ರಂಗಭೂಮಿ ಅನಕ್ಷರಸ್ಥರ ವಿಶ್ವವಿದ್ಯಾನಿಲಯ: ರಾಜಾರಾಂ
ಬೆಂಗಳೂರು, ಫೆ. 5: ಅನಕ್ಷರಸ್ಥರಿಗೆ ರಂಗ ಭೂಮಿ ನಾಡಿನ ಸಂಸ್ಕೃತಿ, ಇತಿಹಾಸ ಅರ್ಥ ಮಾಡಿಸುವ ಮೂಲಕ ಸೃಜನಾತ್ಮಕ ಶಿಕ್ಷಣ ನೀಡುತ್ತದೆ ಎಂದು ಕರ್ನಾಟಕ ನಾಟಕ ಅಕಾಡಮಿ ಮಾಜಿ ಅಧ್ಯಕ್ಷ ಬಿ.ವಿ.ರಾಜಾರಾಂ ತಿಳಿಸಿದರು.
ನಗರದ ಸರಕಾರಿ ಕಲಾ ಕಾಲೇಜಿನಲ್ಲಿ ಪ್ರತಿಮಾ ರಂಗ ಸಂಶೋಧನಾ ಪ್ರತಿಷ್ಠಾನ ಮತ್ತು ಕಾಲೇಜು ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ನಾಟಕ ಶಿಬಿರದ ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಂಗಭೂಮಿಯು ಯಾವುದೇ ಭಿನ್ನ ಭೇದಗಳಿಲ್ಲದೆ ಎಲ್ಲರನ್ನೂ ಒಳಗೊಂಡಿರುತ್ತದೆ. ಜೊತೆಗೆ ಸಮಾನ ಅವಕಾಶವನ್ನು ಕಲ್ಪಿಸಿಕೊಡುವಂತ ಸ್ಥಳ ರಂಗ ಭೂಮಿ ಮಾತ್ರ. ನಟನೆಯ ಮೂಲಕ ಜನರನ್ನು ಜಾಗೃತಗೊಳಿಸು ವುದರ ಜೊತೆಗೆ, ಜೀವನ ವೌಲ್ಯವನ್ನು ಕಲಿಸುವಂತಹ ಕೆಲಸ ಮಾಡುತ್ತದೆೆ ಎಂದರು. ರಂಗಭೂಮಿ ಸಮಾಜಕ್ಕೆ ಹಿಡಿದ ಕನ್ನಡಿಯಾಗಿದ್ದು, ಇದಿಲ್ಲದೆ ದೇಶ ಉಳಿಯಲು ಸಾಧ್ಯವಿಲ್ಲ. ರಂಗಭೂಮಿ ಅಲ್ಪಸಂಖ್ಯಾತರಿಂದ ಕೂಡಿರುತ್ತದೆ ಎಂಬ ಭಾವನೆ ಇದೆ. ಆದರೆ ರಂಗಭೂಮಿ ಬರುವ ಎಲ್ಲರನ್ನೂ ಬಯಸುವುದಿಲ್ಲ. ಬದಲಿಗೆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತಹವರನ್ನು, ಜಾತಿ ಧರ್ಮಗಳನ್ನು ಮೀರಿ ಬರುವಂತಹವರನ್ನು ಒಟ್ಟು ಗೂಡಿಸುತ್ತದೆ ಎಂದು ತಿಳಿಸಿದರು.
ದೇಶದ ಸ್ವಾತಂತ್ರ ಚಳವಳಿಗೆ, ಏಕೀಕರಣಕ್ಕೆ ಕನ್ನಡ ರಂಗಭೂಮಿ ಹಲವು ರೀತಿಯಲ್ಲಿ ಬೆಂಬಲ ನೀಡಿದೆ, ಬೆಳೆಸಿದೆ. ಈ ಹಿನ್ನೆಲೆಯಲ್ಲಿ 50 ವರ್ಷಗಳ ಇತಿಹಾಸವಿರುವ ಹವ್ಯಾಸಿ ಕನ್ನಡ ರಂಗಭೂಮಿ ಇಂದು ಶಿಕ್ಷಕರ ನೆರವಿನಿಂದ ನಿಂತಿದೆ. ಕನ್ನಡ ರಂಗಭೂಮಿಗೆ ಇತ್ತೀಚೆಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿತರಾಗುತ್ತಿದ್ದಾರೆ. ಅವರ ಸರ್ವತೋಮುಖ ಬೆಳವಣಿಗೆಗೆ ಕಲೆ, ಕ್ರೀಡೆ ಆವಶ್ಯಕ. ಈ ನಿಟ್ಟಿನಲ್ಲಿ ಶಿಕ್ಷಕರು ಬಹಳ ಶ್ರಮವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ರಂಗಭೂಮಿ ಕೃಷಿ ಮಾಡಿದ ರೀತಿಯಲ್ಲಿ ಮನುಷ್ಯನನ್ನು ಕೃಷಿ ಮಾಡಿ ಅವನಿಂದ ಒಂದು ಉತ್ತಮ ನಟನನ್ನು ಹೊರ ತರುತ್ತದೆ. ಆದ್ದರಿಂದಲೇ ಇಂದಿನ ಹಲವು ಕಂಪೆನಿಗಳಲ್ಲಿ ಕೆಲಸ ಮಾಡುವವರು ರಂಗಭೂಮಿಯತ್ತ ಆಕರ್ಷಿತರಾಗುತ್ತಿರುವುದು ಮತ್ತು ಲಕ್ಷಾಂತರ ರೂಪಾಯಿ ಶುಲ್ಕ ಪಾವತಿಸಿ ರಂಗಭೂಮಿಯಲ್ಲಿ ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಕೆ.ಎಂ.ವೆಂಕ ಶಾಮಿರೆಡ್ಡಿ, ಪ್ರತಿಮಾರಂಗ ಸಂಶೋಧನಾ ಪ್ರತಿಷ್ಠಾನದ ಅಧ್ಯಕ್ಷ ಎಲ್. ಕೃಷ್ಣಪ್ಪ, ಕನ್ನಡ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕ ಕೆ.ಕೃಷ್ಣಪ್ಪ, ರುದ್ರಪ್ಪ ಇನ್ನಿತರರು ಭಾಗವಹಿಸಿದ್ದರು.