×
Ad

‘ಇನ್ವೆಸ್ಟ್-ಕರ್ನಾಟಕ’ ಸಮಾವೇಶ ಉದ್ಘಾಟನೆಗೆ ಅರುಣ್ ಜೇಟ್ಲಿ: ದೇಶಪಾಂಡೆ

Update: 2016-02-01 22:34 IST

ಬೆಂಗಳೂರು, ಫೆ.1: ಮೂಲಸೌಕರ್ಯ ಅಭಿವೃದ್ಧಿ ಹಾಗೂ ಕೈಗಾರಿಕಾಭಿವೃದ್ಧಿ ದೃಷ್ಟಿಯಿಂದ ಫೆ.3ರಿಂದ ನಡೆಸಲು ಉದ್ದೇಶಿಸಿರುವ ‘ಇನ್ವೆಸ್ಟ್-ಕರ್ನಾಟಕ’ ಹೂಡಿಕೆದಾರರ ಸಮಾವೇಶವನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಉದ್ಘಾಟಿಸಲಿದ್ದಾರೆ ಎಂದು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಸೋಮವಾರ ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ದಿನಪತ್ರಿಕೆಗಳು ಹಾಗೂ ಸುದ್ದಿವಾಹಿನಿಗಳ ಸಂಪಾದಕರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಫೆ.3ರ ಬೆಳಗ್ಗೆ 10ಗಂಟೆಗೆ ಹೂಡಿಕೆದಾರರ ಸಮಾವೇಶಕ್ಕೆ ಜೇಟ್ಲಿ ಚಾಲನೆ ನೀಡಲಿದ್ದು, ಕೈಗಾರಿಕಾ ವಸ್ತು ಪ್ರದರ್ಶನವನ್ನು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಲಿದ್ದಾರೆ. ಮುಖ್ಯ ಮಂತ್ರಿ ಸಿದ್ಧರಾಮಯ್ಯ ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಫೆ.4ರ ಸಂಜೆ 5ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಪಾಲ್ಗೊಳ್ಳಲಿದ್ದು, ಪ್ರವಾಸೋದ್ಯಮ, ಕೈಗಾರಿಕೆ, ಉತ್ಪಾ ದನೆ, ಮೂಲಸೌಕರ್ಯ, ರಕ್ಷಣೆ, ವಿಮಾನಯಾನ, ಮಾಹಿತಿ ತಂತ್ರಜ್ಞಾನ ಸೇರಿದಂತೆ 14 ಕ್ಷೇತ್ರಗಳಲ್ಲಿ ಬಂಡವಾಳ ಆಕರ್ಷಣೆ ಉದ್ದೇಶವಿದೆ ಎಂದರು.
ಏಳು ರಾಷ್ಟ್ರಗಳ ನಿಯೋಗ:  ಹೂಡಿಕೆದಾರರ ಸಮಾವೇಶದಲ್ಲಿ ಅಮೆರಿಕಾ, ಇಂಗ್ಲೆಡ್, ಜಪಾನ್, ಫ್ರಾನ್ಸ್, ಕೊರಿಯಾ, ಸ್ವೀಡನ್, ಇಟಲಿ ಸೇರಿದಂತೆ ಏಳು ರಾಷ್ಟ್ರಗಳ ಪ್ರತಿನಿಧಿಗಳ ನಿಯೋಗ ಹಾಗೂ ಉದ್ಯಮಿ ಗಳು ಪಾಲ್ಗೊಳ್ಳಲಿದ್ದಾರೆ. ನಾಲ್ಕು ಪ್ರತ್ಯೇಕ ಸಭಾಂಗಣಗಳಲ್ಲಿ ಒಟ್ಟು 26 ಗೋಷ್ಠಿ ಗಳನ್ನು ಏರ್ಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ನೋಂದಣಿ ಸ್ಥಗಿತ: ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳಲು 3,700ಕ್ಕೂ ಹೆಚ್ಚು ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದು, ಇನ್ನೂ ಹೆಚ್ಚು ಜನರು ಆಸಕ್ತಿ ತೋರಿದ್ದಾರೆ. ಆದರೆ, ಸ್ಥಳಾವಕಾಶದ ಕೊರತೆ ಹಿನ್ನೆಲೆಯಲ್ಲಿ ಈಗಾಗಲೇ ನೋಂದಣಿ ಸ್ಥಗಿತಗೊಳಿಸಲಾಗಿದೆ ಎಂದ ಅವರು, ಸಮಾವೇಶಕ್ಕೆ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ ಎಂದು ಹೇಳಿದರು.
ದಿಲ್ಲಿ, ಮುಂಬೈ, ಹೈದರಾಬಾದ್, ದುಬೈ, ಅಮೆರಿಕಾ, ಫ್ರಾನ್ಸ್ ಸೇರಿದಂತೆ ವಿವಿಧೆಡೆಗಳಲ್ಲಿ ‘ಇನ್ವೆಸ್ಟ್-ಕರ್ನಾಟಕ’ ಸಮಾವೇಶದ ಹಿನ್ನೆಲೆಯಲ್ಲಿ ಬಂಡವಾಳ ಆಕರ್ಷಿಸಲು ರೋಡ್ ಶೋಗಳನ್ನು ನಡೆಸ ಲಾಗಿದೆ ಎಂದು ಅವರು ವಿವರಿಸಿದರು.
‘ಇನ್ವೆಸ್ಟ್-ಕರ್ನಾಟಕ’ ಸಮಾವೇಶಕ್ಕೆ ಉದ್ಯಮಿಗಳು ಹಾಗೂ ಹೂಡಿಕೆದಾರರಿಗೆ ದೊರೆಯುತ್ತಿರುವ ಸ್ಪಂದನೆಯನ್ನು ನೋಡಿದರೆ ರಾಜ್ಯ ಸರಕಾರದ ನಿರೀಕ್ಷೆಗೂ ಮೀರಿ ಬಂಡವಾಳ ಹರಿದು ಬರುವ ವಿಶ್ವಾಸವಿದೆ. ಇನ್ವೆಸ್ಟ್ ಕರ್ನಾಟಕ ಸಮಾವೇಶ ದೇಶಕ್ಕೆ ಮಾದರಿಯಾಗಲಿದೆ ಎಂದು ದೇಶಪಾಂಡೆ ಇದೇ ವೇಳೆ ನುಡಿದರು.

ಇಂಧನ ಕೊರತೆ ಇಲ್ಲ
ರಾಜ್ಯದಲ್ಲಿ ತೀವ್ರ ಸ್ವರೂಪದ ಬರ ಪರಿಸ್ಥಿತಿ ಇದ್ದರೂ, ಸಮರ್ಪಕವಾಗಿ ವಿದ್ಯುತ್ ನಿರ್ವಹಣೆ ಮಾಡಲಾಗುತ್ತಿದೆ. ಸೌರಶಕ್ತಿ, ಪವನ ವಿದ್ಯುತ್ ಹಾಗೂ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಲಾಗಿದೆ. ಮುಂದಿನ ಜೂನ್-ಜುಲೈ ವೇಳೆಗೆ 2,500 ಮೆ.ವ್ಯಾ ವಿದ್ಯುತ್ ರಾಜ್ಯದ ಗ್ರಿಡ್‌ಗೆ ಸೇರ್ಪಡೆಯಾಗಲಿದ್ದು, ವಿದ್ಯುತ್ ಸಮಸ್ಯೆಗೆ ಪರಿಹಾರ ದೊರೆಯಲಿದೆ.
ಆರ್.ವಿ.ದೇಶಪಾಂಡೆ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News