×
Ad

‘ಸಾಹಿತ್ಯ ಚಿಂತನೆ’ ಸಂವಾದ ಕಾರ್ಯಕ್ರಮ; ಶೂದ್ರನಾಗಿ ಮತ್ತೊಮ್ಮೆ ಹುಟ್ಟಲಾರೆ: ವೀರಪ್ಪ ಮೊಯ್ಲಿ

Update: 2016-01-31 23:23 IST

ಬೆಂಗಳೂರು, ಜ.31: ಪುನರ್‌ಜನ್ಮದ ಮೇಲೆ ನನಗೆ ನಂಬಿಕೆಯಿಲ್ಲ. ಆದರೂ ಪುನರ್‌ಜನ್ಮ ಎಂಬುದು ಇರುವುದಾದರೆ ಮತ್ತೊಮ್ಮೆ ನಾನು ಶೂದ್ರನಾಗಿ ಹುಟ್ಟಲು ಯಾವುದೇ ಕಾರಣಕ್ಕೂ ಬಯಸಲಾರೆ ಎಂದು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಹಾಗೂ ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
 ರವಿವಾರ ಭಾಗವತರು ಸಾಂಸ್ಕೃತಿಕ ಸಂಘಟನೆ ನಗರದ ನಯನ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಸಾಹಿತ್ಯ ಚಿಂತನೆ’ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ದಲಿತರು ಮತ್ತು ಶೂದ್ರ ಸಮುದಾಯಗಳು ಸಾಮಾಜಿಕವಾಗಿ ಅನೇಕ ರೀತಿಯಲ್ಲಿ ನೋವನ್ನು ಅನುಭವಿಸುತ್ತಿದ್ದಾರೆ. ಇಂತಹ ನೋವನ್ನು ಸ್ವತಃ ಅನುಭವಿಸಿರುವ ನಾನು, ಮತ್ತೊಮ್ಮೆ ಶೂದ್ರನಾಗಿ ಹುಟ್ಟಲು ಬಯಸುವುದಿಲ್ಲವೆಂದು ಹೇಳಿದರು.

ಬಾಲ್ಯದಲ್ಲಿ ನಾನು ಮತ್ತು ನನ್ನ ಕುಟುಂಬ ಅನುಭವಿಸಿದ ಬಡತನ ಹಾಗೂ ಅವಮಾನ ಗಳೇ ಸಾಹಿತ್ಯ ಕೃಷಿಗೆ ಮೂಲ ಪ್ರೇರಣೆೆ. ಗೇಣಿದಾರರಾದ ನನ್ನ ಕುಟುಂಬಕ್ಕೆ ಭೂ ಮಾಲಕರು ಪೊಲೀಸರೊಂದಿಗೆ ಬಂದು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಆ ಸಂದರ್ಭಗಳಲ್ಲಿ ನಾನು ಭೂ ಮಾಲಕರ ವಿರುದ್ಧ ಪ್ರತಿಭಟಿಸಲು ಪ್ರಯತ್ನಿ ಸುತ್ತಿದ್ದೆ. ಆದರೆ, ಅಮ್ಮ ನನ್ನನ್ನು ತಡೆಯುತ್ತಿದ್ದರು. ಈ ಆಕ್ರೋಶವೇ ಸಾಹಿತ್ಯದಲ್ಲಿ ಅಕ್ಷರ ರೂಪದಲ್ಲಿ ಮೂಡಿಬಂದಿವೆ ಎಂದು ಸ್ಮರಿಸಿದರು.

ನಾಲ್ಕನೆ ತರಗತಿಯಲ್ಲಿ ಇರುವಾಗಲೇ ನಾನು ಕವನ, ಕತೆಗಳನ್ನು ಬರೆಯುತ್ತಿದ್ದೆ. ಅಲ್ಲಿಂದ ಪ್ರಾರಂಭ ವಾದ ನನ್ನಸಾಹಿತ್ಯ ಕೃಷಿ ಇಲ್ಲಿಯವರೆಗೂ ಒಂದೇ ಪ್ರಕಾರವಾಗಿ ಸಾಗಿದೆ. ಪ್ರತಿದಿನ ಬೆಳಗ್ಗೆ 5ಗಂಟೆಯಿಂದ 7ರವರೆಗೆ ಬರೆಯುತ್ತೇನೆ. ಈ ಅನು ದಿನದ ಕ್ರಮದಿಂದಾಗಿ ಸುಮಾರು 20ಕ್ಕೂ ಹೆಚ್ಚು ಸಾಹಿತ್ಯ ಕೃತಿಯನ್ನು ರಚಿಸಲು ಸಾಧ್ಯವಾಯಿತು ಎಂದು ತಿಳಿಸಿದರು.
‘ಶ್ರೀರಾಮಾಯಣ ಮಹಾನ್ವೇಷಣಂ’ ಕೃತಿ ರಚಿಸಲು ಪ್ರಾರಂಭಿಸುವುದಕ್ಕೆ ಮುನ್ನ ಐದು ವರ್ಷಗಳು ಗಂಭೀರ ಅಧ್ಯಯನ ಮಾಡಿದ್ದೇನೆ. ನಂತರ ಮುಂದಿನ ಐದು ವರ್ಷ ಅದರ ರಚನಾ ಕಾರ್ಯ ದಲ್ಲಿ ತೊಡಗಿ, ಯಶಸ್ವಿಯಾಗಿ ಮುಗಿಸಿದ್ದೇನೆ. ಈ ಕೃತಿಯ ರಚನೆಗೆ ನನ್ನ ತಾಯಿ ಹಾಗೂ ಪತ್ನಿ ಪ್ರೇರಣೆಯಾಗಿದ್ದಾರೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ, ಹಿರಿಯ ವಿದ್ವಾಂಸ ಡಾ.ಮಲ್ಲೇ ಪುರಂ ಜಿ.ವೆಂಕಟೇಶ್ ಉಪಸ್ಥಿತರಿದ್ದರು.

ಬರಗಾಲಕ್ಕೆ ತುತ್ತಾಗಿರುವ ಚಿಕ್ಕಬಳ್ಳಾ ಪುರ ಜನತೆಯ ಬದುಕನ್ನು ನೋಡಲು ಸಾಧ್ಯವಿಲ್ಲ. ಜಿಲ್ಲೆಯ ಸುತ್ತಮುತ್ತಲ ಪ್ರದೇಶ ದಲ್ಲಿನ ನೀರು ವಿಷಯುಕ್ತವಾಗಿದ್ದು, 18ವರ್ಷದ ಯುವತಿ ಹಲ್ಲುಗಳನ್ನು ಕಳೆದುಕೊಂಡು ಮುದುಕಿಯಂತೆ ಕಾಣುತ್ತಿದ್ದಾಳೆ. ಹೀಗಾಗಿ ಎತ್ತಿನಹೊಳೆ ಯೋಜನೆ ಜಾರಿಗಿ ರುವ ಅಡಚಣೆಗಳು ನಿವಾರಣೆಯಾಗಿದ್ದು, ಎರಡು ಅಥವಾ ಮೂರು ವರ್ಷಗಳಲ್ಲಿ ಚಿಕ್ಕಬಳ್ಳಾಪುರಕ್ಕೆ ನೇತ್ರಾವತಿ ನೀರನ್ನು ಹರಿಸುವುದು ನಿಶ್ಚಿತ.
-ವೀರಪ್ಪ ಮೊಯ್ಲಿ, ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News