ಮಹಿಳಾ ದೌರ್ಜನ್ಯ ತಡೆಗೆ ಕಾನೂನು ವಿಫಲ: ಮಂಜುಳಾ ಮಾನಸ
ಬೆಂಗಳೂರು, ಜ. 31: ಸಿದ್ಧ ಉಡುಪು ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತ್ತಿರುವ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯಗಳನ್ನು ತಡೆಯಲು ಹಲ ವಾರು ಕಾನೂನುಗಳಿದ್ದರೂ, ಪ್ರಯೋಜನವಾಗುತ್ತಿಲ್ಲ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಕಸಾಪದಲ್ಲಿ ಗಾರ್ಮೆಂಟ್ ಆ್ಯಂಡ್ ಟೆಕ್ಸ್‌ಟೈಲ್ಸ್ ವರ್ಕರ್ಸ್ ಯೂನಿಯನ್ ಮತ್ತು ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರ ಮುನ್ನಡೆ ಸಹಯೋಗದಲ್ಲಿ ಕನಿಷ್ಠ ವೇತನ ಮತ್ತು ಕೆಲಸದ ಸ್ಥಳದಲ್ಲಿ ಕಿರುಕುಳ ಮುಕ್ತ ವಾತಾವರಣವನ್ನು ನಿರ್ಮಿಸಬೇಕೆಂದು ಒತ್ತಾಯಿಸಿ ಆಯೋಜಿಸಲಾಗಿದ್ದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ತಮ್ಮ ಹಕ್ಕುಗಳ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದಿರುವುದರಿಂದ ಸರಕಾರಗಳು ಜಾರಿಗೆ ತರುತ್ತಿರುವಂತಹ ಕಾನೂನುಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದನ್ನು ಬಂಡವಾಳ ಮಾಡಿಕೊಂಡ ಕಂಪೆನಿಗಳು ಮಹಿಳೆಯರ ಕೈಯಿಂದ ದುಡಿಸಿಕೊಳ್ಳುವ ಮೂಲಕ ಕಂಪೆನಿಗಳ ಮಾಲಕರು ಶ್ರೀಮಂತರಾಗಲು ಹೊರಟಿದ್ದಾರೆಂದು ಟೀಕಿಸಿದರು.
ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ದುಡಿಯುವ ಮಹಿಳೆ ಯರು ತಮ್ಮ ಮೇಲಾಗುವ ದೌರ್ಜನ್ಯದಿಂದ ಮುಕ್ತಿಯನ್ನು ಪಡೆಯಬೇಕಾದರೆ ಅವರು ಶಿಕ್ಷಣವನ್ನು ಪಡೆಯಬೇಕಾಗಿದೆ. ಆ ಮೂಲಕ ದೌರ್ಜನ್ಯಗಳನ್ನು ನಡೆಯದಂತೆ ಎಚ್ಚರವನ್ನು ವಹಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮಹಿಳೆಯರು ಯಾವುದಕ್ಕೂ ಭಯಪಡದೆ ದೌರ್ಜನ್ಯ ನಡೆದಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರುಗಳನ್ನು ನೀಡಬೇಕು ಎಂದು ಸಲಹೆ ನೀಡಿದರು.
ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡಿ, ಆರೋಗ್ಯವಂತ ಜೀವನ ನಡೆಸಲು ತಿಂಗಳಿಗೆ ಕನಿಷ್ಠ 15 ಸಾವಿರ ರೂ. ವೇತನ ಅಗತ್ಯ. ಆದರೆ, ಆಳುವವರು ಕನಿಷ್ಠ ವೇತನ ನೀಡಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಇದರಿಂದಾಗಿ ನಮ್ಮ ನ್ಯಾಯಯುತ ಬೇಡಿಕೆ ಈಡೇರುವವರೆಗೂ ಹೋರಾಟವನ್ನು ಮುಂದುವರಿಸೋಣ. ನಾನು ನಿಮ್ಮ ಜೊತೆಗಿರುತ್ತೇನೆಂದು ಬೆಂಬಲ ನೀಡಿದರು.
ದೇಶದ ಕಾರ್ಖಾನೆಗಳಲ್ಲಿ ದುಡಿಯುವ ಮಹಿಳೆಯರಲ್ಲಿ ಶೇ.70ರಷ್ಟು ಜನ ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಬೆನ್ನು ನೋವು, ಕಾಲು ನೋವುಳಿಂದ ನರಲುತ್ತಿ ದ್ದಾರೆ. ಮಹಿಳೆಯರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರಗಳನ್ನು ತೆರೆಯದೇ ಇರುವುದು ದುರಂತ ಸಂಗತಿ ಎಂದು ಎಂದು ವಿಷಾದಿಸಿದರು.
ಗಾರ್ಮೆಂಟ್ಸ್‌ಗಳಲ್ಲಿ ದುಡಿಯುತ್ತಿರುವ ಮಹಿಳೆಯರಿಗೆ ದೈಹಿಕ ಹಿಂಸೆ ಮಾತ್ರವಲ್ಲದೆ, ಮಾನಸಿಕ ಹಿಂಸೆಯನ್ನು ನೀಡಲಾಗುತ್ತಿದೆ. ಸ್ವಲ್ಪ ತಡವಾಗಿ ಕೆಲಸವನ್ನು ಮುಗಿಸಿದರೆ ಅವರನ್ನು ಅಲ್ಲಿನ ಮೇಲ್ವಿಚಾರಕರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾದವರು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಇದರಿಂದಾಗಿ ಮಹಿಳೆಯರು ಒಗ್ಗಟ್ಟಾಗಿ ಸಂಘಟಿತರಾಗಬೇಕು. ಆ ನಿಟ್ಟಿನಲ್ಲಿ ನಾವು ಮುಂದಿನ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ನಮ್ಮ ಹೋರಾಟದ ಹಕ್ಕನ್ನು ಯಾರು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಕರೆ ನೀಡಿದರು.
ಮಹಿಳೆಯರಿಗೆ ರಾಜಕೀಯ ಅಧಿಕಾರ ನೀಡಿ: ದಕ್ಷ ಮಹಿಳೆ ಅಧಿಕಾರದಲ್ಲಿ ಇದ್ದರೆ ಮಹಿಳೆಯರ ಸಮಸ್ಯೆಗಳನ್ನು ಅರ್ಥಮಾ ಡಿಕೊಂಡು ಕೆಲಸ ಮಾಡಲು ಸಾಧ್ಯ. ಆ ನಿಟ್ಟಿನಲ್ಲಿ ಮಹಿಳೆ ಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಮುಖಂಡ ಬಾಬು ಮ್ಯಾಥ್ಯೂ, ಎಐಟಿಸಿಸಿಯು ಕಾರ್ಯದರ್ಶಿ ಕ್ಲಿಫ್ಟನ್ ಡಿ.ರೊಝಾರಿಯೋ ಉಪಸ್ಥಿತರಿದ್ದರು.