ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ: ಕಿರಣ್
ಬೆಂಗಳೂರು, ಫೆ. 4: ಭಾರತ ದೇಶಕ್ಕೆ ಹೋಲಿಸಿದರೆ ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹೆಚ್ಚು ಮಹಿಳಾ ಉದ್ಯಮಿಗಳಿದ್ದು, ಅವರಿಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸಾಲ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಬಯೋಕಾನ್ ಮುಖ್ಯಸ್ಥೆ ಡಾ.ಕಿರಣ್ ಮಜುಂದಾರ್ ಷಾ ಮನವಿ ಮಾಡಿದ್ದಾರೆ.
ಗುರುವಾರ ‘ಇನ್ವೆಸ್ಟ್-ಕರ್ನಾಟಕ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ‘ಮಹಿಳಾ ಉದ್ಯಮಶೀಲತೆ’ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಂದು ಕಾಲಕ್ಕೆ ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ವಿಕಲಚೇತನರಾಗಿದ್ದರು. ಆದರೆ, ಇದೀಗ ಮಹಿಳಾ ಉದ್ಯಮಿಗಳು ಪುರುಷರಿಗೆ ಸ್ಪರ್ಧೆ ನೀಡುವ ಮಟ್ಟದಲ್ಲಿ ಬೆಳೆದಿದ್ದಾರೆಂಬುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.
ಈ ಹಿಂದೆ ಮಹಿಳಾ ಉದ್ಯಮಿಗಳ ಬಗ್ಗೆ ಬ್ಯಾಂಕುಗಳು ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ತೀವ್ರ ಸ್ವರೂಪದ ತಾತ್ಸಾರ ಮನೋಭಾವನೆ ಇತ್ತು. ಇದೀಗ ಸಂಪೂರ್ಣ ಪರಿಸ್ಥಿತಿ ಬದಲಾಗಿದೆ ಎಂದ ಅವರು, ನಮ್ಮ ದೇಶದಲ್ಲಿ ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮಿಗಳಿದ್ದಾರೆ ಎಂದರು.
ಹೂಡಿಕೆಗೆ ವಿಪುಲ ಅವಕಾಶಗಳು: ಕರ್ನಾಟಕ ರಾಜ್ಯದಲ್ಲಿ ಹೂಡಿಕೆಗೆ ವಿಪುಲ ಅವಕಾಶಗಳಿದ್ದು, ರಾಜ್ಯ ಸರಕಾರ ಬಂಡವಾಳ ಹೂಡಿಕೆದಾರರ ಸ್ನೇಹಿ ರಾಜ್ಯವಾಗಿದೆ ಎಂದು ಬಣ್ಣಿಸಿದ ಅವರು, ಮಹಿಳಾ ಉದ್ಯಮಿಗಳು ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಅತ್ಯಂತ ಸೂಕ್ತವಾದ ಸ್ಥಳ ಎಂದು ತಮ್ಮ ಅನುಭವಗಳನ್ನು ಮಹಿಳಾ ಉದ್ಯಮಿಗಳೊಂದಿಗೆ ಹಂಚಿಕೊಂಡರು.
ಬೆಂಗಳೂರು ನಗರದಲ್ಲಿ ಕುಶಲತೆಯುಳ್ಳ ಮಾನವ ಸಂಪನ್ಮೂಲವಿದ್ದು, ಆಧುನಿಕ ತಾಂತ್ರಿಕತೆ, ಮಾಹಿತಿ ತಂತ್ರಜ್ಞಾನ ಹಾಗೂ ಹೊಸ ಸಂಶೋಧನೆಗಳು ಇಲ್ಲಿದ್ದು, ಪೈಪೋಟಿ ನೀಡುವ ದೃಷ್ಟಿಯಿಂದಲೂ ಬೆಂಗಳೂರು ಮಹಿಳಾ ಉದ್ಯಮಿಗಳಿಗೆ ಉತ್ತಮ ಎಂದ ಅವರು, ಮಹಿಳೆಯರು ಯಾವುದೇ ಹಿಂಜರಿಕೆ ಇಲ್ಲದೆ ಉದ್ಯಮ ಕ್ಷೇತ್ರದಲ್ಲಿ ಮುಂದೆ ಬರಬೇಕು ಎಂದು ಆಹ್ವಾನಿಸಿದರು.
ಮಹಿಳೆಯರಿಗೆ ವಿಶೇಷ ಆದ್ಯತೆ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಕೆ.ರತ್ನಪ್ರಭಾ ಮಾತನಾಡಿ, ಸರಕಾರ ಹೊಸ ಕೈಗಾರಿಕಾ ನೀತಿಯಡಿ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಹಾಗೂ ಅಂಗವಿಕಲರಿಗೆ ವಿಶೇಷ ಆದ್ಯತೆ ನೀಡಿದೆ. ಅಲ್ಲದೆ, ಕೈಗಾರಿಕಾಭಿವೃದ್ಧಿ ಪ್ರದೇಶಗಳಲ್ಲಿ ಮಹಿಳೆಯರಿಗೆ ಶೇ.5ರಷ್ಟು ಮೀಸಲಾತಿ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಮಹಿಳಾ ಉದ್ಯಮಿಗಳೆಲ್ಲ ಒಗ್ಗಟ್ಟಿನಿಂದ ಪುರುಷ ಉದ್ಯಮಿ ಗಳೊಂದಿಗೆ ಸ್ಪರ್ಧೆಯೊಡ್ಡಲು ಮುಂಚೂಣಿಗೆ ಬರಬೇಕು. ಹಣಕಾಸಿನ ವಹಿವಾಟು ಮತ್ತು ಮಾರುಕಟ್ಟೆ ಸಮಸ್ಯೆಗಳು ಮತ್ತು ಸವಾಲುಗಳಿಗೆ ಚರ್ಚೆ ಮತ್ತು ಸಂವಾದದ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
‘ಮಹಿಳಾ ಉದ್ಯಮ ವಾಣಿ’ ಪತ್ರಿಕೆ ಹಾಗೂ ವೆಬ್‌ಸೈಟ್ ಅನ್ನು ಲೋಕಾರ್ಪಣೆ ಮಾಡಲಾಯಿತು. ಇದೇ ವೇಳೆ ಸ್ಯಾನ್‌ಫ್ರಾಸಿಸ್ಕೋ ಹಾಗೂ ಬೆಂಗಳೂರು ಮಧ್ಯೆ ಒಡಂಬಡಿಕೆಯೊಂದಕ್ಕೆ ಸಹಿ ಹಾಕಲಾಯಿತು. ಸಂಕಿರಣದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ವಿಪ್ರೋ ಸಂಸ್ಥೆ ಸುನಿತಾ, ನಂದಿನಿ ಟಂಡನಾ, ಮೋನಿಕಾ, ಬಿಎಚ್‌ಇಎಲ್‌ನ ಶ್ರೀಕಾಂತ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.