×
Ad

ಅರಸೀಕೆರೆ : ಇಬ್ರಾಹೀಂ ಕುಟುಂಬದ ಮೇಲಿನ ಆರೋಪದ ಸುದ್ದಿ ನಿರಾಧಾರ

Update: 2016-02-04 22:15 IST

ಅರಸೀಕೆರೆ (ಕೋಡಿಮಠದ ಮಹಾಸಂಸ್ಥಾನ), ಫೆ.4: ಸೌಹಾರ್ದ ಸಮಾಜ ನಿರ್ಮಾಣಕ್ಕೆ ದುಡಿಯುತ್ತಿರುವ ಸಕಲೇಶಪುರದ ಆನೆಮಹಲ್ ಗ್ರಾಮದ ಕೆ.ಇಬ್ರಾಹೀಂ ಕುಟುಂಬದ ಮೇಲೆ ಮಾಡಲಾಗುತ್ತಿರುವ ಐಸಿಸ್ ನಂಟಿನ ಸುದ್ದಿ ನಿರಾಧಾರ. ಇವರ ಕುಟುಂಬದ ದೇಶ ಪ್ರೇಮವನ್ನು ನಾನು ಸಾಕ್ಷೀಕರಿಸುತ್ತೇನೆ ಎಂದು ಕೋಡಿಮಠದ ಮಹಾ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ತಿಳಿಸಿದ್ದಾರೆ.

 ಪ್ರಕರಣಕ್ಕೆ ಸಂಬಂಧಿಸಿದಂತೆೆ ಕೋಡಿಮಠದ ಮಹಾ ಸಂಸ್ಥಾನದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಉದಯವಾಣಿ ಪತ್ರಿಕೆಯಲ್ಲಿ ಸುದ್ದಿ ಓದಿ ನನಗೆ ಖೇದ, ಆಶ್ಚರ್ಯ, ದಿಗ್ಭ್ರಮೆಯಾಯಿತು ಎಂದರು. ಇಬ್ರಾಹೀಂ ಅವರು ಧರ್ಮ ಸಂಘರ್ಷಕ್ಕೆ ಇಳಿಯದೆ ಧರ್ಮಗಳನ್ನು ಜೋಡಿಸಲು ಯತ್ನಿಸುತ್ತಿರುವ ವ್ಯಕ್ತಿ. ಹಿಂದೂ-ಮುಸ್ಲಿಮ್ ಭಾವೈಕ್ಯ ಮೂಡಿಸಲು ನೂರಾರು ಕಾರ್ಯಕ್ರಮಗಳನ್ನು ಇವರೊಂದಿಗೆ ಹಮ್ಮಿ ಕೊಂಡಿದ್ದೇವೆ. ಸಭೆ ಸಮಾರಂಭ ಮಾಡಿದ್ದೇವೆ. ಜನ-ಮನವನ್ನು ಸ್ಪಷ್ಟಗೊಳಿಸಿದ್ದೇವೆ. ಇಬ್ರಾಹೀಂ ಅವರ ದಿನಚರಿ ನೀತಿ ಕಥೆಗಳನ್ನು ನಾವು ಚೆನ್ನಾಗಿ ಬಲ್ಲೆವು. ಇವರ ಮೇಲಿನ ಹೇಳಿಕೆ ಬಾಲಿಶತನದ ಹೇಳಿಕೆಯಾಗಿದೆ ಎಂದು ಅವರು ತಿಳಿಸಿದರು.

ಘಟನೆಯ ಸತ್ಯಾಸತ್ಯತೆಯನ್ನು ವಿಮರ್ಶೆಮಾಡಿ ಕ್ರಮ ಕೈಗೊಳ್ಳಲಿ, ಇದಕ್ಕೆ ನನ್ನ ವಿರೋಧವಿಲ್ಲ. ಆದರೆ, ನಿರಪರಾಧಿಗೆ ತೊಂದರೆ ಉಂಟಾಗಬಾರದು ಎಂದು ಕೋಡಿಮಠ ಸ್ವಾಮಿ ಹೇಳಿದರು. ಈ ವಿಷಯವನ್ನು ಕೇಳಿ ಇಬ್ರಾಹೀಂ ಅವರು ಬಹಳ ಖಿನ್ನರಾಗಿದ್ದಾರೆ, ಮನೋವ್ಯಥೆಯಲ್ಲಿದ್ದಾರೆ ಎಂದು ತಿಳಿದು ನನಗೆ ಗಾಬರಿಯಾಯಿತು. ಇಬ್ರಾಹೀಂ ಯಾವುದೇ ಕಾರಣಕ್ಕೂ ಗಾಬರಿಪಡುವ ಅಗತ್ಯವಿಲ್ಲ. ಅಲ್ಲಾಹನನ್ನು ನಂಬಿದವರಿಗೆ ಆತ ಎಂದೂ ದುಃಖ ನೀಡುವುದಿಲ್ಲ ಎಂದರು.

ಸತ್ಯಕ್ಕೆ ದೂರವಾದ ವಿಷಯ ಪ್ರಕಟಿಸಿರುವುದು ಶ್ಲಾಘನೀಯವಾದುದಲ್ಲ. ಈ ದೃಷ್ಟಿಯಲ್ಲಿ ವರದಿಗಾರರು ಇವರಿಗಾದ ಅನ್ಯಾಯವನ್ನು ಸರಿಪಡಿಸಿಕೊಡಬೇಕೆಂದು ಆಗ್ರಹಿಸುತ್ತೇನೆ ಎಂದು ಕೋಡಿಮಠ ಶ್ರೀ ಹೇಳಿದರು.

