×
Ad

ಮಹದಾಯಿ ಮಾತುಕತೆ ಅಸಾಧ್ಯ: ರಾಜ್ಯದ ಆಶಯಕ್ಕೆ ತಣ್ಣೀರೆರಚಿದ ಸಚಿವೆ ಉಮಾ ಭಾರತಿ

Update: 2016-01-30 23:40 IST

ಬೆಂಗಳೂರು, ಜ.30: ‘ಕಳಸಾ-ಬಂಡೂರಿ ನಾಲೆ ಹಾಗೂ ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ನ್ಯಾಯಾಧಿಕರಣದ ಹೊರಗೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳುವ ಮೂಲಕ ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ ರಾಜ್ಯ ಸರಕಾರದ ಆಶಯಕ್ಕೆ ತಣ್ಣೀರೆರಚಿದ್ದಾರೆ.

ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿರುವ ಉಮಾ ಭಾರತಿ, ಮಹದಾಯಿ ವಿವಾದ ನ್ಯಾಯಾಧಿಕರಣದ ಮುಂದಿರುವುದರಿಂದ ಈ ಹಂತದಲ್ಲಿ ಮಧ್ಯಪ್ರವೇಶಿಸುವುದು ಸೂಕ್ತವಲ್ಲ. ಸಂಬಂಧಪಟ್ಟ ಎಲ್ಲ ರಾಜ್ಯಗಳು ಮಾತುಕತೆಗೆ ಆಸಕ್ತಿ ತೋರಿದರೆ ಮಾತ್ರ ಇಂತಹ ಪ್ರಸ್ತಾವನೆ ಪರಿಶೀಲಿಸಬಹುದು. ಆದರೆ, ಗೋವಾ ಮತ್ತು ಮಹಾರಾಷ್ಟ್ರಗಳಿಂದ ಇಂತಹ ಪ್ರಸ್ತಾವನೆ ಬಂದಿಲ್ಲ ಎಂದು ಉಭಯ ರಾಜ್ಯಗಳ ‘ಮಾತುಕತೆ’ಗೆ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ನಿಲುವನ್ನು ಕರ್ನಾಟಕ ರಾಜ್ಯದ ರಾಜ್ಯಪಾಲರಿಗೂ ತಿಳಿಸಲಾಗಿದೆ ಎಂದಿರುವ ಉಮಾ ಭಾರತಿ, ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕೆಂಬ ರಾಜ್ಯ ಸರಕಾರದ ಮನವಿಗೆ ಗೋವಾ ಸರಕಾರವೂ ವಿರೋಧ ವ್ಯಕ್ತಪಡಿಸಿದೆ.
ಗೋವಾ ಸಿಎಂ ಲಕ್ಷ್ಮೀಕಾಂತ್ ಪರ್ಸೇಕರ್ ಅವರೂ ಸಿದ್ದರಾಮಯ್ಯರಿಗೆ ಪತ್ರ ಬರೆದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಗೋವಾ ಮತ್ತು ಮಹಾರಾಷ್ಟ್ರ ಸರಕಾರ ಆಸಕ್ತಿ ತೋರಿಲ್ಲ. ಈ ಕಾರಣಕ್ಕಾಗಿ ನ್ಯಾಯಾಧೀಕರಣದ ಅಂತಿಮ ತೀರ್ಪು ಬರುವವರೆಗೂ ಕಾಯಬೇಕೆಂದು ಉಮಾ ಭಾರತಿ ಹೇಳಿದ್ದಾರೆ.

ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಡಬೇಕೆಂದು ಹೇಳಿರುವ ಅವರು ‘ನಿಮಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇದೆ ಎಂಬುದು ನನ್ನ ಭಾವನೆ. ಅಂತಿಮ ತೀರ್ಪು ಬರುವವರೆಗೂ ಕಾಯುವಿರಿ ಎಂಬ ವಿಶ್ವಾಸವೂ ಇದೆ’ ಎಂದು ಪತ್ರದಲ್ಲಿ ಇದೇ ವೇಳೆ ತಿಳಿಸಿದ್ದಾರೆ.

