ಬೆಂಗಳೂರು : ಜೀಕಾ ವೈರಾಣು ತಡೆಗಟ್ಟಲು ಕ್ರಮ : ಆರೋಗ್ಯ ಸಚಿವ ಯು.ಟಿ. ಖಾದರ್
ಬೆಂಗಳೂರು.ಫೆ.1:ಜಾಗತಿಕವಾಗಿ ತೀವ್ರ ಆತಂಕ ಸೃಷ್ಟಿಸಿರುವ ಜೀಕಾ ವೈರಾಣು ತಡೆಗಟ್ಟಲು ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಸಜ್ಜಾಗಿದ್ದು, ಈ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕೇಂದ್ರ ಸರ್ಕಾರದ ನೆರವು ಕೋರಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಡೆಂಗ್ಯೂ, ಚಿಕೂನ್ ಗುನ್ಯಾ ರೋಗಾಣುಗಳನ್ನು ಹರಡುವ ಈಡಿಸ್ ಈಜಿಪ್ಟಿ ಮಾರಕವಾದ ಜೀಕಾ ರೋಗದ ವೈರಾಣುಗಳು
ಹರಡುತ್ತವೆ. ಮುಖ್ಯವಾಗಿ ಹುಟ್ಟುವ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಈ ಬಗ್ಗೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. ದಕ್ಷಿಣ ಆಫ್ರಿಕಾದಲ್ಲಿರುವ ನಿರ್ದಿಷ್ಟ ಸೊಳ್ಳೆಗಳಿಂದ ಈ ರೋಗ ಹಬ್ಬುತ್ತದೆ ಎಂಬುದು ತಿಳಿದು ಬಂದಿದ್ದು ಅಲ್ಲಿಂದ ದೇಶಕ್ಕೆ ಬರುವವರಿಗೆ ಈ ರೋಗ ಬಂದಿದೆಯೇ?ಎಂಬುದನ್ನು ಅರಿತುಕೊಳ್ಳಲು ನಿರ್ದಿಷ್ಟ ಕಿಟ್ ಅನ್ನು ಒದಗಿಸಬೇಕು ಎಂದು ಕೋರಲಾಗಿದೆ.
ದೆಹಲಿ ಹಾಗೂ ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಿದರೆ ದಕ್ಷಿಣ ಆಫ್ರಿಕಾದಿಂದ ಬರುವವರನ್ನು ಪರೀಕ್ಷಿಸಲು ನೆರವಾಗುತ್ತದೆ.ಅಲ್ಲಿ ಪ್ರವಾಸಿಗರನ್ನು ಪರೀಕ್ಷಿಸಿದರೆ ಶೇಕಡಾ ತೊಂಭತ್ತರಷ್ಟು ಸಮಸ್ಯೆ ನಿವಾರಣೆಯಾಗುತ್ತದೆ ಎಂದರು.
ದಕ್ಷಿಣ ಆಫ್ರಿಕಾದಲ್ಲಿ ಸೊಳ್ಳೆ ಕಚ್ಚಿಸಿಕೊಂಡು ಇಲ್ಲಿಗೆ ಬಂದವರನ್ನು ಸೊಳ್ಳೆಗಳು ಕಚ್ಚಿ,ಆ ಸೊಳ್ಳೆಗಳು ಬೇರೆಯವರಿಗೆ ಕಚ್ಚಿದರೆ ಝೀಕಾ ರೋಗ ಹರಡುತ್ತದೆಯೇ?ಎಂಬುದರ ವಿವರವನ್ನೂ ಪಡೆಯಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಆರೋಗ್ಯ ಇಲಾಖೆಯ 108 ಸಂಖ್ಯೆಯ ಆಂಬುಲೆನ್ಸ್‌ಗಳಲ್ಲಿ ಕೆಲಸ ಮಾಡುತ್ತಿರುವವರು ಕಳೆದೊಂದು ವಾರದಿಂದ ನಡೆಸುತ್ತಿರುವ ಮುಷ್ಕರದ ಹಿನ್ನೆಲೆಯಲ್ಲಿ ಇಂದು ಸಭೆ ನಡೆಸಲಾಗಿದ್ದು,ಮುಂದಿನ ನಲವತ್ತೆಂಟು ಗಂಟೆಗಳಲ್ಲಿ ಅವರು ಕರ್ತವ್ಯಕ್ಕೆ ಹಾಜರಾಗದಿದ್ದರೆ ಸೇವೆಯಿಂದ ವಜಾ ಮಾಡಲಾಗುವುದು ಎಂದು ಹೇಳಿದರು.
