×
Ad

ನಗರ ಪ್ರವೇಶಕ್ಕೆ ಖಾಸಗಿ ಬಸ್‌ಗಳ ನಿಷೇಧ; ತಕರಾರು ಅರ್ಜಿಗೆ ಹೈಕೋರ್ಟ್ ಅನುಮತಿ

Update: 2016-02-01 22:33 IST

ಬೆಂಗಳೂರು, ಫೆ.1: ಇನ್ವೆಸ್ಟ್ ಕರ್ನಾಟಕ ಆಯೋಜನೆಯ ಹಿನ್ನೆಲೆಯಲ್ಲಿ ಫೆ.1 ರಿಂದ 5ರವರೆಗೆ ಬೆಳಗ್ಗೆ 7ರಿಂದ ರಾತ್ರಿ 10ಗಂಟೆ ನಡುವೆ ರಾಜಧಾನಿ ಬೆಂಗಳೂರಿಗೆ ಖಾಸಗಿ ಬಸ್‌ಗಳ ಪ್ರವೇಶ ನಿಷೇಧಿಸಿ ಸರಕಾರ ಆದೇಶ ಹೊರಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ತಕರಾರು ಅರ್ಜಿ ಸಲ್ಲಿಸಲು ಅರ್ಜಿದಾರನಿಗೆ ಅನುಮತಿ ನೀಡಿದೆ. ಟೂರಿಸ್ಟ್ ಏಜೆಂಟ್ ಪಿ.ಕೆ.ನವೀನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ರವಿ ಮಳೀಮಠ ಅವರಿದ್ದ ವಿಭಾಗೀಯ ಪೀಠ, ಈ ಆದೇಶ ನೀಡಿದೆ. ಇದು ಟೂರಿಸ್ಟ್ ಏಜೆಂಟ್ ಅರ್ಜಿಯಾಗಿದ್ದರಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗುವುದಿಲ್ಲ. ಹೀಗಾಗಿ ಅರ್ಜಿದಾರರು ಏಕಸದಸ್ಯ ಪೀಠದ ಮುಂದೆ ಹೋಗಿ ತಕರಾರು ಅರ್ಜಿ ಸಲ್ಲಿಸಬಹುದು ಎಂದು ಅರ್ಜಿ ಇತ್ಯರ್ಥಪಡಿಸಿತು. ಜೊತೆಗೆ, ತಕರಾರು ಅರ್ಜಿ ಸಲ್ಲಿಸಲು ಅರ್ಜಿದಾರನಿಗೆ ಅನುಮತಿ ನೀಡಿತು.
ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಉದ್ಯಮಿಗಳು ಇನ್ವೆಸ್ಟ್ ಕರ್ನಾಟಕದಲ್ಲಿ ಭಾಗವಹಿಸುವುದರಿಂದ ವಾಹನಗಳ ಸಂಖ್ಯೆ ಹೆಚ್ಚಾಗಿ ಸಂಚಾರ ದಟ್ಟಣೆ ಏರ್ಪಡಲಿರುವ ಕಾರಣ ಹಗಲು ಹೊತ್ತಿನಲ್ಲಿ ಖಾಸಗಿ ಬಸ್ ಪ್ರವೇಶ ನಿಷೇಧಿಸಲಾಗಿದೆ ಎಂದು ಸರಕಾರ ಹೇಳುತ್ತದೆ. ಆದರೆ, ಖಾಸಗಿ ಬಸ್ ಪ್ರವೇಶದಿಂದ ಸಂಚಾರ ದಟ್ಟಣೆ ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ ಎಂದು ಅರ್ಜಿದಾರರ ವಾದವಾಗಿತ್ತು. ಖಾಸಗಿ ಬಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಖಾಸಗಿ ವಾಹನಗಳನ್ನು ಯಥೇಚ್ಛವಾಗಿ ತಂದರೆ ನಗರದಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಹೀಗಾಗಿ, ಸರಕಾರದ ಅವೈಜ್ಞಾನಿಕವಾಗಿರುವ ಆದೇಶವನ್ನು ರದ್ದುಗೊಳಿಸಬೇಕೆಂದು ಅರ್ಜಿದಾರರು ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News