ಥಾಯ್ಲೆಂಡ್ ಮಾದರಿಯಲ್ಲಿ ಕರಾವಳಿ ಪ್ರದೇಶಗಳ ಅಭಿವೃದ್ಧಿ: ಸಚಿವ ಆರ್.ವಿ.ದೇಶಪಾಂಡೆ
ಬೆಂಗಳೂರು, ಫೆ. 4: ರಾಜ್ಯದಲ್ಲಿನ ಕರಾವಳಿ ಪ್ರದೇಶಗಳಿಗೆ ದೇಶ-ವಿದೇಶಿ ಪ್ರವಾಸಿಗರ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ದೃಷ್ಟಿಯಿಂದ ಥಾಯ್ಲೆಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ವಿಸ್ತೃತಾ ಯೋಜನಾ ವರದಿಯನ್ನು ಸಿದ್ಧಪಡಿಸಿದ್ದು, ಬಂಡವಾಳ ಹೂಡಿಕೆಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಗುರುವಾರ ‘ಇನ್ವೆಸ್ಟ್-ಕರ್ನಾಟಕ’ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಉದ್ಯಮಿಗಳೊಂದಿಗಿನ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ವಿಶೇಷವಾಗಿ ಕರಾವಳಿ ಪ್ರದೇಶಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ ಎಂದರು.
ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಬಂಡವಾಳ ಹೂಡಿಕೆಗೆ ಕರಾವಳಿ ನಿಯಂತ್ರಣ ಪ್ರಾಧಿಕಾರದ ನಿಯಮಾವಳಿಗಳನ್ನು ಸಡಿಲಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದ ದೇಶಪಾಂಡೆ, ರಾಜ್ಯದಲ್ಲಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕರ್ನಾಟಕ ರಾಜ್ಯದಲ್ಲಿ ಒಟ್ಟು 400ಕ್ಕೂ ಹೆಚ್ಚು ಪ್ರವಾಸಿ ತಾಣಗಳಿದ್ದು, ‘ಪ್ರವಾಸಿ ಮಿತ್ರ’ ಯೋಜನೆಯ ಮೂಲಕ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದ ಅವರು, ಪ್ರವಾಸಿಗರೊಂದಿಗೆ ಸಂವಹನಕ್ಕೆ ಸಿಬ್ಬಂದಿ ನಿಯೋಜಿಸಲಾಗುತ್ತಿದೆ ಎಂದು ದೇಶಪಾಂಡೆ ಇದೇ ವೇಳೆ ತಿಳಿಸಿದರು.
ರಾಜ್ಯದ 6 ವಿಶ್ವವಿದ್ಯಾನಿಲಯಗಳಲ್ಲಿ ಏಳು ವಿವಿಧ ಭಾಷೆಗಳ ಬಗ್ಗೆ ಪ್ರವಾಸೋದ್ಯಮ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದ್ದು, ಅವರನ್ನು ಪ್ರವಾಸಿಗರಿಗೆ ಪ್ರೇಕ್ಷಣೀಯ ತಾಣಗಳನ್ನು ಪರಿಚಯಿಸಲು ನೇಮಕ ಮಾಡಲಾಗುತ್ತಿದೆ ಎಂದು ದೇಶಪಾಂಡೆ ವಿವರಿಸಿದರು.