ಮುಸ್ಲಿಮರೆಲ್ಲ ಭಯೋತ್ಪಾದಕರಲ್ಲ, ಭಯೋತ್ಪಾದಕರು ಮುಸ್ಲಿಮರು ಅಲ್ಲವೇ ಅಲ್ಲ ಎಂದು ವಿಶ್ಲೇಶಿಸಿದ ಸ್ವಾಮಿಗಳು, ಮುಸ್ಲಿಮರ ಜೀವನವನ್ನು ಕೋಮುವಾದಿ ಸಂಘಟನೆಗಳು ಸಂಕಷ್ಟಕ್ಕೆ ತಂದು ನಿಲ್ಲಿಸಿವೆ. ಅಮಾಯಕರು ಬಲಿಯಾಗುತ್ತಿರುವುದು ವಿಷಾದನೀಯ ಎಂದು ಅವರು ನೋವು ವ್ಯಕ್ತಪಡಿಸಿದರು. ಇಬ್ರಾಹೀಂರ ಮಗ ಸೌದಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದಾನೆ. ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರಮಣ್ ಗುಪ್ತ, ಇವರ ಮಗನ ಪಾತ್ರ ಏನೂ ಇಲ್ಲವೆಂದು ಹೇಳಿಕೆ ನೀಡಿದ್ದಾರೆ. ಆದರೂ ಕಲ್ಪಿತ ಸುದ್ದಿ ಪ್ರಕಟಿಸಿರುವುದು ಸರಿಯಲ್ಲ ಎಂದರು.

ಇಬ್ರಾಹೀಂ ಅವರಿಗೆ ಧೈರ್ಯತುಂಬಿದ ಕೋಡಿಮಠ ಶ್ರೀ, ಧೈರ್ಯವಾಗಿರಿ, ನಾನೂ ನಿಮ್ಮಾಂದಿಗಿದ್ದೇನೆ. ಸಂಬಂಧಪಟ್ಟವರೊಂದಿಗೆ ಮಾತನಾಡುತ್ತೇನೆ ಎಂದರು.

ಉದಯವಾಣಿಯಿಂದ ಸುಳ್ಳು ಸುದ್ದಿ

ಸಕಲೇಶಪುರ ತಾಲೂಕಿನ ಆನೆಮಹಲ್ ಗ್ರಾಮದ ಯುವಕ ನೌಫಲ್ ಉದ್ಯೋಗಕ್ಕಾಗಿ ಸೌದಿ ಅರೇಬಿಯಾಗೆ ತೆರಳಿದ್ದು, ಈತ ಐಸಿಸ್ ಜೊತೆ ಸಂಪರ್ಕದಲ್ಲಿದ್ದಾನೆ. ನಕಲಿ ಪಾಸ್‌ಪೋರ್ಟ್‌ನಿಂದ ತೆರಳಿದ್ದಾನೆ. ಈತನ ಕುಟುಂಬ ಊರು ಬಿಟ್ಟಿದೆ ಎಂದು ಉದಯವಾಣಿ ಪತ್ರಿಕೆ ಈ ಹಿಂದೆ ಸುಳ್ಳು ವರದಿ ಮಾಡಿತ್ತು.

ಜೈಲಿಗೆ ಬರಲು ಸಿದ್ಧ

ಸ್ವಾಮಿಯನ್ನು ಭೇಟಿಮಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಿಸಿದ ಇಬ್ರಾಹೀಂರನ್ನು ಬಿಗಿದಪ್ಪಿಕೊಂಡ ಕೋಡಿ ಮಠ ಶ್ರೀ, ನಿಮ್ಮ ಕುಟುಂಬ ದ್ರೋಹಮಾಡಲು ಸಾಧ್ಯವಿಲ್ಲ, ನಿಮ್ಮ ಕುಟುಂಬಕ್ಕೆ ಸುಮ್ಮನೆ ಧಕ್ಕೆಮಾಡಿದರೆ ನಾನು ನಿಮ್ಮೆಂದಿಗೆ ಜೈಲಿಗೆ ಬರಲು ಸಿದ್ಧ್ದ ಎಂದರು.

ಆರೆಸ್ಸೆಸ್ ವಿರುದ್ಧ ಕಿಡಿ

   ದೇಶದಲ್ಲಿ ಶಾಂತಿ ಕದಡುತ್ತಿರುವುದೇ ಆರೆಸ್ಸೆಸ್. ಇವರಿಂದ ದೇಶ ಹಾಳಾಗುತ್ತಿದೆ. ಸರ್ವಧರ್ಮಗಳು ಸೌಹಾರ್ದವಾಗಿ ಬದುಕಲು ಆರೆಸ್ಸೆಸ್ ಬಿಡುತ್ತಿಲ್ಲ. ಇವರಿಗೂ ಈ ದೇಶದ ಸಂಸ್ಕೃತಿಗೂ ಸಂಬಂಧವೇ ಇಲ್ಲ. ಇಲ್ಲಿಯ ಮೂಲನಿವಾಸಿಗಳನ್ನು ದಮನಮಾಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News