ಟಿಪ್ಪು ಜಯಂತಿ ಆಚರಣೆ ಕಡ್ಡಾಯವಾಗಲಿ: ಡಾ. ಹನುಮಂತಯ್ಯ
ಬೆಂಗಳೂರು, ಫೆ.6: ಕನ್ನಡ ಪರಂಪರೆಯನ್ನು ಉಳಿಸುವಂತಹ, ಗೌರವಿಸುವಂತಹ ಪ್ರತಿ ಯೊಬ್ಬ ಕನ್ನಡಿಗನು ಟಿಪ್ಪು ಜಯಂತಿಯನ್ನು ಆಚರಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್.ಹನುಮಂತಯ್ಯ ಅಭಿಪ್ರಾಯಿಸಿದ್ದಾರೆ.
ಶನಿವಾರ ನಗರದ ಅಬ್ಬಾಸ್ ಖಾನ್ ಮಹಿಳಾ ಕಾಲೇಜು ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕನ್ನಡ ಹಬ್ಬ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ದೇಶದ ಮೊದಲ ರಾಜ ಟಿಪ್ಪು ಸುಲ್ತಾನ್. ಇಂತಹ ಅಪ್ರತಿಮ ದೇಶಭಕ್ತನನ್ನು ಕೆಲವು ಸಂಘಟನೆಗಳು ದೇಶದ್ರೋಹಿ ಎಂದು ಕರೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಪ್ಪು ಸುಲ್ತಾನ್ ತನ್ನ ಆಡಳಿತಾವಧಿಯಲ್ಲಿ ಅನೇಕ ದೇವಸ್ಥಾನ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದರು. ಹಾಗೂ ಮೈಸೂರು, ಕೋಲಾರ, ದೇವನಹಳ್ಳಿ ಭಾಗಗಳಲ್ಲಿ ನೂರಾರು ಕೆರೆಗಳನ್ನು ಕಟ್ಟಿ, ಆ ಮೂಲಕ ರೈತರ ಬದುಕನ್ನು ಹಸನಾಗಿಸಿದ್ದರು. ಇದ್ಯಾವುದನ್ನು ನೆನೆಯದ ಮೂಲಭೂತ ವಾದಿಗಳು, ಮುಸ್ಲಿಮ್ ಸಮುದಾಯದ ರಾಜ ಎಂಬ ಕಾರಣಕ್ಕಾಗಿ ಟಿಪ್ಪುವಿಗೆ ದೇಶದ್ರೋಹಿ ಪಟ್ಟ ಕಟ್ಟುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.ದಿಕವಿ ಪಂಪ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದು ಸಾರುವ ಮೂಲಕ ಜಾತಿ, ಧರ್ಮ ಹಾಗೂ ಭಾಷೆಗಿಂತ ಮನುಷ್ಯಪ್ರೀತಿಯೇ ಮುಖ್ಯ ಎಂದು ಸಾರಿ ಹೇಳಿದ್ದರು. ಇವರ ಹಾದಿಯಲ್ಲಿಯೆ 12ನೆ ಶತಮಾನದಲ್ಲಿ ಪ್ರಾರಂಭವಾದ ಶರಣ ಸಂಸ್ಕೃತಿ ಜಾತಿ, ಧರ್ಮಕ್ಕಿಂತ ಕಾಯಕಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರು. ಇವರ ಆದರ್ಶಗಳನ್ನು ಯುವ ಜನತೆ ಅರಿಯಬೇಕೆಂದು ಎಲ್.ಹನುಮಂತಯ್ಯ ತಿಳಿಸಿದರು.
ವಿಶ್ವದಲ್ಲಿ ಮುಂದುವರಿದ ಹತ್ತು ರಾಷ್ಟ್ರಗಳು ತಮ್ಮ ಮಾತೃ ಭಾಷೆಯ ಮೂಲಕವೇ ಶಿಕ್ಷಣವನ್ನು ಕಲಿಸುತ್ತಿವೆ. ಆದರೆ, ಭಾರತದಲ್ಲಿ ಮಾತ್ರ ಮಾತೃ ಭಾಷೆಗಳನ್ನು ಬಿಟ್ಟು, ಇಂಗ್ಲಿಷ್‌ಗೆ ಗುಲಾಮರಾಗಿದ್ದಾರೆ. ಇದರಿಂದ ಮಕ್ಕಳು ಮನೆಯಲ್ಲಿ ಮಾತೃ ಭಾಷೆ, ಶಾಲೆಗಳಲ್ಲಿ ಇಂಗ್ಲಿಷ್ ಭಾಷೆ ಕಲಿಯುವಂತಹ ಪರಿಸ್ಥಿತಿಯಿದೆ. ಇದು ಮಕ್ಕಳ ಮಾನಸಿಕ ಯಾತನೆಗೆ ಕಾರಣವಾಗುತ್ತದೆ ಎಂದು ಅವರು ತಿಳಿಸಿದರು.ನ್ನಡ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ವಾಸವಿರುವ ಹೊರ ರಾಜ್ಯದ ಹಾಗೂ ವಿದೇಶಿ ನಿವಾಸಿಗಳಿಗೆ ಕನ್ನಡ ಭಾಷೆಯನ್ನು ಕಲಿಸುವಂತಹ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಂಟ್ರಲ್ ಮುಸ್ಲಿಂ ಅಸೋಸಿಯೇಶನ್ ಆಫ್ ಕರ್ನಾಟಕದ ಅಧ್ಯಕ್ಷ ಅಲ್‌ಹಾಜ್ ಮುಕ್ಬೂಲ್ ಅಹ್ಮದ್ ಸಾಹೇಬ್ ವಹಿಸಿದ್ದರು. ಈ ವೇಳೆ ಸಿಎಂಎ ಕಾರ್ಯದರ್ಶಿ ಡಾ.ಝಹೀರುದ್ದೀನ್ ಅಹ್ಮದ್, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ.ಎಸ್.ವಿದ್ಯಾ, ಪ್ರಾಂಶುಪಾಲೆ ಪ್ರೊ.ನಿಷಾತ್ ಖಾಲಿದಾ ಪರ್ವಿನ್, ಪ್ರೊ.ನಾದಿರಾ ಸುಲ್ತಾನ್ ಬಸ್ತಿ ಮತ್ತಿತರರಿದ್ದರು.