ವಿದೇಶಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ; ಆರೋಪಿಗಳ ಬಂಧನ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಫೆ. 4: ನಗರದ ಹೊರವಲಯದಲ್ಲಿನ ಹೇಸರಘಟ್ಟದಲ್ಲಿ ವಿದೇಶಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಐದು ಮಂದಿ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಗುರುವಾರ ‘ಇನ್ವೆಸ್ಟ್-ಕರ್ನಾಟಕ’ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಪ್ರಕರಣ ದಾಖಲಿಸಲು ವಿಳಂಬ ನೀತಿ ಅನುಸರಿಸಿರುವ ಬಗ್ಗೆ ಪೊಲೀಸ್ ಅಧಿಕಾರಿಗಳಿಂದ ವರದಿ ಕೇಳಲಾಗಿದೆ ಎಂದರು.
ವಿದೇಶಿ ವಿದ್ಯಾರ್ಥಿನಿಯ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು ವಿಳಂಬ ಮಾಡಿದ ಪೊಲೀಸ್ ಠಾಣಾಧಿಕಾರಿಗಳ ವಿರುದ್ಧ ಕ್ರಮಕ್ಕೂ ಸೂಚಿಸಲಾಗಿದೆ ಎಂದ ಅವರು, ಈ ಸಂಬಂಧ ರಾಜ್ಯ ಸರಕಾರ ವಿದೇಶಾಂಗ ಸಚಿವರಿಗೆ ವರದಿಯನ್ನೂ ನೀಡಲಾಗಿದೆ ಎಂದರು.
ಕೂಡ್ಲಿಗಿ ಡಿವೈಎಸ್‌ಪಿ ಅನುಪಮಾ ಶೆಣೈ ಅನ್ಯ ಸೇವೆ ನಿಮಿತ್ತ (ಒಒಡಿ) ನಿಯೋಜಿಸಿದ್ದು, ಆ ಪ್ರಕರಣದಲ್ಲಿ ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕಿ ಕೈವಾಡವಿದೆ ಎಂಬುದು ಸತ್ಯಕ್ಕೆ ದೂರ ಎಂದ ಸಿದ್ಧರಾಮಯ್ಯ, ಇಲಾಖೆಯ ಹಿರಿಯ ಅಧಿಕಾರಿಗಳು ಅನುಪಮಾ ಅವರನ್ನು ಅದೇ ಸ್ಥಳಕ್ಕೆ ಪುನಃ ನಿಯೋಜನೆ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಸಂಚಾರ ದಟ್ಟಣೆ ಸಾಮಾನ್ಯ: ಸಂಚಾರ ದಟ್ಟಣೆಗೆ ಬೆಂಗಳೂರು ಮತ್ತು ನ್ಯೂಯಾರ್ಕ್ ಎಂಬ ವ್ಯತ್ಯಾಸವಿಲ್ಲ. ಇತ್ತೀಚಿನ ದಿನಗಳಲ್ಲಿ ಎಲ್ಲ ಕಡೆಗಳಲ್ಲಿ ದಟ್ಟಣೆ ಸಾಮಾನ್ಯ. ಆದರೂ, ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಇನ್ವೆಸ್ಟ್-ಕರ್ನಾಟಕ ಹೂಡಿಕೆದಾರರ ಸಮಾವೇಶದಲ್ಲಿ ಉದ್ಯಮಿಗಳು ರಾಜ್ಯದಲ್ಲಿ ಎಷ್ಟು ಮೊತ್ತದ ಹೂಡಿಕೆ ಮಾಡಿದ್ದಾರೆಂಬ ಮಾಹಿತಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಿಲ್ಲ. ಒಡಂಬಡಿಕೆಗಳನ್ನು ಆಧರಿಸಿ ಶೀಘ್ರದಲ್ಲೆ ಆ ಮಾಹಿತಿ ದೊರೆಯಲಿದೆ. ರಾಜ್ಯ ಸರಕಾರದ ನಿರೀಕ್ಷೆ ಮೀರಿ ಹೂಡಿಕೆದಾರರ ಸಮಾವೇಶ ಯಶಸ್ವಿಯಾಗಿದೆ ಎಂದು ಅವರು ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.