ಆ್ಯಂಬುಲೆನ್ಸ್ ಸಿಬ್ಬಂದಿಗೆ ಗಡುವು ವಿಸ್ತರಣೆ
ಬೆಂಗಳೂರು, ಫೆ.4: ಆರೋಗ್ಯ ಕವಚ- 108 ಆ್ಯಂಬುಲೆನ್ಸ್ ಚಾಲಕರು ಕೆಲಸಕ್ಕೆ ಹಾಜ ರಾಗಲು ನೀಡಿದ್ದ 48 ಗಂಟೆಗಳ ಕಾಲಾ ವಕಾಶವನ್ನು ಇನ್ನೂ ಒಂದು ದಿನದ ಮಟ್ಟಿಗೆ ವಿಸ್ತರಿಸಲಾಗಿದೆ ಎಂದು ಜಿವಿಕೆಯ ರಾಜ್ಯ ಮುಖ್ಯಸ್ಥ ಅಭಿನವ್ ಜೈರಾಮ್ ತಿಳಿಸಿದ್ದಾರೆ.
ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನು 24 ಗಂಟೆ ಯೊಳಗೆ ನೌಕರರು ಕೆಲಸಕ್ಕೆ ಹಾಜರಾಗದೇ ಇದ್ದಲ್ಲಿ ಅವರ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಈಗಾಗಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, ಪತ್ರಿಕೆಗಳಲ್ಲಿ ಹುದ್ದೆ ಬಗ್ಗೆ ಜಾಹೀರಾತು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಷರತ್ತುಗಳು ಸಡಿಲಿಕೆ: ಶಿಸ್ತುಪಾಲನೆ ಹಾಗೂ ಷರತ್ತು ಪಾಲಿಸುವಂತೆ ನೌಕರರಿಗೆ ಹೇಳಿದ್ದೇ ತಪ್ಪು ಎಂಬಂತೆ ಸಿಬ್ಬಂದಿ ವರ್ತಿಸುತ್ತಿದ್ದಾರೆ. ಸಿಬ್ಬಂದಿಯ ಒತ್ತಾಯದ ಮೇರೆಗೆ ಕೆಲ ಷರತ್ತು ಗಳನ್ನು ಸಡಿಲಗೊಳಿಸಲಾಗಿದೆ ಎಂದು ತಿಳಿಸಿದ ಅವರು, 108 ಆ್ಯಂಬುಲೆನ್ಸ್ ನೌಕರರು ಬೇಡಿಕೆ ಇದ್ದಲ್ಲಿ ಸರಕಾರದ ಗಮನಕ್ಕೆ ತಂದು ಸಮಸ್ಯೆ ಉಂಟು ಮಾಡಬಾರದು ಎಂಬ ಷರತ್ತನ್ನು ಸಡಿಲಿಸಲಾಗಿದೆ. ಬೇಡಿಕೆಯನ್ನು ಮೊದಲು ಜಿವಿಕೆ ಆಡಳಿತ ಮಂಡಳಿ ಮುಂದೆ ಇಡಬೇಕು. ಇಲ್ಲಿ ಈಡೇರದಿದ್ದರೆ ನಂತರ ಸರಕಾರದ ಮಟ್ಟದಲ್ಲಿ ಸಮಸ್ಯೆ ಕೊಂಡೊಯ್ಯ ಬಹುದು ಎಂದು ತಿಳಿಸಲಾಗಿತ್ತು.
ಅದೇ ರೀತಿ ಸಮಸ್ಯೆ ಎಂದಾಕ್ಷಣ ಮಾಧ್ಯಮಗಳ ಮುಂದೆ ಹೋಗಬಾರದು ಎಂಬ ಷರತ್ತು ವಿಧಿಸಲಾಗಿತ್ತು. ಈ ಷರತ್ತನ್ನು ಸಡಿಲಿಸಿ, ಸರಕಾರದ ಮಟ್ಟದಲ್ಲೂ ಸಮಸ್ಯೆ ಬಗೆಹರಿಯದಿದ್ದರೆ, ನಂತರ ಮಾಧ್ಯಮಗಳ ಮುಂದೆ ಹೋಗಬಹುದು ಎಂದು ಬದಲಿಸ ಲಾಗಿದೆ. ಸಿಬ್ಬಂದಿಗಳ ಒತ್ತಾಯದಂತೆ 3 ಷರತ್ತುಗಳಲ್ಲಿ ಬದಲಾವಣೆ ಮಾಡಲಾಗಿದೆ. ಈಗಲಾದರೂ ಸಿಬ್ಬಂದಿ ಪ್ರತಿಭಟನೆ ಕೈಬಿಟ್ಟು ಕೆಲಸಕ್ಕೆ ತೆರಳಬೇಕು ಎಂದು ಮನವಿ ಮಾಡಿದರು.
ವಜಾಗೊಂಡ 160 ಸಿಬ್ಬಂದಿಯ ಮರು ನೇಮಕಾತಿ ಇಲ್ಲ
ಎಸ್ಮಾ ಕಾಯ್ದೆ ಜಾರಿಯಲ್ಲಿದ್ದರೂ ಕೆಲ ಸಿಬ್ಬಂದಿ ಇತರೆ ಸಿಬ್ಬಂದಿಗೆ ಕೆಲಸಕ್ಕೆ ತೆರಳದಂತೆ ಮನವೊಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಒತ್ತಡ ಹೇರಿದ್ದ 160 ಸಿಬ್ಬಂದಿಯನ್ನು ಎಸ್ಮಾ ಕಾಯ್ದೆಯಡಿ ಕೆಲಸದಿಂದ ವಜಾ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಈ ಸಿಬ್ಬಂದಿಯನ್ನು ಕೆಲಸಕ್ಕೆ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ.
ಪರ್ವೇಜ್, ಮಾರ್ಕೆಟಿಂಗ್ ಮ್ಯಾನೇಜರ್, ಜಿವಿಕೆ.
108 ಆ್ಯಂಬುಲೆನ್ಸ್ ಸಿಬ್ಬಂದಿಯ ಎಲ್ಲ ಬೇಡಿಕೆಗಳನ್ನು ಈಗಾಗಲೇ ಈಡೇರಿಸಿದರೂ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಿರುವವರನ್ನು ವಜಾಗೊಳಿಸುವ ಅಧಿಕಾರ ಜಿವಿಕೆ ಸಂಸ್ಥೆಗೆ ಬಿಟ್ಟದ್ದು. ಇದರಲ್ಲಿ ಯಾವುದೇ ಕಾರಣಕ್ಕೂ ಸರಕಾರ ಮಧ್ಯ ಪ್ರವೇಶಿಸುವುದಿಲ್ಲ. ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.
ಯು.ಟಿ.ಖಾದರ್, ಆರೋಗ್ಯ ಸಚಿವ.