ಜಾಗತಿಕ ಬಂಡವಾಳ ಹೂಡಿಕೆಗೆ ತೆರೆ
ಬಂಡವಾಳ ಹೂಡಿಕೆ ಸಮಾವೇಶದಲ್ಲಿ ವಿಭಿನ್ನ ಆಲೋಚನೆಗಳ ಸಂಗಮ
ಬೆಂಗಳೂರು, ಫೆ.5: ನಗರದ ಅರಮನೆ ಮೈದಾನದಲ್ಲಿ ಫೆ.3ರಿಂದ ನಡೆಯುತ್ತಿರುವ ಬಂಡವಾಳ ಹೂಡಿಕೆ ಸಮಾವೇಶಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿತ್ತು. ಹೀಗಾಗಿ ಸಮಾವೇಶದ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ‘ಪ್ರದರ್ಶನ ಮಳಿಗೆ’ಗಳನ್ನು ವೀಕ್ಷಿಸಲು ಸಾವಿರಾರು ಮಂದಿ ಆಗಮಿಸಿದ್ದರು.
ನಗರದ ಹೊರವಲಯ ದೊಡ್ಡಬಳ್ಳಾಪುರ, ದೇವನಹಳ್ಳಿ, ಕೋಲಾರ, ಆನೇಕಲ್ ಸೇರಿದಂತೆ ನಗರದ ಜನತೆ ತಂಡೋಪಾದಿಯಾಗಿ ಬಂದು ಪ್ರದರ್ಶನ ಮಳಿಗೆಗಳನ್ನು ಕುತೂಹಲದಿಂದ ವೀಕ್ಷಿಸಿದರು. ಒಟ್ಟು 500 ಮಳಿಗೆಗಳನ್ನು ತೆರೆಯಲಾಗಿತ್ತು. ಕೈಯಿಂದಲೇ ಮಾಡುವ ಚಾಕ್‌ಲೆಟ್, ಕೈಮಗ್ಗದ ಬ್ಯಾಗ್‌ಗಳ ಮಳಿಗೆಗಳು ಸಾಮಾನ್ಯ ಜನತೆಯನ್ನು ಸೆಳೆಯುತ್ತಿದ್ದವು.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಸ್ಥಾಪಿಸಿದ್ದ ಮಳಿಗೆಯಲ್ಲಿ ಕಲ್ಪನಾ ರಾಘವೇಂದ್ರರವರು ಚಾಕ್‌ಲೆಟ್‌ನ್ನು ಮಾರಾಟ ಮಾಡುತ್ತಿದ್ದರು. ಅವರೊಂದಿಗೆ ಬಂಡವಾಳ ಹೂಡಿಕೆ ಸಮಾವೇಶದ ಕುರಿತು ವಿಚಾರಿಸಿದಾಗ ‘ನಾನು ಮನೆಯಲ್ಲಿಯೇ ಕುಳಿತು ಚಾಕ್‌ಲೆಟ್ ತಯಾರಿಸಿ ಮಾರಾಟ ಮಾಡುತ್ತಿದ್ದೇನೆ. ಫೆ.3ರಿಂದ ಇಲ್ಲಿ ನಡೆಯುತ್ತಿರುವ ಬಂಡವಾಳ ಹೂಡಿಕೆ ಸಮಾವೇಶದಿಂದ ಹಲವು ಉದ್ದಿಮೆದಾರರು ಹಾಗೂ ನೂರಾರು ಮಂದಿ ಗ್ರಾಹಕರು ಸಂಪರ್ಕಕ್ಕೆ ಸಿಕ್ಕಿದ್ದಾರೆ. ಇವರ ಸಂಪರ್ಕದಿಂದ ಭವಿಷ್ಯದಲ್ಲಿ ನನಗೆ ಸಾಕಷ್ಟು ಅನುಕೂಲಕರವಾಗಲಿದೆ’ ಎಂದು ಆಶಯ ವ್ಯಕ್ತಪಡಿಸಿದರು.
ಸೀರೆ, ಚೂಡಿದಾರ್‌ಗಳನ್ನು ಮಾರಾಟ ಮಾಡುತ್ತಿದ್ದ ಶಾಂತಲಾ ಅವರನ್ನು ಮಾತನಾಡಿಸಿದಾಗ, ‘ನಾನು ಸಂಯುಕ್ತ ಎಂಬ ಹೆಸರಿನಲ್ಲಿ ಗುಡಿ ಕೈಗಾರಿಕೆಯನ್ನು ನಡೆಸುತ್ತಿದ್ದೇನೆ. ಇಲ್ಲಿ ನಡೆಯುತ್ತಿರುವ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಭಾಗವಹಿಸಿರುವುದು ತುಂಬಾ ಅನುಕೂಲವಾಗಿದೆ. ಹಲವು ಮಂದಿ ಉದ್ಯಮಿಗಳು ನನಗೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ’ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಪ್ರದರ್ಶನ ಮಳಿಗೆಯನ್ನು ನೋಡಲು ಬಂದ ಕೋಲಾರದ ರಮೇಶ್ ಎಂಬವರನ್ನು ಮಾತನಾಡಿಸಿದಾಗ, ಕೋಲಾರ ಭಾಗದಲ್ಲಿ ಮಳೆಯಿಲ್ಲದೆ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಏನಾದರು ಸ್ವಂತ ಉದ್ಯೋಗ ಮಾಡಲು ಸಾಧ್ಯವಾಗಬಹುದೆ ಎಂದು ವೀಕ್ಷಿಸಲು ಬಂದಿದ್ದೇನೆ ಎಂದು ತಿಳಿಸಿದರು. ಹೀಗೆ ಹಲವು ಮಂದಿ ವಿಭಿನ್ನ ಅಭಿಪ್ರಾಯ, ಆಲೋಚನೆಗಳೊಂದಿಗೆ ಬಂಡವಾಳ ಹೂಡಿಕೆ ಸಮಾವೇಶಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.