♦♦♦


ಸಚಿವ ಎಂ.ಬಿ.ಪಾಟೀಲ್ ಕಿಡಿ

ಬೆಂಗಳೂರು, ಜ.30: ಕಳಸಾ-ಬಂಡೂರಿ ನಾಲೆ ಜೋಡಣೆ ಹಾಗೂ ಮಹದಾಯಿ ವಿವಾದವನ್ನು ನ್ಯಾಯಾಧಿಕರಣದ ಹೊರಗೆ ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಲು ಗೋವಾ ಸರಕಾರ ನಿರಾಕರಿಸಿ ರುವುದು ಮತ್ತು ಕೇಂದ್ರ ಮಧ್ಯ ಪ್ರವೇಶಿ ಸಲು ಹಿಂದೇಟು ಹಾಕಿರುವ ಕ್ರಮ ಸರಿಯಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ಹಾಗೂ ಗೋವಾ ಬಿಜೆಪಿ ಸರಕಾರದ ನಡವಳಿಕೆ ಒಳ್ಳೆಯ ಬೆಳವಣಿಗೆ ಅಲ್ಲ. ಈ ಸಂಬಂಧ ಪ್ರಧಾನಿ ಮಧ್ಯ ಪ್ರವೇಶಕ್ಕೆ ಪುನಃ ಪತ್ರ ಬರೆಯಲಾಗುವುದು ಎಂದು ಹೇಳಿದರು.

ಅಂತಾರಾಜ್ಯ ನದಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ರಾಜ್ಯ ಸರಕಾರ ಉದ್ದೇಶಿಸಿದ್ದು, ಆ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ನಡೆಸಿತ್ತು. ಆದರೆ, ರಾಜ್ಯದ ಬಿಜೆಪಿ ಮುಖಂಡರು ಆಸಕ್ತಿ ವಹಿಸದ ಹಿನ್ನೆಲೆಯಲ್ಲಿ ಮಾತುಕತೆ ಸಾಧ್ಯವಾಗಿಲ್ಲ. ಹೀಗಾಗಿ ಅವರ ನಿಜಬಣ್ಣ ಬಯಲಾಗಿದೆ ಎಂದು ಪಾಟೀಲ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ರಾಜ್ಯದ ಸಂಸದರು ಕರ್ನಾಟಕದ ಹಿತ ಕಾಯುವ ನಿಟ್ಟಿನಲ್ಲಿ ಗೋವಾ ಬಿಜೆಪಿ ಹಾಗೂ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕಿತ್ತು. ಆದರೆ, ಅವರು ಆ ಕೆಲಸ ಮಾಡಲಿಲ್ಲ. ಹೀಗಾಗಿ ಅವರ ಬಂಡವಾಳವನ್ನು ರಾಜ್ಯದ ಜನತೆ ಅರ್ಥಮಾಡಿಕೊಳ್ಳಬೇಕು ಎಂದರು.

ಸಿಎಂ ಸಿದ್ದರಾಮಯ್ಯವರಿಗೆ ಸಚಿವೆ ಉಮಾಭಾರತಿ ಅವರು ಬರೆದಿರುವ ಪತ್ರ ನಿಜಕ್ಕೂ ದುರದೃಷ್ಟಕರ. ರಾಜ್ಯದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉಮಾಭಾರತಿ ಅವರು ಮೋಸ ಮಾಡುತ್ತಿದ್ದಾರೆ.
- ಎಂ.ಬಿ. ಪಾಟೀಲ್, ಜಲಸಂಪನ್ಮೂಲ ಸಚಿವ

♦♦♦


ಗೋವಾ ನಕಾರ: ಮಹದಾಯಿ ವಿವಾದವನ್ನು ನ್ಯಾಯಮಂಡಳಿಯಲ್ಲೇ ಬಗೆಹರಿಸಿಕೊಳ್ಳುವುದು ಸೂಕ್ತ ಎಂಬುದು ನಮ್ಮ ರಾಜ್ಯದ ಜನರ ಒಟ್ಟು ಅಭಿಪ್ರಾಯ ಎಂದು ಗೋವಾ ಮುಖ್ಯಮಂತ್ರಿ ಪಾರ್ಸೇಕರ್ ಶನಿವಾರ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News