×
Ad

ಅನುಪಯುಕ್ತ ಕಾನೂನುಗಳ ರದ್ದತಿ ಪ್ರಗತಿಯಲ್ಲಿ: ಕೇಂದ್ರ ಸಚಿವ ಅಬ್ಬಾಸ್ ನಖ್ವಿ

Update: 2016-01-30 23:26 IST

ಬೆಂಗಳೂರು, ಜ.30: ಜನಸಾಮಾನ್ಯರ ಪಾಲಿಗೆ ಅನುಪಯುಕ್ತವಾಗಿ ರುವ ನೂರಾರು ಕಾನೂನುಗಳು ಇಂದಿಗೂ ಅಸ್ತಿತ್ವದಲ್ಲಿದ್ದು, ಅವುಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕೇಂದ್ರ ಸಂಸದೀಯ ಹಾಗೂ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ.
ಶನಿವಾರ ಆನೇಕಲ್ ತಾಲೂಕಿನ ಗುಳಿಮಂಗಲ ಗ್ರಾಮದಲ್ಲಿ ಎನ್.ಎ.ಗ್ಲೋಬಲ್ ಕಾನೂನು ಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಎಎಐಡಿ (ಅಮೆರಿಕನ್ ಅಕಾಡಮಿ ಆಫ್ ಇಂಪ್ಲಾಂಟ್ ಡೆನ್ಸಿಟಿ) ಮ್ಯಾಕ್ಸಿಕೋರ್ಸ್‌ನ 12ನೆ ಘಟಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 ವೈದ್ಯಕೀಯ ಕ್ಷೇತ್ರವು ಕಾಲಕ್ಕೆ ತಕ್ಕಂತೆ ಬದಲಾವಣೆಯಾಗುತ್ತ ಮುಂದೆ ಸಾಗಿದೆ. ಆದರೆ, ನಮಲ್ಲಿ ಇಂದಿಗೂ 1840ರಿಂದ ಈವರೆಗಿನ ಕಾನೂನುಗಳು ಅಸ್ತಿತ್ವದಲ್ಲಿವೆ. ಪ್ರತಿಯೊಂದು ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಕಾನೂನುಗಳು ಜಾರಿಯಲ್ಲಿವೆ. ಆದುದರಿಂದ, ನಮ್ಮ ಸರಕಾರ ಕಳೆದ ಎರಡು ವರ್ಷಗಳಿಂದ 100ಕ್ಕೂ ಹೆಚ್ಚು ಅನುಪಯುಕ್ತ ಕಾನೂನುಗಳನ್ನು ರದ್ದುಪಡಿಸಿದೆ ಎಂದು ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದರು.
 ನಮ್ಮ ದೇಶದಲ್ಲಿ ಪ್ರತಿಭೆಗಳ ಕೊರತೆಯಿಲ್ಲ. ದೇಶದ ಎದುರಿನ ಸವಾಲುಗಳು, ಅವುಗಳನ್ನು ಪರಿಹರಿಸುವ ಹಾಗೂ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಬೇಕು. ಏಕಗವಾಕ್ಷಿ ಪದ್ಧತಿಯ ಮೂಲಕ ಸರಕಾರದ ನೀತಿ, ತೀರ್ಮಾನಗಳು ಜನರಿಗೆ ತಲುಪಬೇಕು ಎಂದು ಅವರು ಅಭಿಪ್ರಾಯಪಟ್ಟರು.
ವಿಶ್ವದಲ್ಲಿ ಪ್ರತಿದಿನ ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿದೆ. ನಮ್ಮ ದೇಶದ ಯುವ ಸಮೂಹ ಆಧುನಿಕ ತಂತ್ರಜ್ಞಾನದ ಜೊತೆಗೆ ಮುಂದು ವರೆಯಬೇಕಿದೆ. ಮೊದಲು ರಸ್ತೆ ಬದಿಯಲ್ಲಿ ದಂತ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು ದಂತ ಚಿಕಿತ್ಸೆ ವೈದ್ಯಕೀಯ ಲೋಕದ ಪ್ರತಿಷ್ಠಿತ ಉದ್ಯೋಗವಾಗಿದೆ ಎಂದು ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದರು.
