ಉಪ ಚುನಾವಣೆ: ಮೂರು ಕ್ಷೇತ್ರಗಳಲ್ಲಿ 34 ಮಂದಿ ಅಭ್ಯರ್ಥಿಗಳು
ಬೆಂಗಳೂರು, ಜ. 30: ಹೆಬ್ಬಾಳ, ದೇವದುರ್ಗ ಹಾಗೂ ಬೀದರ್ ಕ್ಷೇತ್ರಗಳಿಗೆ ಫೆ. 13ರಂದು ನಡೆಯಲಿರುವ ಉಪ ಚುನಾವಣೆಗೆ ನಾಮಪತ್ರ ಪರಿಶೀಲನೆ ಕಾರ್ಯ ಮುಕ್ತಾಯ ಕಂಡಿದ್ದು, ಹೆಬ್ಬಾಳ ಕ್ಷೇತ್ರದಲ್ಲಿ ಇಬ್ಬರು ಹಾಗೂ ಬೀದರ್ ಕ್ಷೇತ್ರದಲ್ಲಿ ಓರ್ವ ಅಭ್ಯರ್ಥಿ ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ.
ಹೆಬ್ಬಾಳ ಕ್ಷೇತ್ರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಅಭ್ಯರ್ಥಿ ಅಬ್ದುರ್ರಹ್ಮಾನ್ ಶರೀಫ್, ಜೆಡಿಎಸ್‌ನ ಇಸ್ಮಾಯೀಲ್ ಶರೀಫ್ ನಾನಾ, ಬಿಜೆಪಿಯ ವೈ.ಎ.ನಾರಾಯಣ ಸ್ವಾಮಿ ಸೇರಿದಂತೆ ಒಟ್ಟು 20 ಅಭ್ಯರ್ಥಿಗಳು ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆಂದು ಚುನಾವಣಾ ಆಯುಕ್ತ ಅನಿಲ್ ಕುಮಾರ್ ಝಾ ತಿಳಿಸಿದ್ದಾರೆ.
ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ಕಾಂಗ್ರೆಸ್‌ನ ಎ. ರಾಜಶೇಖರ ನಾಯಕ್, ಜೆಡಿಎಸ್‌ನ ಕರಿಯಮ್ಮ ಜಿ.ನಾಯಕ್, ಬಿಜೆಪಿಯ ಶಿವನಗೌಡ ನಾಯಕ್ ಸೇರಿದಂತೆ ಒಟ್ಟು ನಾಲ್ಕು ಮಂದಿ ಅಭ್ಯರ್ಥಿಗಳು ಅಖಾಡದಲ್ಲಿ ಇದ್ದಾರೆ ಎಂದು ಅವರು ಹೇಳಿದರು.
ಅತ್ತ ಬೀದರ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಹೀಂ ಖಾನ್, ಬಿಜೆಪಿಯ ಪ್ರಕಾಶ್ ಖಂಡ್ರೆ, ಜೆಡಿಎಸ್‌ನ ಎಂ.ಡಿ.ಅಯಾಝ್ ಖಾನ್ ಸೇರಿದಂತೆ ಒಟ್ಟು ಹತ್ತು ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಒಟ್ಟು 34 ಮಂದಿ ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ ಎಂದು ಹೇಳಿದರು.
ಆ ಹಿನ್ನೆಲೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಮೂರು ಪಕ್ಷಗಳ ಮುಖಂಡರು ನಾಳೆ ಯಿಂದ ಅಧಿಕೃತವಾಗಿ ತಮ್ಮ ಅಭ್ಯರ್ಥಿಗಳ ಪ್ರಚಾರ ಕಾರ್ಯಕ್ಕೆ ತೊಡಗುವ ಸಾಧ್ಯತೆಗಳಿವೆ. ಫೆ.13ರಂದು ನಡೆಯಲಿರುವ ಚುನಾವಣೆಯಲ್ಲಿ ಅಭ್ಯರ್ಥಿಗಳ ಹಣೆಬರಹವನ್ನು ಮತದಾರ ಬರೆಯಲಿದ್ದಾನೆ.