×
Ad

ಜಿಲ್ಲಾ-ತಾಲೂಕು ಪಂಚಾಯತ್ ಚುನಾವಣೆಗೆ ದಿನಗಣನೆ ಆರಂಭ

Update: 2016-02-05 23:56 IST

ಬೆಂಗಳೂರು, ಫೆ. 5: ಮುಂಬರುವ ವಿಧಾನ ಸಭಾ ಚುನಾವಣೆಗೆ ದಿಕ್ಸೂಚಿಯೆಂದೇ ಹೇಳ ಲಾಗುತ್ತಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣಾ ಅಖಾಡ ರಂಗೇರುತ್ತಿದೆ.
ಮೊದಲ ಹಂತದಲ್ಲಿ ಬೆಂ.ನಗರ, ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ತುಮಕೂರು, ಬೆಳಗಾವಿ, ಹಾವೇರಿ, ಬಾಗಲಕೋಟೆ, ಉತ್ತರ ಕನ್ನಡ, ಧಾರವಾಡ ಹಾಗೂ ಗದಗ ಜಿಲ್ಲೆಗಳ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಯಲಿದೆ.
ಆಯಾ ಜಿಲ್ಲಾಧಿಕಾರಿಗಳೇ ಚುನಾವಣಾಧಿ ಕಾರಿಗಳಾಗಿದ್ದು, ತಮ್ಮ-ತಮ್ಮ ಜಿಲ್ಲೆಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣಾ ನಡೆಸಲು ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ರಾಜಕೀಯ ಮುಖಂಡರು ಹಾಗೂ ಅಭ್ಯರ್ಥಿಗಳು ಹಗಲು- ರಾತ್ರಿಗಳ ಪರಿವೇ ಮರೆತು ಮತದಾರರ ಮನಗೆಲ್ಲಲು ಶ್ರಮಿಸುತ್ತಿದ್ದಾರೆ.
ಜಿಲ್ಲಾ ಪಂಚಾಯತ್ ಚುನಾವಣೆಗೆ 1ಲಕ್ಷ ರೂ. ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ 50 ಸಾವಿರ ರೂ. ಚುನಾವಣಾ ವೆಚ್ಚ ನಿಗದಿಪಡಿಸಿದೆ. ಚುನಾವಣಾ ಅಕ್ರಮಗಳ ಮೇಲೆ ಚು.ಆಯೋಗದ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದು, ಅಕ್ರಮ ಮದ್ಯ ಸಾಗಾಟಕ್ಕೂ ಬ್ರೇಕ್ ಹಾಕಲಾಗಿದೆ.
ಮೊದಲ ಹಂತದ 15 ಜಿಲ್ಲೆಗಳ 552 ಕ್ಷೇತ್ರಗಳಿಗೆ ಆಡಳಿತಾರೂಢ ಕಾಂಗ್ರೆಸ್-547, ವಿಪಕ್ಷ ಬಿಜೆಪಿ-538, ಜೆಡಿಎಸ್-361 ಸೇರಿದಂತೆ ಒಟ್ಟು 2,087 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಅದೇ ರೀತಿಯಲ್ಲೇ 15 ಜಿಲ್ಲೆಗಳ ತಾಲೂಕು ಪಂಚಾಯತ್‌ಗಳ ಪೈಕಿ 1,945 ಸ್ಥಾನಗಳಿಗೆ ಕಾಂಗ್ರೆಸ್-1,927, ಬಿಜೆಪಿ-1,842 ಹಾಗೂ ಜೆಡಿಎಸ್-1,133 ಸೇರಿದಂತೆ ಒಟ್ಟು 6,288 ಮಂದಿ ಸ್ಪರ್ಧಿಸಿದ್ದು, ಫೆ.13ರಂದು ಮತದಾನ ನಡೆಯಲಿದ್ದು, ಘಟಾನುಘಟಿ ಅಭ್ಯರ್ಥಿಗಳ ಭವಿಷ್ಯ ಅಂದೇ ನಿರ್ಧಾರವಾಗಲಿದೆ.
ಅವಿರೋಧ ಆಯ್ಕೆ: ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಹಳ್ಳೂರ ಜಿಪಂ ಕ್ಷೇತ್ರದಿಂದ ಬಿಜೆಪಿಯ ವಾಸಂತಿ ಹಣಮಂತ ತೇರದಾಳ ಹಾಗೂ ಅದೇ ತಾಲೂಕಿನ ವಡೇರಹಟ್ಟಿ ಕ್ಷೇತ್ರದಿಂದ ಬಿಜೆಪಿಯ ಬಸವ್ವ ಕಾಮಪ್ಪ ಕುಳ್ಳೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಆಯೋಗ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News