ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಖಾಸಗಿಯವರ ಪಾತ್ರ ನಿರ್ಣಾಯಕ: ಸಚಿವ ಬೇಗ್
ಬೆಂಗಳೂರು, ಫೆ.4: ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಖಾಸಗಿ ವಲಯದ ಪಾತ್ರ ನಿರ್ಣಾಯಕ. ಆ ಹಿನ್ನೆಲೆಯಲ್ಲಿ ರಸ್ತೆ, ರೈಲ್ವೆ, ನಾಗರಿಕ ವಿಮಾನಯಾನ ಮತ್ತು ದೂರಸಂಪರ್ಕ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಖಾಸಗಿ ಸಹಭಾಗಿತ್ವದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಆರ್.ರೋಷನ್ ಬೇಗ್ ಹೇಳಿದ್ದಾರೆ.
ಗುರುವಾರ ‘ಇನ್ವೆಸ್-ಕರ್ನಾಟಕ’ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷ ರಾಜ್ಯದ ಅಭಿವೃದ್ಧಿ ದರ (ಜಿಎಸ್‌ಡಿಪಿ) ಶೇ.7ರಷ್ಟಾಗಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೈಗಾರಿಕಾಭಿವೃದ್ಧಿ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ನಿಟ್ಟಿನಲ್ಲಿ ಮೂಲ ಸೌಕರ್ಯ ಕ್ಷೇತ್ರದ ಕೊಡುಗೆ ಮಹತ್ತರ ವಾದುದು ಎಂದ ಅವರು, ಮೂಲಸೌಕರ್ಯ ವಲಯದಲ್ಲಿ ಹೊಸ ಆವಿಷ್ಕಾರ (ಇನ್ನೋವೇಶನ್) ಮತ್ತು ಹಣಕಾಸು ಪೂರೈಕೆಗೆ ಸರಕಾರ ಹೆಚ್ಚಿನ ಒತ್ತು ನೀಡಲಿದೆ. ಅದರಲ್ಲೂ ನಗರ ಮೂಲಸೌಕರ್ಯಅಭಿವೃದ್ಧಿ, ಘನತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯದಲ್ಲಿನ ರಸ್ತೆ, ವಿಮಾನ ನಿಲ್ದಾಣ ಸೇರಿದಂತೆ ಮೂಲ ಸೌಕರ್ಯದ ಮಾದರಿಯು ಭಾರತದ ಅತ್ಯುತ್ತಮ ಮೂಲಸೌಕರ್ಯ ಮಾದರಿಗಳಲ್ಲಿ ಒಂದಾಗಿದೆ. ಈ ವಲಯದಲ್ಲಿ ಹೂಡಿಕೆಗೆ ಅಪರಿಮಿತ ಅವಕಾಶಗಳಿವೆ ಎಂದು ರೋಷನ್‌ಬೇಗ್ ಇದೇ ವೇಳೆ ಹೂಡಿದಾರರಿಗೆ ಆಹ್ವಾನ ನೀಡಿದರು.
ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ.ವಿ.ರಾಜಪ್ಪ ಮಾತನಾಡಿ, ಕೈಗಾರಿಕಾ ಕಾರಿಡಾರ್, ವೈಮಾನಿಕ ಪಥ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯ ಯೋಜನೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇಶದ ಅತ್ಯುತ್ತಮ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ಮೂಲ ಸೌಕರ್ಯ ವಲಯದಲ್ಲಿ ಆಕರ್ಷಕ ಅವಕಾಶಗಳಿವೆ ಎಂದು ಹೇಳಿದರು.
ವಿಚಾರ ಸಂಕಿರಣದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಹಿರಿಯ ಅಧಿಕಾರಿಗಳಾದ ಸಿ.ಜಯರಾಮ್, ಪ್ರದೀಪ್ ಸಿಂಗ್ ಕರೋಲಾ, ಜಿವಿಕೆ ಸಂಸ್ಥೆ ಉಪಾಧ್ಯಕ್ಷ ಜಿ.ವಿ.ಸಂಜಯ್ ರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.