ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಕ್ರಿಯಾ ಯೋಜನೆ: ಸಚಿವ ಜಾರ್ಜ್
ಬೆಂಗಳೂರು, ಫೆ. 4: ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸುಮಾರು 20 ಸಾವಿರ ಕೋಟಿ ರೂ.ವೆಚ್ಚದಲ್ಲಿ ನಾಲ್ಕು ಎಲಿವೇಟೆಡ್ ಕಾರಿಡಾರ್ ರಸ್ತೆ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಗುರುವಾರ ಇನ್ವೆಸ್ಟ್-ಕರ್ನಾಟಕ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ನಗರದ ಮೂಲಭೂತ ಸೌಲಭ್ಯ ಕುರಿತು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 9 ಸಾವಿರ ಕೋಟಿ ರೂ.ವೆಚ್ಚದಲ್ಲಿ ನಗರದ ಸಬರ್‌ಬನ್ ರೈಲ್ವೆ ಯೋಜನೆ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ರಾಜ್ಯದ ಜನರ ಮೆಚ್ಚುಗೆಗೆ ಪಾತ್ರವಾಗಿರುವ ಟೆಂಡರ್ ಶೂರ್ ಯೋಜನೆಯಡಿ ನಗರದ 300 ಕಿ.ಮೀ. ರಸ್ತೆಯನ್ನು ವೈಟ್ ಟ್ಯಾಪಿಂಗ್ ಹಾಗೂ ಮೇಲ್ಸೇತುವೆ, ಕೆಳ ಸೇತುವೆಗಳ ನಿರ್ಮಾಣ ಯೋಜನೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಜಾರ್ಜ್ ಇದೇ ವೇಳೆ ವಿವರಿಸಿದರು.
ನಮ್ಮ ಮೆಟ್ರೋ ಶೀಘ್ರ ಪೂರ್ಣ: ನಗರದ ಸಂಚಾರ ದಟ್ಟಣೆ ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿರುವ ‘ನಮ್ಮ ಮೆಟ್ರೋ’ ರೈಲ್ವೆ ಯೋಜನೆಯ ಎರಡು ಮತ್ತು ಮೂರನೆ ಹಂತವನ್ನು 2016 ಡಿಸೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೆ.ಜೆ.ಜಾರ್ಜ್ ತಿಳಿಸಿದರು.
ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ತುಮಕೂರು, ಬೆಳಗಾವಿ, ಕಲಬುರಗಿ ಹಾಗೂ ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ರಸ್ತೆಗಳ ಅಭಿವೃದ್ಧಿ ಹಾಗೂ ಅಗತ್ಯ ಮೂಲಭೂತ ಸೌಲಭ್ಯದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದ ಅವರು, ಬೆಂಗಳೂರು ನಗರದಲ್ಲಿ ಬಸ್ ನಿಲ್ದಾಣಗಳ ನಿರ್ಮಾಣ ಹಾಗೂ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
3.5 ಬಿಲಿಯನ್ ಡಾಲರ್ ವೆಚ್ಚದಲ್ಲಿ ನಗರದಲ್ಲಿ 20 ಬಹುಮಹಡಿ ಕಾರು ನಿಲ್ದಾಣ ನಿರ್ಮಾಣ ಸೇರಿ ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದ್ದು, ಹೂಡಿಕೆದಾರರಿಗೆ ಬೆಂಗಳೂರು ನಗರದ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ವಿಪುಲ ಅವಕಾಶಗಳಿವೆ. ಅಲ್ಲದೆ, ರಾಜ್ಯದ ಕೈಗಾರಿಕಾ ನೀತಿ ಹೂಡಿಕೆದಾರರ ಸ್ನೇಹಿಯಾಗಿದೆ ಎಂದು ತಿಳಿಸಿದರು.
ಪೌರಾಡಳಿತ, ಸಾರ್ವಜನಿಕ ಉದ್ದಿಮೆ ಸಚಿವ ಖಮರುಲ್ ಇಸ್ಲಾಂ, ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ, ಹಿರಿಯ ಅಧಿಕಾರಿ ಟಿ.ಎಂ. ವಿಜಯ ಭಾಸ್ಕರ್ ಸೇರಿದಂತೆ ವಿದೇಶಿ ಪ್ರತಿನಿಧಿಗಳು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.