ದಾವಣಗೆರೆ: ‘ಸ್ಮಾರ್ಟ್‌ಸಿಟಿ’ಯಾಗಲಿರುವ ದಾವಣಗೆರೆಯಲ್ಲಿ 41 ಸ್ಲಂಗಳು
-ಪ್ರಕಾಶ್ ಎಚ್.ಎನ್
ದಾವಣಗೆರೆ, ಫೆ.1: ಇಲ್ಲಿನ ನಿವಾಸಿಗಳಿಗೆ ಮನೆ ಇದೆ. ಜೊತೆಗೆ ಯಾವಾಗ ನಮ್ಮನ್ನು ಖಾಲಿ ಮಾಡಿಸುತ್ತಾರೋ? ಎನ್ನುವ ಭಯವೂ ಇದೆ. ಇಲ್ಲಿರುವ ಚಿಕ್ಕ ಮನೆಗಳಲ್ಲ್ಲಿ 10-15 ಜನರು ವಾಸಿಸುತ್ತಿದ್ದು, ಆತಂಕದ ಜೊತೆಗೆ ಮೂಲಭೂತ ಸೌಲಭ್ಯಗಳಿಲ್ಲದೆ ನರಕಸದೃಶ ಜೀವನ ಸಾಗಿಸುತ್ತಿದ್ದಾರೆ. ಹೌದು.. ಇದು ‘ಸ್ಮಾರ್ಟ್‌ಸಿಟಿ’ಗೆ ಆಯ್ಕೆಯಾಗಿರುವ ದಾವಣಗೆರೆ ನಗರದಲ್ಲಿರುವ 41 ಸ್ಲಂಗಳಲ್ಲಿ ವಾಸಿಸುತ್ತಿರುವವರ ಕಥೆ-ವ್ಯಥೆ.
ಕಳೆದ 40 ವರ್ಷಗಳಿಂದ ನಗರದಲ್ಲಿದ್ದರೂ ಮನೆಯ ಹಕ್ಕುಪತ್ರ ವಿಲ್ಲದ ಇಲ್ಲಿನ 2 ಸಾವಿರ ಕುಟುಂಬದ 1 ಲಕ್ಷಕ್ಕೂ ಅಧಿಕ ಜನರಿಗೆ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿದೆ.
1992ರಲ್ಲಿ ಚಿತ್ರದುರ್ಗ ಜಿಲ್ಲೆಯಾಗಿದ್ದ ಸಂದರ್ಭ ನಗರದ 38 ಕೊಳಚೆ ಪ್ರದೇಶಗಳನ್ನು ಸ್ಲಂ ಪ್ರದೇಶಗಳಾಗಿ ಘೋಷಿಸಿದ್ದು, ಇನ್ನೂ ಮೂರು ಸ್ಲಂಗಳು ಘೋಷಣೆಯಾಗಿಲ್ಲ. ಇಲ್ಲಿ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ವಾಸವಾಗಿದ್ದು, ಬೀಡಿ ಕಟ್ಟುವವರು, ಕಟ್ಟಡ ಕಾರ್ಮಿಕರು, ಹಮಾಲಿ, ಗ್ಯಾರೇಜ್, ಹೊಟೇಲ್ ಹಾಗೂ ಮಂಡಕ್ಕಿ ಬಟ್ಟಿಯಲ್ಲಿ ದುಡಿಯುವ ವರಿದ್ದಾರೆ. ಇಲ್ಲಿನ ಜನರು ಸುಸಜ್ಜಿತ ರಸ್ತೆ, ಶುದ್ಧ ಕುಡಿಯುವ ನೀರು, ಚರಂಡಿ ವ್ಯವಸ್ಥೆ ಸೇರಿದಂತೆ ಯಾವೊಂದು ಮೂಲಭೂತ ಸೌಲಭ್ಯಗಳಿಲ್ಲದೆ ಅಕ್ಷರಶ ನರಕಯಾತನೆಯ ಬದುಕು ಸಾಗಿಸುತ್ತಿದ್ದಾರೆ.
ಪ್ರತಿಭಟನೆಗೆ ಸಿದ್ಧತೆ: ರಿಯಲ್ ಎಸ್ಟೇಟ್‌ನವರ ದಬ್ಬಾಳಿಕೆ ನಿಯಂತ್ರಣ, ಮನೆಯ ಹಕ್ಕುಪತ್ರ ಸೇರಿದಂತೆ ಮೂಲಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಶಿವನಗರ ಸ್ಲಂ ಸೇರಿದಂತೆ ಅನೇಕ ಸ್ಲಂಗಳ ನಿವಾಸಿಗಳು ಫೆ.15ರಂದು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ, ನಿರಂತರ ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆಎನ್ನುತ್ತಾರೆ ಜಿಲ್ಲಾ ಸ್ಲಂ ನಿವಾಸಿಗಳ ಒಕ್ಕೂಟದ ಸಂಚಾಲಕ ಸತೀಶ್ ಅರವಿಂದ.
