ಇನ್ವೆಸ್ಟ್ ಕರ್ನಾಟಕ-2016: 3.08 ಲಕ್ಷ ಕೋ.ರೂ. ಬಂಡವಾಳ ಹೂಡಿಕೆ

Update: 2016-02-04 18:24 GMT

7.73 ಲಕ್ಷ ಉದ್ಯೋಗ ಸೃಷ್ಟಿ: ಸಿದ್ದರಾಮಯ್ಯ

ಬೆಂಗಳೂರು, ಫೆ.4: ರಾಜ್ಯ ಸರಕಾರದ ಮಹತ್ವಾಕಾಂಕ್ಷಿಯ ಇನ್ವೆಸ್ಟ್ ಕರ್ನಾಟಕ 2016 ಜಾಗತಿಕ ಹೂಡಿಕೆದಾರರ ಸಮಾವೇಶವು ನಿರೀಕ್ಷೆಯಂತೆ ಯಶಸ್ವಿಯಾಗಿದ್ದು, ರಾಜ್ಯಕ್ಕೆ 3.08 ಲಕ್ಷ ಕೋಟಿ ರೂ.ಬಂಡವಾಳ ಹೂಡಿಕೆಯಾಗುವ 121 ಒಡಂಬಡಿಕೆಗಳಿಗೆ ಸಹಿ ಹಾಕಲಾಗಿದೆ. ಇದರಿಂದಾಗಿ, 7.73 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಗುರುವಾರ ನಗರದ ಅರಮನೆಯಲ್ಲಿ ಇನ್ವೆಸ್ಟ್ ಕರ್ನಾಟಕ 2016 ಜಾಗತಿಕ ಹೂಡಿಕೆದಾರರ ಸಮಾವೇಶದಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎರಡು ದಿನಗಳ ಸಮಾವೇಶದಲ್ಲಿ 1.33 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಕಳೆದ ಸಾಲಿನ ಎ.1ರಿಂದ ಪ್ರಸಕ್ತ ಸಾಲಿನ ಫೆ.2ರವರೆಗೆ 1.75 ಲಕ್ಷ ಕೋಟಿ ರೂ. ಬಂಡವಾಳ ಆಕರ್ಷಿಸಲಾಗಿದ್ದು, ಇದರಿಂದ 4.73 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.

ರಾಜ್ಯ ಸರಕಾರದ ಸತತ ಪ್ರಯತ್ನ ಹಾಗೂ ಕೈಗಾರಿಕೆಗಳು, ಬಂಡವಾಳ ಹೂಡಿಕೆದಾರರ ಪರವಾದ ನೀತಿಗಳಿಂದಾಗಿ ಈ ವರ್ಷ ಒಟ್ಟು 3.08 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯೊಂದಿಗೆ 7.73 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹೂಡಿಕೆದಾರರ ಸಮಾವೇಶದಲ್ಲಿ 25 ದೇಶಗಳ, ವಿವಿಧ ವಲಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದು, ದೇಶದ 15ಕ್ಕೂ ಹೆಚ್ಚು ರಾಜ್ಯಗಳ ಕೈಗಾರಿಕೋದ್ಯಮಿಗಳು ಭಾಗ ವಹಿಸಿದ್ದರು. ನಾಲ್ಕು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಹತ್ತು ಸಾವಿ ರಕ್ಕೂ ಹೆಚ್ಚು ಮಂದಿ ವಸ್ತು ಪ್ರದರ್ಶನ ವೀಕ್ಷಿಸಿದ್ದಾರೆ. ಉದ್ದಿಮೆದಾರರೊಂದಿಗೆ ನಡೆಸಿದ ವಿವಿಧ ಚರ್ಚೆಗಳಲ್ಲಿ ತಾನು ಸಾಕಷ್ಟು ಕಲಿತಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.

ಈ ಸಮಾವೇಶದಲ್ಲಿ ಪರಸ್ಪರ ಮಾಡಿಕೊಂಡ ಒಡಂಬಡಿಕೆಗಳನ್ನು ಅನು ಷ್ಠಾನಕ್ಕೆ ತರಲು ನಮ್ಮ ಸರಕಾರ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲಿದೆ. ಎರಡು ದಿನಗಳ ಸಮಾವೇಶದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಕೃತಜ್ಞತೆಗಳು. ಅದರಲ್ಲೂ ನಿರ್ದಿಷ್ಟವಾಗಿ ಸಮಾವೇಶದ ಸಹಭಾಗಿ ದೇಶಗಳಾದ ಜಪಾನ್, ಫ್ರಾನ್ಸ್, ಜರ್ಮನಿ, ಯನೈಟೆಡ್‌ಕಿಂಗ್‌ಡಂ, ಸ್ವೀಡನ್, ರಿಪಬ್ಲಿಕ್ ಆಫ್ ಕೋರಿಯಾ ಮತ್ತು ಇಟಲಿ ರಾಷ್ಟ್ರಗಳ ಸಹಕಾರಕ್ಕೆ ಋಣಿಯಾಗಿದ್ದೇನೆ ಎಂದು ಮುಖ್ಯಮಂತ್ರಿ ನುಡಿದರು.

