ಬಸವಣ್ಣನ ವಿಚಾರಧಾರೆ ಪಸರಿಸಲಿ: ಅಠವಳೆ
ಚಿತ್ರದುರ್ಗ ಫೆ.4: ಭಾರತ ಭೂಮಿಯಲ್ಲಿ ಜಾತ್ಯತೀತ ತತ್ವಾದರ್ಶ ಗಳನ್ನು ಅನುಷ್ಠಾನ ಗೊಳಿಸಲು ಮತ್ತು ಬಸವಣ್ಣನವರ ವಿಚಾರಧಾರೆಗಳನ್ನು ಪಸರಿಸುವಲ್ಲಿ ವಿಶೇಷವಾದ ಆದ್ಯತೆ ನೀಡಿ ಕೆಲಸ ಮಾಡುತ್ತಿರುವ ಡಾ.ಶಿವಮೂರ್ತಿ ಮುರುಘಾ ಶರಣರ ಕಾರ್ಯ ಪ್ರಶಂಸನೀಯ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ರಾಮದಾಸ್ ಅಠವಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗುರುವಾರ ‘ಭಾರತ ಭೀಮ ರಥಯಾತ್ರೆ’ಯ ಮೂಲಕ ‘ಜಾತಿ ತೋಡೋ, ಸಮಾಜ್ ಜೋಡೋ’ ಸಮತಾ ಅಭಿಯಾನದ ನೇತೃತ್ವ ವಹಿಸಿ ನಗರಕ್ಕೆ ಆಗಮಿಸಿದ ವೇಳೆ ಮುರುಘಾ ಮಠಕ್ಕೆ ಭೇಟಿ ನೀಡಿ ಶಿವಮೂರ್ತಿ ಮುರುಘಾ ಶರಣರಿಂದ ಆಶೀರ್ವಾದ ಪಡೆದರು. ಅನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹನ್ನೆರಡನೆ ಶತಮಾನದ ಬಸವಣ್ಣನವರ ಜಾತ್ಯತೀತ ಸಮತಾ ವಾದ ಸಮಾನತೆಯ ಸಿದ್ಧಾಂತಗಳನ್ನು ಚಾಚೂತಪ್ಪದೇ ಕಾರ್ಯಾ ನುಷ್ಠಾನ ಮಾಡುತ್ತಿರುವ ಮುರುಘಾ ಶರಣರ ಕಾರ್ಯ ಸಮಯೋಚಿತ ಮತ್ತು ಪ್ರಶಂಸನೀಯ ಎಂದರು.
ಮುರುಘಾ ಮಠದ ಮೂಲಕ ಎರಡೂವರೆ ದಶಕಗಳಿಂದ ಅಂತರ್ಜಾತಿ, ಅಂತರ್ ಧರ್ಮೀಯ ಹಾಗೂ ಸಾಮೂಹಿಕ ಕಲ್ಯಾಣ ಮಹೋತ್ಸವಗಳನ್ನು ಮಾಡುವ ಮೂಲಕ ಸಮಾಜಕ್ಕೆ ಅನುಕರಣೀಯರಾಗಿರುವ ಶ್ರೀಗಳ ಕಾರ್ಯ ಮಹಾರಾಷ್ಟ್ರದ ಮಹು ಎಂಬಲ್ಲಿ ‘ಭಾರತ ಭೀಮ ರಥಯಾತ್ರೆ’ಯು ಅಂತ್ಯಗೊಳ್ಳಲಿದ್ದು, ಆ ಬೃಹತ್ ಸಮಾರಂಭಕ್ಕೆ ಶಿವಮೂರ್ತಿ ಮುರುಘಾ ಶರಣರನ್ನು ಆಹ್ವಾನಿಸುತ್ತಿದ್ದು, ಆ ಕಾರ್ಯಕ್ರಮದಲ್ಲಿಪಾಲ್ಗೊಳ್ಳುವ ಮೂಲಕ ಬಸವಣ್ಣನವರ ತತ್ವ, ಸಿದ್ಧಾಂತ ಆದರ್ಶಗಳನ್ನು ದೇಶಕ್ಕೆ ಸಾರುವಂತಹ ಕೆಲಸವಾಗಲಿ ಎಂದು ರಾಮದಾಸ್ ಅಠವಳೆ ಹೇಳಿದರು.
‘ಭೀಮಾ ರಥೆಯಾತ್ರೆ’ಯಲ್ಲಿ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಡಾ.ಎಂ. ವೆಂಕಟ ಸ್ವಾಮಿ, ಮುರುಘರಾಜೇಂದ್ರ ಒಡೆಯರ್,ಜಿಲ್ಲಾಧ್ಯಕ್ಷ ಸಿ.ಎಚ್.ಮಂಜುನಾಥ್, ಪತ್ರಕರ್ತ ನರೇನಹಳ್ಳಿ ಅರುಣ್‌ಕುಮಾರ್, ಜಿ.ಪಂ.ಮಾಜಿ ಸದಸ್ಯ ಲಕ್ಷ್ಮಣ, ಹನುಮಂತಪ್ಪ, ನಾಗಣ್ಣ, ತೊರೆಬೀರನಹಳ್ಳಿ ತಮ್ಮಣ್ಣ ಸೇರಿ ಇನ್ನಿತರರು ಹಾಜರಿದ್ದರು.