ನೀರಿನ ಸೋರಿಕೆ ತಡೆಗಟ್ಟಲು ಕ್ರಮ: ಸಚಿವ ಜಾರ್ಜ್
ಬೆಂಗಳೂರು, ಫೆ. 1: ನಗರದಲ್ಲಿ ಕುಡಿಯುವ ನೀರಿನ ಸೋರಿಕೆಯನ್ನು ಅಂತಾರಾಷ್ಟ್ರೀಯ ಮಾನದಂಡದನ್ವಯ ತಡೆಗಟ್ಟಲು ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ತಿಳಿಸಿದ್ದಾರೆ.
ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಏರ್ಪಡಿಸಿದ್ದ ನೀರು ಸಂರಕ್ಷಣೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಗರದಲ್ಲ್ಲಿ ಶೇ.30ರಿಂದ 50ರಷ್ಟಿದ್ದ ನೀರಿನ ಸೋರಿಕೆಯನ್ನು ಶೇ.36ಕ್ಕೆ ಇಳಿಸಲಾಗಿದೆ. ಆದರೂ, ಇನ್ನೂ ಲೆಕ್ಕಕ್ಕೆ ಸಿಗದ ರೀತಿಯಲ್ಲಿ ಸೋರಿಕೆಯಾಗುತ್ತಿದೆ ಎಂದರು.
ನೀರಿನ ಸೋರಿಕೆ ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಿದರೆ ಎಲ್ಲರಿಗೂ ನೀರು ನೀಡಲು ಸಾಧ್ಯವಾಗಲಿದೆ ಎಂದ ಅವರು, ನಗರಕ್ಕೆ ನೂರು ಕಿ.ಮೀ ದೂರದಿಂದ 1 ಸಾವಿರ ಅಡಿ ಎತ್ತರದಿಂದ 500 ಎಂಎಲ್‌ಡಿ ನೀರನ್ನು ಪ್ರತಿದಿನ ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.
ಬೆಂಗಳೂರು ನಗರದಲ್ಲಿ 1 ಕೋಟಿಯಷ್ಟು ಮಂದಿ ವಾಸ ಮಾಡುತ್ತಿದ್ದು, ಎಲ್ಲರಿಗೂ ನೀರು ಪೂರೈಕೆ ಮಾಡಬೇಕಿದೆ. ಮಾತ್ರವಲ್ಲ ಅಷ್ಟೇ ವೇಗವಾಗಿ ಬೆಳೆಯುತ್ತಿರುವ ನಗರಕ್ಕೆ ನೀರು ಪೂರೈಕೆ ಕಷ್ಟಸಾಧ್ಯ. ಹೀಗಾಗಿ ಈ ಎಲ್ಲ ಸಮಸ್ಯೆಗಳನ್ನು ಅವಲೋಕಿಸಿ ನೀರಿನ ಸೋರಿಕೆ ಪ್ರಮಾಣ ತಡೆಗಟ್ಟುವುದು ಬಹಳ ಮುಖ್ಯ ಎಂದರು
ಜನ ಸಾಮಾನ್ಯರ ಒಳ್ಳೆಯ ಆರೋಗ್ಯಕ್ಕೆ ನೀರು ಅತ್ಯಗತ್ಯ. ವಿವಿಧ ಸಂಸ್ಥೆಗಳು, ಐಟಿ-ಬಿಟಿ ಕೇಂದ್ರಗಳು ಮುಂಚೂಣಿ ಸಾಧಿಸಿದ್ದು, ಎಲ್ಲದಕ್ಕೂ ನೀರಿನ ಅವಶ್ಯಕತೆಯಿದ್ದು, ಈ ಹಿನ್ನೆಲೆಯಲ್ಲಿ ನೀರಿನ ರಕ್ಷಣೆಯೂ ನಮ್ಮ ಕರ್ತವ್ಯ ಎಂದು ಕೆ.ಜೆ. ಜಾರ್ಜ್ ಸಲಹೆ ಮಾಡಿದರು.
ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಜಲ ಮಂಡಳಿ ಅಧ್ಯಕ್ಷ ವಿಜಯ್ ಭಾಸ್ಕರ್ ಮಾತನಾಡಿ, ನೀರಿನ ಸೋರಿಕೆ ತಡೆಗೆ ಮಂಡಳಿ ಗಂಭೀರ ಕ್ರಮಗಳನ್ನು ಕೈಗೊಂಡು ಸುಧಾರಣೆಯತ್ತ ಹೆಜ್ಜೆ ಹಾಕುತ್ತಿದೆ. ಆದರೆ, ಕೆಲವೆಡೆ ಹಳೆಯ ಪೈಪ್‌ಗಳು ನೀರಿನ ಸೋರಿಕೆಗೆ ಕಾರಣವಾಗಿವೆ. ಇವುಗಳನ್ನು ಬದಲಿಸಲು ಆರ್ಥಿಕ ಸಂಪನ್ಮೂಲದ ಕೊರತೆಯಿದೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಗರ್ ಬರ್‌ಕಾಪ್ ಮಾತನಾಡಿ, ನೀರಿನ ನಿರ್ವಹಣೆ ಬಹಳ ಮುಖ್ಯ. ನೈಸರ್ಗಿಕ ಸಂಪನ್ಮೂಲವಾದ ನೀರನ್ನು ಕೃತಕ ವಿಧಾನಗಳಿಂದ ತಯಾರಿಸಲು ಸಾಧ್ಯವಿಲ್ಲ. ಹೀಗಾಗಿ ನೀರಿನ ಬಳಕೆ ವೇಳೆ ಸೋರಿಕೆ ಮತ್ತು ಅಪವ್ಯಯ ತಪ್ಪಿಸಿ ಸದ್ಬಳಕೆಗೆ ಆದ್ಯತೆ ನೀಡಬೇಕೆಂದು ಕರೆ ನೀಡಿದರು.
ಇಂತಹ ಕೆಲಸಗಳಿಗೆ ಇಚ್ಛಾಶಕ್ತಿಯೂ ಅಗತ್ಯ. ನೀರಿನ ಮಿತಿ ರೂಪಿಸಿ ಮಹಿಳೆಯರು, ಮಕ್ಕಳಿಗೆ ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು. ಸಂಸ್ಕರಿಸಿದ ನೀರನ್ನೇ ಪುನರ್ ಬಳಕೆ ಮಾಡುವ ಮುಖಾಂತರವೂ ನೀರಿನ ಸದ್ಬಳಕೆ ಮಾಡುವ ಮೂಲಕ ನೀರನ್ನು ಉಳಿಸಬೇಕೆಂದು ಅವರು ತಿಳಿಸಿದರು.
ಸಮ್ಮೇಳನದಲ್ಲಿ ಭಾರತೀಯ ಜಲ ಕಾಮಗಾರಿ ಸಂಸ್ಥೆಯ ಅಧ್ಯಕ್ಷ ಎಚ್.ಸಿ.ಲ್ಯಾಂಡ್ಗೆ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಜಿ.ಸಿ.ಚಂದ್ರಶೇಖರ್, ಬಿಡಬ್ಲ್ಯೂಎಸ್‌ಎಸ್‌ಬಿ ಮುಖ್ಯ ಎಂಜಿನಿಯರ್ ಕೃಷ್ಣಪ್ಪ, ಶ್ರೀನಿವಾಸರೆಡ್ಡಿ, ಜಗದೀಶ್ ಪಟ್ನಾಯ್ಕರ್ ಪಾಲ್ಗೊಂಡಿದ್ದರು.