ಕರ್ನಾಟಕದಲ್ಲಿ ದೇಶದ ಅಭಿವೃದ್ಧಿಗೆ ಕನಸು ಕಾಣುವವರಿಗೆ ಹಾರಲು ರೆಕ್ಕೆ(ಅವಕಾಶಗಳು)ಗಳನ್ನು ಕಲ್ಪಿಸಿಕೊಡುವುದು ನಮ್ಮ ಜವಾಬ್ದಾರಿ. ಕರ್ನಾಟಕವನ್ನು ಜಾಗತಿಕ ಭೂಪಟದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವುದು ನಮ್ಮ ಉದ್ದೇಶ ಎಂದು ಸಿದ್ದರಾಮಯ್ಯ ಹೇಳಿದರು.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಜಪಾನ್ ಸರಕಾರ ದೇಶದ 12 ಕಡೆಗಳಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದು. ಅದರಲ್ಲಿ ತುಮಕೂರಿನ ಕೈಗಾರಿಕಾ ಕಾರಿಡಾರ್ ಕೂಡ ಒಂದಾಗಿದೆ. ಜಪಾನ್ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಈ ಸಂಬಂಧ ತೀರ್ಮಾನವಾಗಿದೆ. ಅಲ್ಲಿನ ಪ್ರಧಾನಿ ಹೂಡಿಕೆಗೆ ಆಸಕ್ತರಾಗಿದ್ದಾರೆ ಎಂದರು.

ದಿಲ್ಲಿ-ಮುಂಬೈ ಕೈಗಾರಿಕಾ ಕಾರಿಡಾರ್‌ಗಳು ಹಿನ್ನಡೆ ಅನುಭವಿಸಿದ್ದು, ಮುಂಬೈ-ಬೆಂಗಳೂರು ಕಾರಿಡಾರ್‌ಗೆ ಅತ್ಯಂತ ಹೆಚ್ಚಿನ ಮಹತ್ವವಿದೆ. ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ಗೆ ಉತ್ತಮ ಅವಕಾಶವಿದೆ. ಈ ವಲಯದಲ್ಲಿ ತುಮಕೂರು ಅತೀ ಹೆಚ್ಚು ಹೂಡಿಕೆಯನು ್ನಆಕರ್ಷಿಸಲಿದೆ ಎಂದು ಅವರು ತಿಳಿಸಿದರು.

ದೇಶದ ಜಿ.ಡಿ.ಪಿಗೆ ಒಟ್ಟಾರೆ ಶೇ. 6 ರಷ್ಟು ಕೊಡುಗೆಯನ್ನು ಕರ್ನಾಟಕ ನೀಡುತ್ತಿದ್ದು, ಇಡೀ ದೇಶದಲ್ಲಿ ಮೂರನೆ ಅತೀ ಹೆಚ್ಚು ವಿದೇಶಿ ನೇರ ಬಂಡವಾಳ ಆಕರ್ಷಿಸುತ್ತಿರುವ ರಾಜ್ಯ ಕರ್ನಾಟಕವಾಗಿದೆ. ಜಾಗತಿಕವಾಗಿ ಶೇ. 16 ರಷ್ಟು ಎಫ್.ಡಿ.ಐ ಇಳಿಕೆಯಾಗಿದ್ದರೆ ಭಾರತ ಶೇ. 38 ರಷ್ಟು ಹೂಡಿಕೆಯನ್ನು ಆಕರ್ಷಿಸಿರುವುದು ದೇಶದ ಆರ್ಥಿಕ ಸ್ಥಿರತೆಗೆ ಸಾಕ್ಷಿ ಎಂದು ಅವರು ಹೇಳಿದರು.

ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಹರಿದುಬಂದ ಹೂಡಿಕೆ ಯೋಜನೆಗಳಾಗಿ ಕಾರ್ಯರೂಪಕ್ಕೆ ಬರಲು ಅನುವಾಗುವಂತೆ ಏಕಗವಾಕ್ಷಿ ಕೇಂದ್ರ ಸ್ಥಾಪನೆ ಸೇರಿದಂತೆ ಸರಕಾರ ಎಲ್ಲ ಸೌಲಭ್ಯ ಕಲ್ಪಿಸಲಿದೆ. ಬಂಡವಾಳ ಹೂಡಿಕೆ ಕೇವಲ ಈ ಸಮಾವೇಶಕ್ಕೆ ಸೀಮಿತವಾಗಿಲ್ಲ. ಇದೊಂದು ನಿರಂತರ ಪ್ರಕ್ರಿಯೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸುವುದಕ್ಕಾಗಿಯೇ ‘ಕರ್ನಾಟಕ ಇನ್‌ವೆಸ್ಟ್’ ಎಂಬ ಸಂಸ್ಥೆ ರಚಿಸಲಾಗುವುದು. ಇದು ರಾಜ್ಯದ ಪರವಾಗಿ ಹೂಡಿಕೆ ಆಕರ್ಷಣೆಯ ರಾಯಭಾರಿಯಂತೆ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಈಗಾಗಲೇ ಇರುವ ‘ಉದ್ಯೋಗಮಿತ್ರ’ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಜಿ.ಎಂ.ಸಿದ್ದೇಶ್ವರ್, ರಾಜ್ಯದ ಸಚಿವರಾದ ಟಿ.ಬಿ.ಜಯಚಂದ್ರ, ಎಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ, ರೋಷನ್‌ಬೇಗ್, ಶಾಮನೂರು ಶಿವಶಂಕರಪ್ಪ, ವೀಡಿಯೊಕಾನ್ ಇಂಡಸ್ಟ್ರೀಸ್ ಮುಖ್ಯಸ್ಥ ವೇಣುಗೋಪಾಲ್‌ಧೂತ್, ಹಾವೆಲ್ಸ್ ಇಂಡಿಯಾ ಮುಖ್ಯಸ್ಥ ಅನಿಲ್‌ರಾಯ್‌ಗುಪ್ತಾ, ಅನಿವಾಸಿ ಭಾರತೀಯ ಉದ್ಯಮಿಗಳಾದ ಬಿ.ಆರ್.ಶೆಟ್ಟಿ, ಸೈಯ್ಯದ್‌ಖಲೀಲ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಕೆ.ರತ್ನಾಪ್ರಭಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News