×
Ad

ದಿಲ್ಲಿಯಲ್ಲಿ ಅಂತಾರಾಷ್ಟ್ರೀಯ ಉಲಮಾ ಸಮಾವೇಶ

Update: 2016-01-31 23:21 IST

ಬೆಂಗಳೂರು, ಜ.31: ಸಮಾಜದ ಎದುರು ಇಸ್ಲಾಮ್ ಧರ್ಮದ ನೈಜ ಸ್ವರೂಪವನ್ನು ಇರಿಸುವ ಉದ್ದೇಶದಿಂದ ಮಾ.17-20ರವರೆಗೆ ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಅಂತಾರಾಷ್ಟ್ರೀಯ ಉಲಮಾ ಹಾಗೂ ಮಶಾಯಕ್ ಸಮಾವೇಶವನ್ನು ಆಯೋಜಿ ಸಲಾಗಿದೆ ಎಂದು ಅಖಿಲ ಭಾರತ ಉಲಮಾ ಹಾಗೂ ಮಶಾಯಕ್ ಬೋರ್ಡ್ ಅಧ್ಯಕ್ಷ ವೌಲಾನ ಸೈಯದ್ ಮುಹಮ್ಮದ್ ಅಶ್ರಫ್ ತಿಳಿಸಿದ್ದಾರೆ.
ರವಿವಾರ ನಗರದ ಮಸ್ಜಿದ್-ಎ-ಖಾದ್ರಿಯಾ (ಹಜ್‌ಕ್ಯಾಂಪ್)ದಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾ.17ರಂದು ಸಮಾವೇಶದ ಉದ್ಘಾಟನೆ ನೆರವೇರಲಿದ್ದು, ಮಾ.18 ಹಾಗೂ 19ರಂದು ವಿಶ್ವದ ವಿವಿಧ ದೇಶಗಳಿಂದ ಆಗಮಿಸಲಿರುವ ವಿದ್ವಾಂಸರು ವಿಷಯ ಮಂಡನೆ ಮಾಡಲಿದ್ದಾರೆ. ಮಾ.20ರಂದು ರಾಮ್‌ಲೀಲಾ ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ವಿಶ್ವದೆಲ್ಲೆಡೆ ಭಯೋತ್ಪಾದನೆಗೆ ಸಂಬಂಧಿಸಿದಂತೆ ಅನೇಕ ಅಹಿತಕರ ಬೆಳವಣಿಗೆಗಳು ನಡೆಯುತ್ತಿವೆ. ಭಯೋತ್ಪಾದನೆಯನ್ನು ಇಸ್ಲಾಮ್ ಧರ್ಮದ ಭಾಗವೆಂಬಂತೆ ಬಿಂಬಿಸ ಲಾಗುತ್ತಿದೆ. ಆದುದರಿಂದ, ಜನ ಸಾಮಾನ್ಯರ ಎದುರು ಕುರ್‌ಆನ್ ಹಾಗೂ ಹದೀಸ್‌ನ ಮಾರ್ಗದರ್ಶನದಲ್ಲಿ ನೈಜ ಇಸ್ಲಾಮ್ ಬಗ್ಗೆ ತಿಳುವಳಿಕೆ ಮೂಡಿಸಲು ಈ ಸಮಾವೇಶ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಐಸಿಸ್ ಅವಿವೇಕಿಗಳು:  ಹಿಂಸೆ ಹಾಗೂ ಕ್ರೌರ್ಯವನ್ನು ಇಸ್ಲಾಮ್ ಎಂದು ಬಿಂಬಿ ಸಲು ಐಸಿಎಸ್ ಸಂಘಟನೆಯ ಅವಿವೇಕಿಗಳು ಪ್ರಯತ್ನ ಮಾಡುತ್ತಿದ್ದಾರೆ. ಹಿಂಸೆ ಹಾಗೂ ಕ್ರೌರ್ಯವನ್ನು ಪ್ರತಿಪಾದಿಸುವವರು ಇಸ್ಲಾಮ್ ಧರ್ಮದ ಅನುಯಾಯಿ ಗಳಲ್ಲ ಎಂದು ಜುಮಾ ಮಸ್ಜಿದ್ ಅಧ್ಯಕ್ಷ ಅನ್ವರ್ ಶರೀಫ್ ಹೇಳಿದರು.
ಇಸ್ಲಾಮಿಕ್ ಶಿಕ್ಷಣ: ಮದ್ರಸಾಗಳಲ್ಲಿ ಆಧುನಿಕ ಶಿಕ್ಷಣ ಪದ್ಧತಿಯನ್ನು ಪರಿಚಯಿಸಲು, ಅರೆಬಿಕ್ ಜೊತೆಗೆ ಗಣಿತ, ವಿಜ್ಞಾನ, ಕಂಪ್ಯೂಟರ್ ವಿಷಯಗಳನ್ನು ಅಧ್ಯಯನ ಮಾಡಿಸುವ ಉದ್ದೇಶದಿಂದ ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ಆಫ್ ಇಂಡಿಯಾ(ಐಇಬಿಐ) ಅಸ್ತಿತ್ವಕ್ಕೆ ಬಂದಿದೆ ಎಂದು ರಾಜ್ಯಘಟಕದ ಅಧ್ಯಕ್ಷ ಎಸ್.ಎಸ್.ಎ.ಖಾದರ್ ತಿಳಿಸಿದರು. ದೇಶಾದ್ಯಂತ ಸುಮಾರು 25 ಸಾವಿರ ಮದ್ರಸಗಳು ಐಇಬಿಐ ಅಧೀನದಲ್ಲಿದೆ. ರಾಜ್ಯದಲ್ಲೂ ಮುಂದಿನ 5 ವರ್ಷಗಳಲ್ಲಿ 10 ಸಾವಿರ ಮದ್ರಸಗಳನ್ನು ಮಂಡಳಿಯ ಅಡಿಯಲ್ಲಿ ತಂದು ಸೂಕ್ತ ಶಿಕ್ಷಣ ನೀಡಲಾಗುವುದು ಎಂದರು.

ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್(ಎಸ್‌ಎಸ್‌ಎಫ್) ರಾಜ್ಯಾಧ್ಯಕ್ಷ ವೌಲಾನ ಶಾಫಿ ಸಅದಿ ಮಾತನಾಡಿ, ಐಸಿಸ್ ಸಂಘಟನೆಯಲ್ಲಿ ಸಕ್ರಿಯರಾಗಿರುವವರು ಇಸ್ಲಾಮ್ ಧರ್ಮದ ನೈಜ ಬೋಧನೆಗಳ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಭಯೋತ್ಪಾದನೆ ಇಸ್ಲಾಮ್ ಧರ್ಮದ ಭಾಗವಲ್ಲ. ಧಾರ್ಮಿಕ ಸಹಿಷ್ಣುತೆಗೆ ಇಸ್ಲಾಮ್ ಧರ್ಮ ಮಾದರಿ. ಪ್ರವಾದಿ ಹಾಗೂ ಖಲೀಫಾ ಅವರ ಜೀವಿತಾವಧಿಯಲ್ಲಿ ಕ್ರೈಸ್ತರು ಹಾಗೂ ಯಹೂದಿಯರಿಗೆ ತಮ್ಮ ತಮ್ಮ ಧಾರ್ಮಿಕ ಆಚರಣೆಗಳನ್ನು ಮಾಡಲು ಯಾವುದೇ ರೀತಿಯ ನಿರ್ಬಂಧ ವಿಧಿಸಿರಲಿಲ್ಲ. ಅಜ್ಮೀರ್ ದರ್ಗಾ ಶರೀಫ್‌ನ ಸಜ್ಜಾದ್ ನಶೀನ್ ಸಯ್ಯದ್ ಮುಹಮ್ಮದ್ ಮೆಹ್ದಿಮಿಯಾ, ಐಇಬಿಐ ಉಪಾಧ್ಯಕ್ಷ ಸೈಯದ್ ತನ್ವೀರ್ ಹಾಶ್ಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News