ಸ್ಲಂಗಳು
ಬೀಡಿ ಲೇಔಟ್, ಸಿದ್ದರಾಮೇಶ್ವರ ನಗರ, ಇಂದಿರಾ ನಗರ, ನೀಲಮ್ಮನ ತೋಟ, ರಾಮಕೃಷ್ಣ ಹೆಗಡೆ ನಗರ, ಕಬ್ಬೂರು ಬಸಪ್ಪನಗರ, ಕಾರ್ಲ್‌ಮಾರ್ಕ್ಸ್ ನಗರ ಸೇರಿದಂತೆ ಒಟ್ಟು 41 ಸ್ಲಂಗಳು ದಾವಣಗೆರೆಯಲ್ಲಿವೆ. ಹಕ್ಕುಪತ್ರಕ್ಕಾಗಿ ನಿಲ್ಲದ ಹೋರಾಟ
ನಗರದ ಒಟ್ಟು 41 ಸ್ಲಂಗಳ ನಿವಾಸಿಗಳು ತಾವಿರುವ ಮನೆಯ ಹಕ್ಕುಪತ್ರಕ್ಕಾಗಿ ಅನೇಕ ವರ್ಷ ಗಳಿಂದ ಮನವಿ, ಪ್ರತಿಭಟನೆ ನಡೆಸುತ್ತಾ ಬಂದಿದ್ದರೂ ಇಲ್ಲಿಯವರೆಗೂ ಸರಕಾರವಾಗಲಿ, ಮಹಾನಗರ ಪಾಲಿಕೆಯಾಗಲಿ, ಸ್ಲಂಬೋರ್ಡ್ ಆಗಲಿ ಸ್ಪಂದಿಸಿಲ್ಲ. ಮೂಲ ಸೌಲಭ್ಯಗಳು ಇಲ್ಲದ ಈ ಪ್ರದೇಶದ ವಾಸಿಗಳಿಗೆ ಸ್ಲಂಬೋರ್ಡ್ ನೀಡಿದ ಪರಿಚಯ ಪತ್ರ ಬಿಟ್ಟರೆ ಮತ್ತಾವ ಸೌಲಭ್ಯಗಳೂ ಇಲ್ಲ.
2013-14ರಲ್ಲಿ ಶಿವನಗರ ಸ್ಲಂ ಸೇರಿದಂತೆ ಅನೇಕ ಸ್ಲಂಗಳಿಗೆ ಸುಸಜ್ಜಿತ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿತ್ತಾದರೂ ಕೆಲ ಪಟ್ಟಭದ್ರ ಹಿತಾಸಕ್ತಿಗಳು ರಸ್ತೆ, ಚರಂಡಿ ನಿರ್ಮಿಸದೆ ಅನುದಾನದ ಹಣ ಪಡೆದಿದ್ದಾರೆ ಎಂದು ಆರೋಪಿಸುತ್ತಾರೆ ಇಲ್ಲಿನ ಸ್ಲಂ ನಿವಾಸಿಗಳು.
ಅದರಲ್ಲೂ, ಕೆಲ ರಿಯಲ್ ಎಸ್ಟೇಟ್ ದಂಧೆ ನಡೆಸುವವರು ಇಂತಹ ಸ್ಲಂಗಳಲ್ಲಿನ ಜಾಗವನ್ನು ಕಬಳಿಸುವ ಯತ್ನ ನಡೆಸುತ್ತಿದ್ದಾರೆ. ಈ ಕುರಿತು ಸ್ಲಂ ನಿವಾಸಿಗಳು ಅನೇಕ ಬಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರೂ ಕೇವಲ ಭರವಸೆಗಳಷ್ಟೇ ದೊರಕಿವೆ.
ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡುವ ಕುರಿತು ಸರಕಾರ ಇದುವರೆಗೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಹಾಗಾಗಿ, ಹಕ್ಕುಪತ್ರ ನೀಡುವಲ್ಲಿ ವಿಳಂಬವಾಗಿದೆ. ಆದರೆ, ಎಲ್ಲಾ ಸ್ಲಂ ನಿವಾಸಿಗಳಿಗೂ ಪರಿಚಯ ಪತ್ರವನ್ನು ನೀಡಲಾಗುತ್ತಿದೆ. ಅಲ್ಲದೆ, ಮೂಲಸೌಲಭ್ಯ ಕಲ್ಪಿಸಲು ಚುನಾವಣೆ ಮುಗಿದ ನಂತರ ಟೆಂಡರ್ ಕರೆಯಲಾಗುವುದು.
-ಡಿ.ಎ. ಮೆಂಡಿಗೇರಿ, ಕಾರ್ಯಪಾಲಕ ಅಭಿಯಂತರರು, ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ, ದಾವಣಗೆರೆ