗಳಿಸಿದ 20 ನಗರಗಳನ್ನು ಆಯ್ಕೆ ಮಾಡಲಾಗಿದೆ. ಶಿವಮೊಗ್ಗ ನಗರವು 26ನೆ ಸ್ಥಾನ ಪಡೆದುಕೊಂಡಿದೆ. ಶೇ. 54.36 ರಷ್ಟು ಅಂಕ ಗಳಿಸಿದೆ. ಪ್ರಥಮ ಹಂತದಲ್ಲಿ 20ನೆ ಸ್ಥಾನ ಪಡೆದುಕೊಂಡಿರುವ ನಗರವು ಶೇ. 55.47 ರಷ್ಟು ಪಡೆದುಕೊಂಡಿದ್ದು, ಈ ನಗರಕ್ಕೆ ಹೋಲಿಕೆ ಮಾಡಿದರೆ ಶಿವಮೊಗ್ಗವು ಕೇವಲ ಶೇ. 1.10 ರಷ್ಟು ಅಂಕ ಕಡಿಮೆ ಪಡೆದುಕೊಂಡಿದೆೞಎಂದು ಮಾಹಿತಿ ನೀಡಿದರು. ಪ್ರಥಮ ಹಂತದಲ್ಲಿ ಶಿವಮೊಗ್ಗ ಆಯ್ಕೆಯಾಗುವ ವಿಶ್ವಾಸವಿದ್ದುದು ನಿಜ. ಈ ನಿಟ್ಟಿನಲ್ಲಿ ಸಾಕಷ್ಟು ಪೂರ್ವಸಿದ್ಧತೆ ಮಾಡಿಯೇ ಸಮಗ್ರ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಕೂದಲೆಳೆ ಅಂತರದಲ್ಲಿ ಅವಕಾಶ ತಪ್ಪಿದೆ. 2ನೆ ಹಂತದಲ್ಲಿ ಶಿವಮೊಗ್ಗ ಆಯ್ಕೆಯಾಗುವ ವಿಶ್ವಾಸವಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅವಕಾಶವಿಲ್ಲ:  ಕೇಂದ್ರ ಸರಕಾರವು ಮುಂಬರುವ ಎಪ್ರಿಲ್‌ನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 23 ನಗರಗಳ ವೌಲ್ಯಮಾಪನ ನಡೆಸುತ್ತಿದ್ದು, ಈ ಪ್ರಕ್ರಿಯೆಯಲ್ಲಿ ಶಿವಮೊಗ್ಗ ನಗರಕ್ಕೆ ಅವಕಾಶವಿಲ್ಲವಾಗಿದೆ. ಪ್ರಥಮ ಹಂತದಲ್ಲಿ ಯಾವ್ಯಾವ ರಾಜ್ಯಗಳಿಗೆ ಆದ್ಯತೆ ಸಿಕ್ಕಿಲ್ಲವೊ ಅಂತಹ ರಾಜ್ಯಗಳಿಗೆ ಮಾತ್ರ ಅವಕಾಶ ಲಭ್ಯವಾಗಲಿದೆ. ಆಗಸ್ಟ್ ತಿಂಗಳಲ್ಲಿ 2ನೆ ಹಂತದ ವೌಲ್ಯಮಾಪನ ಪ್ರಕ್ರಿಯೆ ನಡೆಯಲಿದೆ. ಆಗ ಮಾತ್ರ ಶಿವಮೊಗ್ಗ ನಗರಕ್ಕೆ ಆಯ್ಕೆಯ ಅವಕಾಶ ಲಭ್ಯವಾಗಲಿದೆ ಎಂದು ಆಯುಕ್ತ ಎ.ಆರ್.ರವಿಯವರು ಸ್ಪಷ್ಟಪಡಿಸಿದ್ದಾರೆ.

ಪ್ರಥಮ ಹಂತದಲ್ಲಿ ಶಿವಮೊಗ್ಗ ನಗರ ಏಕೆ ಆಯ್ಕೆಯಾಗಲಿಲ್ಲ? ಯಾವ ವಿಷಯಗಳಲ್ಲಿ ಕಡಿಮೆ ಅಂಕ ಬಂದಿದೆ? ಎಂಬುವುದರ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಾಗಿದೆ. ಇಷ್ಟರಲ್ಲಿಯೇ ಕೇಂದ್ರ ಸರಕಾರ ಈ ಕುರಿತಂತೆ ಸಮಗ್ರ ಮಾಹಿತಿ ಕಳುಹಿಸಿಕೊಡಲಿದೆ. ಪರಿಶೀಲನೆಯ ನಂತರ ಯಾವ ವಿಭಾಗಗಳಲ್ಲಿ ಕಡಿಮೆ ಅಂಕ ಬಂದಿದೆ ಎಂಬುವುದು ತಿಳಿಯಲಿದೆ ಎಂದು ಸುದ್ದಿಗಾರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

 ಸ್ಮಾರ್ಟ್ ಸಿಟಿ ಯೋಜನೆಯ ನಿಯಾಮಾವಳಿಯ ಪ್ರಕಾರ, ಪ್ರಸ್ತುತ ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಷ್ಕರಿಸಿ ಮತ್ತೊಮ್ಮೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಬೇಕಾಗುತ್ತದೆ. ಈ ಕುರಿತಂತೆ ಕೇಂದ್ರದಿಂದ ಸೂಚನೆ ಬಂದ ಕೂಡಲೇ ಪ್ರಸ್ತಾವನೆ ಪರಿಷ್ಕರಿಸಿ ಕಳುಹಿಸಿ ಕೊಡಲಾಗುವುದು. ಇಷ್ಟರಲ್ಲಿಯೇ ಈ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ ಎಂದು ಎ.ಆರ್.ರವಿಯವರು ಮಾಹಿತಿ ನೀಡಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕರ್ನಾಟಕದಿಂದ ಆಯ್ಕೆಯಾದ ಆರು ನಗರಗಳ ರ್ಯಾಂಕಿಂಗ್ ಲೀಸ್ಟ್‌ನಲ್ಲಿ ಪ್ರಥಮ ಸ್ಥಾನದಲ್ಲಿದ್ದ ಬೆಳಗಾಂ, ಶಿವಮೊಗ್ಗ ಹಾಗೂ ಮಂಗಳೂರು ನಗರಗಳು ಸಮಾನ ಅಂಕ ಪಡೆದುಕೊಂಡಿದ್ದವು. ಆದರೆ ಪ್ರಥಮ ಹಂತದ ಆಯ್ಕೆಯ ವೇಳೆ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿರುವುದಕ್ಕೆ ಕಾರಣವಾದ ಅಂಶಗಳ ಬಗ್ಗೆ ಪರಿಶೀಲನೆ ನಡೆಸಬೇಕುೞಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News