ತಾರತಮ್ಯಗಳ ವಿರುದ್ಧ ನಿರಂತರ ಸಂಘರ್ಷ: ಮಾಜಿ ಸಂಸದೆ ಪ್ರಿಯಾ ದತ್ತ್
ಬೆಂಗಳೂರು, ಜ. 30: ನಿರ್ಭಯ ಮೇಲಿನ ಅತ್ಯಾಚಾರ, ಕೊಲೆ ಮತ್ತು ಹೈದರಾಬಾದ್ ವಿವಿಯ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ ಶೋಷಣೆ ಮತ್ತು ಅಸಮಾನತೆ ವಿರುದ್ಧದ ಆಕ್ರೋಶದಿಂದ ಹೋರಾಟ ತೀವ್ರಗೊಂಡಿದ್ದು, ತಾರತಮ್ಯಗಳ ವಿರುದ್ಧ ಸಂಘರ್ಷ ನಿರಂತರ ಎಂದು ಮಾಜಿ ಸಂಸದೆ ಪ್ರಿಯಾ ದತ್ತ್ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಅಸಮಾನತೆ, ತಾರತಮ್ಯದ ವಿರುದ್ಧದ ಹೋರಾಟಕ್ಕೆ ಯಾವುದೇ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ. ಸಾಮಾಜಿಕ ಸಮಾನತೆ ಬಹಳ ಮುಖ್ಯ ಎಂದು ಇದೇ ವೇಳೆ ಪ್ರತಿಪಾದಿಸಿದರು.
ಮಹಿಳೆಯರಿಗೆ ನಿರ್ಬಂಧ ಸಲ್ಲ: ಯಾವುದೇ ದೇವಸ್ಥಾನ ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ಸಂಪ್ರದಾಯದ ಹೆಸರಿನಲ್ಲಿ ಪ್ರವೇಶ ನಿರ್ಬಂಧ ಸರಿಯಲ್ಲ. ಈ ಸಂಬಂಧ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಸೇರಿ ಶಾಲಾ-ಕಾಲೇಜುಗಳಲ್ಲಿ ಯುವ ಜನರಿಗೆ ಜಾಗೃತಿ ಮೂಡಿಸುವೆ ಎಂದು ಅವರು ತಿಳಿಸಿದರು.
ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸೇರಿದಂತೆ ಇನ್ನಿತರ ದೇವಸ್ಥಾನಗಳಿಗೆ ಮಹಿಳೆಯರು ಹೋಗಲು ಬಯಸಿದರೆ ಅವರಿಗೆ ಪ್ರವೇಶ ಕಲ್ಪಿಸಬೇಕು. ಆದರೆ, ಆಚರಣೆ, ಸಂಪ್ರದಾಯದ ಹೆಸರಿನಲ್ಲಿ ಯಾರೊಬ್ಬರನ್ನು ನಿರ್ಬಂಧಿಸುವುದು ಸರಿಯಲ್ಲ ಎಂದು ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಈ ಹಿಂದೆ ಸತಿ ಸಹಗಮನ, ಬಾಲ್ಯ ವಿವಾಹ ಪದ್ಧತಿಗಳು ಆಚರಣೆಯಲ್ಲಿದ್ದವು. ಇದೀಗ ಅವುಗಳನ್ನು ನಿಷೇಧಿಸಲಾಗಿದೆ. ಸಂಪ್ರದಾಯಗಳೂ ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಶತಶತಮಾನಗಳಿಂದಲೂ ಮಹಿಳೆಯರನ್ನು ಮೂಲೆಗುಂಪು ಮಾಡಿದ್ದು, ತಾರತಮ್ಯ ಎಸಗಲಾಗಿದೆ. ಇಂದಿಗೂ ಅದನ್ನೇ ಮುಂದುವರಿಸಲು ಹುನ್ನಾರ ನಡೆಸಲಾಗಿದೆ ಎಂದು ಅವರು ದೂರಿದರು.
ಶೋಷಣೆಯ ಸುಳಿಯಲ್ಲಿ ಸಿಲುಕಿ ನಲುಗುತ್ತಿರುವ ಎಲ್ಲ ಮಹಿಳೆಯರಿಗೆ ಅಗತ್ಯ ಶಿಕ್ಷಣ ನೀಡಲು ಆದ್ಯತೆ ನೀಡಬೇಕು. ಆ ಮೂಲಕ ಅಸಮಾನತೆ ನಿವಾರಿಸಲು ಕ್ರಮ ಕೈಗೊಳ್ಳಬೇಕು. ದಲಿತರು ಹಾಗೂ ಮಹಿಳೆಯರಿಗೆ ಎಲ್ಲ ದೇವಸ್ಥಾನಗಳಿಗೂ ಮುಕ್ತ ಪ್ರವೇಶ ಕಲ್ಪಿಸಬೇಕು ಎಂದ ಅವರು ಇದೇ ವೇಳೆ ಆಗ್ರಹಿಸಿದರು.