ವೈದ್ಯಕೀಯ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳನ್ನು ಗಮನಿಸಿದರೆ, ಮುಂದಿನ 2-4 ವರ್ಷಗಳಲ್ಲಿ ದಂತ ವೈದ್ಯಕೀಯಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಕೋರ್ಸುಗಳು ಆರಂಭವಾದರೂ ಅಚ್ಚರಿ ಪಡಬೇಕಿಲ್ಲ. ಇಂದಿನ ಘಟಿಕೋತ್ಸವದಲ್ಲಿ ಪದವಿ ಪಡೆಯುತ್ತಿರುವವರು ಮುಂದಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕ ಹಾಗೂ ಆದರ್ಶಪ್ರಾಯವಾಗಿರಬೇಕು ಎಂದು ಅವರು ಕರೆ ನೀಡಿದರು.
ಅಮೆರಿಕನ್ ಅಕಾಡಮಿ ಆಫ್ ಇಂಪ್ಲಾಂಟ್ ಡೆನ್ಸಿಟಿಯ ಅಧ್ಯಕ್ಷ ಡಾ.ಶಂಕರ್ ಅಯ್ಯರ್ ಮಾತನಾಡಿ, ದಂತ ವೈದ್ಯಕೀಯ ಚಿಕಿತ್ಸಾ ಪದ್ಧತಿಯ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಾರತದಲ್ಲಿ ಅಧ್ಯಯನ ನಡೆಸಿರುವ ವೈದ್ಯರಿಗೆ ವಿದೇಶದಲ್ಲಿಯೂ ಹೆಚ್ಚಿನ ಅವಕಾಶಗಳು ಲಭ್ಯವಾಗುತ್ತಿವೆ ಎಂದರು.
ರೋಗಿಗಳಿಗೆ ಅತ್ಯುತ್ತಮವಾದ ಚಿಕಿತ್ಸೆ ನೀಡಿ, ಅವರ ಸಮಸ್ಯೆಗಳನ್ನು ಪರಿಹರಿಸುವುದು ವೈದ್ಯರ ಮೊದಲ ಕರ್ತವ್ಯವಾಗಬೇಕು. ವೈದ್ಯಕೀಯ ಪದವಿ ಕೇವಲ ಉದ್ಯೋಗಕ್ಕಷ್ಟೇ ಸೀಮಿತವಲ್ಲ. ಸಮಾಜ ಸೇವೆಗೂ ಬಳಕೆಯಾಗಬೇಕು. ಆಗ ಮಾತ್ರ ಶಿಕ್ಷಣದ ನೈಜವಾದ ಆಶಯ ಸಾಕಾರ ಗೊಳ್ಳುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಎನ್.ಎ.ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಎಂ. ಅಲ್ತಾಫ್ ಹುಸೇನ್, ರಾಜಸ್ಥಾನದ ಆರೋಗ್ಯ ವಿಜ್ಞಾನಗಳ ವಿವಿ ಉಪ ಕುಲಪತಿ ಡಾ.ರಾಜಾಬಾಬು ಪನ್ವರ್, ಎಎಐಡಿ ಮ್ಯಾಕ್ಸಿಕೋರ್ಸ್ ಏಷಿಯಾದ ಸಹ ನಿರ್ದೇಶಕ ಡಾ.ವಡಿವೇಲ್ ಕುಮಾರ್, ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ಉಪಾಧ್ಯಕ್ಷ ಡಾ.ಜಯಕರ್ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಅಬ್ದುಲ್ ಅಝೀಮ್, ಬಿಎಂಟಿಸಿ ಮುಖ್ಯ ಲೆಕ್ಕಾಧಿಕಾರಿ ಶೇಖ್ ಲತೀಫ್, ಡಾ. ಸೈಯದ್ ಖಾಲಿದ್ ಅಲ್ತಾಫ್, ಸೈಯದ್ ಮೋಹಿದ್ ಅಲ್ತಾಫ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಮ್ಮ ದೇಶದಲ್ಲಿ ಪ್ರತಿಭೆಗಳ ಕೊರತೆಯಿಲ್ಲ. ದೇಶದ ಎದುರಿನ ಸವಾಲುಗಳು, ಅವುಗಳನ್ನು ಪರಿಸುವ ಹಾಗೂ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಬೇಕು. ಏಕಗವಾಕ್ಷಿ ಪದ್ಧತಿಯ ಮೂಲಕ ಸರಕಾರದ ನೀತಿ, ತೀರ್ಮಾನಗಳು ಜನರಿಗೆ ತಲುಪಬೇಕು.
ಮುಖ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಂಸದೀಯ ಹಾಗೂ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News