ನರೇಗಾ ಅನುಷ್ಠಾನ; ಚಿತ್ರದುರ್ಗ ಜಿಲ್ಲೆಗೆ ರಾಷ್ಟ್ರೀಯ ಪುರಸ್ಕಾರ
ಬೆಂಗಳೂರು, ಫೆ.1: ಮಹಾತ್ಮ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ(ನರೇಗಾ) ಅನುಷ್ಠಾನಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಕ್ಕಾಗಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ರಾಜ್ಯದ ಚಿತ್ರದುರ್ಗ ಜಿಲ್ಲೆಯೂ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನವಾಗಿದೆ.
ನರೇಗಾ ಅನುಷ್ಠಾನವನ್ನು ದಕ್ಷ ಹಾಗೂ ಪರಿಣಾಮ ಕಾರಿಯಾಗಿ ಜಾರಿಗೊಳಿಸಿದ್ದಕ್ಕಾಗಿ ರಾಷ್ಟ್ರದಲ್ಲಿ ಒಟ್ಟು ಆರು ಜಿಲ್ಲೆಗಳನ್ನು ಕೇಂದ್ರ ಸರಕಾರ ಆಯ್ಕೆ ಮಾಡಿದ್ದು, ಈ ಪೈಕಿ ರಾಜ್ಯದ ಚಿತ್ರದುರ್ಗ ಜಿಲ್ಲೆಯೂ ಸೇರಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿಯು, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ತಿಳಿಸಿದ್ದಾರೆ.
ನರೇಗಾ ಅನುಷ್ಠಾನದಲ್ಲಿ ರಾಜ್ಯದ ಜಿಲ್ಲೆಯೊಂದಕ್ಕೆ ಪ್ರಶಸ್ತಿ ದೊರಕಿರುವುದು ಇದೇ ಮೊದಲು. ಫೆ.2ರಂದು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ನರೇಗಾ ಸಮಾರಂಭದಲ್ಲಿ ಆಯಾ ಜಿಲ್ಲೆಯ ಪ್ರತಿನಿಧಿಗಳಿಗೆ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.