ಈ ರೀತಿಯ ಆಂಬುಲೆನ್ಸ್‌ಗಳಲ್ಲಿ 270 ಮಂದಿ ಕೆಲಸ ಮಾಡುತ್ತಿದ್ದು ಈ ಪೈಕಿ ನೂರಾ ಐವತ್ತೆರಡು ಮಂದಿಯನ್ನು ಈಗಾಗಲೇ ಸೇವೆಯಿಂದ ವಜಾ ಮಾಡಲಾಗಿದೆ.ಆದರೆ ಹಲವರು ಬಂದು,ತಾವು ಕರ್ತವ್ಯಕ್ಕೆ ಹಾಜರಾಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಹೀಗಾಗಿ ಅಂತವರಿಗೆ ನಲವತ್ತೆಂಟು ಗಂಟೆಗಳ ಕಾಲಾವಕಾಶ ನೀಡಿದ್ದು ಅಷ್ಟರೊಳಗಾಗಿ ಅವರು ಸೇವೆಗೆ ಹಾಜರಾಗದಿದ್ದರೆ ಅವರನ್ನು ವಜಾ ಮಾಡುತ್ತೇವೆ ಎಂದ ಅವರು,ಈ ಮಧ್ಯೆ ಹೊಸ ನೇಮಕಾತಿಗಳನ್ನು ಆರಂಭಿಸಿದ್ದು ಕೊರತೆಯಾಗುವ ಹುದ್ದೆಗಳನ್ನು ಆ ಮೂಲಕ ಭರ್ತಿ ಮಾಡುವುದಾಗಿ ಸ್ಪಷ್ಟ ಪಡಿಸಿದರು.
ಈಗ ಮುಷ್ಕರ ನಡೆಸುತ್ತಿರುವ 108 ಸಂಖ್ಯೆಯ ಆಂಬುಲೆನ್ಸ್‌ಗಳ ಚಾಲಕರು ತಮ್ಮ ಮುಷ್ಕರಕ್ಕೆ ನೀಡುತ್ತಿರುವ ಕಾರಣಗಳು ಸಮರ್ಪಕವಾಗಿಲ್ಲ.ಅವರಿಗೆ ನೀಡಬೇಕಾದ ಎಲ್ಲ ಸವಲತ್ತುಗಳನ್ನು ನೀಡಲಾಗಿದೆ ಎಂದು ಅವರು ವಿವರ ನೀಡಿದರು.
ರಾಜ್ಯದಲ್ಲಿರುವ ಬಹುತೇಕ ಆಸ್ಪತ್ರೆಗಳು ರೋಗಿಗಳನ್ನು ಸುಲಿಯುವ ಕೆಲಸ ಮಾಡುತ್ತಿರುವ ಬಗ್ಗೆ ಸುದ್ದಿಗಾರರು ನಿರಂತರವಾಗಿ ಪ್ರಶ್ನೆಗಳ ಸುರಿಮಳೆ ಸುರಿಸಿದಾಗ,ಇಂತಹ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಣದಲ್ಲಿಡಲು ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದರು.
ಓಂಬುಡ್ಸ್‌ಮನ್‌ಗಳನ್ನು ಎಲ್ಲ ಜಿಲ್ಲೆಗಳಲ್ಲಿ ನೇಮಕ ಮಾಡುವುದೂ ಸೇರಿದಂತೆ ತಾವೇ ಅನಿರೀಕ್ಷಿತವಾಗಿ ಧಾಳಿ ಮಾಡುವ ತನಕ ಎಲ್ಲ ಸಾಧ್ಯತೆಗಳ ಕುರಿತೂ ಚರ್ಚಿಸಲಾಗುತ್ತಿದೆ ಎಂದು ಅವರು ಹೇಳಿದರು.
ಖಾಸಗಿ ಆಸ್ಪತ್ರೆಗಳ ಒಳ ಹೊಕ್ಕ ಕೂಡಲೇ ಸಂಪರ್ಕ ವೆಚ್ಚ ಎಂದು ಸುಲಿಗೆ ನಡೆಯುತ್ತಿದೆ. ಮಾತ್ರವಲ್ಲ, ಅನಗತ್ಯವಾಗಿ ಆಸ್ಪತ್ರೆಗೆ ಬಂದವರು ಚಿಕಿತ್ಸೆ ಪಡೆಯಲೇಬೇಕಾದ ಸನ್ನಿವೇಶವನ್ನು ಸೃಷ್ಟಿಸಲಾಗುತ್ತಿದೆ ಎಂಬ ದೂರುಗಳ ಕುರಿತು ಪರಿಶೀಲನೆ ನಡೆಸುವುದಾಗಿ ಅವರು ಹೇಳಿದರು.