ಝಿಕಾ ವೈರಸ್ ತಡೆಗೆ ಸಕಲ ಸಿದ್ಧತೆ: ಸಚಿವ ಖಾದರ್
ಬೆಂಗಳೂರು, ಫೆ. 4: ರಾಜ್ಯದಲ್ಲಿ ಝಿಕಾ ರೋಗಾಣು ಹರಡದಂತೆ ಎಲ್ಲ ತುರ್ತು ಕ್ರಮಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೈಗೊಂಡಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.
ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಅರೇರಾ ಟೆಕ್ನಾಲಜೀಸ್ ತಂದಿರುವ ಹೊಸ ಮೊಬೈಲ್ ಅಪ್ಲಿಕೇಷನ್-ಬ್ಲಡ್ ಫಾರ್ ಶೂರ್ ಆಂಬುಲೆನ್ಸ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಝಿಕಾ ರೋಗ ಈಗಾಗಲೇ ಅನೇಕ ರಾಷ್ಟ್ರಗಳಲ್ಲಿ ಹರಡಿದೆ. ಭಾರತಕ್ಕೆ ಕಾಲಿಟ್ಟಿರುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೂ ವಿಶ್ವ ಆರೋಗ್ಯ ಸಂಸ್ಥೆ ಮುನ್ನೆಚ್ಚರಿಕೆ ಕೊಟ್ಟಿರುವ ಹಿನ್ನೆಲೆಯಲ್ಲಿ ನಾವು ಎಲ್ಲ ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.
ಈಗಾಗಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ತಜ್ಞ ವೈದ್ಯರ ತಂಡವನ್ನು ನಿಯೋಜನೆ ಮಾಡಿದ್ದೇವೆ. ವಿದೇಶಗಳಿಂದ ಬರುವವರು ಹಾಗೂ ಇಲ್ಲಿಂದ ವಿದೇಶಗಳಿಗೆ ತೆರಳುವವರನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಲಾಗುವುದು ಎಂದರು.
ಕೇಂದ್ರ ಸರಕಾರ ವಿದೇಶಗಳಿಂದ ಬರುವವರನ್ನು ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ತಪಾಸಣೆ ನಡೆಸುವಂತೆ ಆದೇಶ ನೀಡಿದೆ. ಇದನ್ನು ನಾವೂ ಅನುಸರಿಸುತ್ತಿದ್ದೇವೆ. ಒಂದು ವೇಳೆ ರೋಗಾಣು ಇರುವವರು ಪತ್ತೆಯಾದರೆ ತಕ್ಷಣ ರಾಜೀವ್‌ಗಾಂಧಿ ಆರೋಗ್ಯ ವಿವಿಗೆ ದಾಖಲಿಸುವಂತೆ ಸೂಚಿಸಿದ್ದೇವೆ ಎಂದು ತಿಳಿಸಿದರು.
ಝಿಕಾ ರೋಗವನ್ನು ನಮ್ಮ ಸರಕಾರ ಗಂಭೀರವಾಗಿ ತೆಗೆದುಕೊಂಡಿದೆ. ಗರ್ಭಿಣಿಯರಿಗೆ ಈ ರೋಗ ವ್ಯತಿರಿಕ್ತ ಪರಿಣಾಮ ಉಂಟು ಮಾಡುವುದರಿಂದ ನಮ್ಮ ಇಲಾಖೆ ಅವರಿಗೆ ಪ್ರತ್ಯೇಕ ಕಿಟ್‌ಗಳು ಮತ್ತು ವಿವಿಧ ಸಲಕರಣೆಗಳನ್ನು ಕೊಡಲು ಚಿಂತನೆ ನಡೆಸಿದೆ. ಶೀಘ್ರವೇ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಗರ್ಭಿಣಿಯರಿಗೆ ಎಲ್ಲ ಅನುಕೂಲ ಮಾಡಿಕೊಡುತ್ತೇವೆ ಎಂದು ಹೇಳಿದರು.
ಝಿಕಾ ವೈರಾಣು ಪತ್ತೆ ಹಚ್ಚುವ ಬಗ್ಗೆ ಪ್ರಯೋಗಾಲಯ ರಾಜ್ಯಕ್ಕೆ ಬೇಕೆಂದು ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದು, ಅಲ್ಲಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಪ್ರಯೋಗಾಲಯ ಸ್ಥಾಪನೆಯಾದ ನಂತರ ಸಮಸ್ಯೆ ಇರುವುದಿಲ್ಲ ಎಂದು ಖಾದರ್ ತಿಳಿಸಿದರು.
ಹರೇರಾ ಟೆಕ್ನಾಲಿಜಿಸ್ಟ್ ತಂದಿರುವ ಮೊಬೈಲ್ ಅಪ್ಲಿಕೇಷನ್ ಬ್ಲಡ್ ಫಾರ್ ಶೂರ್ ಆಂಬುಲೆನ್ಸ್ ಸಾರ್ವಜನಿಕರಿಗೆ ಬಹಳ ಉಪಯುಕ್ತವಾಗಲಿದೆ ಎಂದು ಇದೇ ವೇಳೆ ಖಾದರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಅಝೀಜ್ ಮಾತನಾಡಿ, ಗೂಗಲ್ ಪ್ಲೇನಲ್ಲಿ ಈ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡು ರಿಜಿಸ್ಟರ್ ಮಾಡಿಕೊಳ್ಳಬೇಕು. ತುರ್ತು ಸಂದರ್ಭದಲ್ಲಿ 4ಕಿ.ಮೀ. ಸುತ್ತಲಿನಲ್ಲಿ ಎಲ್ಲೆಲ್ಲಿ ರಕ್ತ ಸಿಗುತ್ತದೆ, ಹೇಗೆ ಪಡೆಯಬೇಕು ಎಂಬೆಲ್ಲಾ ಸಂಪೂರ್ಣ ವಿವರವನ್ನು ಪಡೆದುಕೊಳ್ಳಬಹುದು. ಈ ಸೇವೆಗಾಗಿ 25 ಆಂಬ್ಯುಲೆನ್ಸ್‌ಗಳನ್ನು ಬಳಸಿಕೊಳ್ಳಲಾಗಿದೆ. ಈಗಾಗಲೇ ಏಳೂವರೆ ಸಾವಿರ ಮಂದಿ ಮೊಬೈಲ್ ಅಪ್ಲಿಕೇಷನ್ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-67335555 ಅನ್ನು ಸಂಪರ್ಕಿಸಲು ಕೋರಲಾಗಿದೆ.