×
Ad

ವಿದೇಶಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ ಪ್ರಕರಣ, ಎಸಿಪಿ ನಾರಾಯಣ ಅಮಾನತು

Update: 2016-02-07 00:01 IST

ಬೆಂಗಳೂರು, ಫೆ. 6: ಹೆಸರಘಟ್ಟ ಸಮೀಪದ ಸೋಲದೇವನಹಳ್ಳಿ, ಗಣಪತಿ ಪುರದಲ್ಲಿ ವಿದೇಶಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ ಪ್ರಕರಣ ಹೊಸ ತಿರುವು ಪಡೆದು ಕೊಂಡಿದ್ದು, ಬೈಕ್‌ಗೆ ಢಿಕ್ಕಿ ಹೊಡೆದ ಕಾರಿನಲ್ಲಿ ತಾಂಝಾನಿಯಾ ವಿದ್ಯಾರ್ಥಿ ನಿಯೂ ಇದ್ದೂ, ಆ ಬಳಿಕ ನಾನು ಕಾರಿನಲ್ಲೇ ಇರಲಿಲ್ಲವೆಂದು ಸುಳ್ಳು ಹೇಳುತ್ತಿದ್ದಾರೆಂಬ ಅಂಶ ಬೆಳಕಿಗೆ ಬಂದಿದೆ.ಈ ನಡುವೆ ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್, ಯಶವಂತಪುರ ಉಪ ವಿಭಾಗದ ಎಸಿಪಿ ಅಶ್ವತ್ಥ್ ನಾರಾಯಣ ಪಿಸೆ ಎಂಬವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಈ ಮಧ್ಯೆಯೇ ಅಮಾಯಕರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ಸ್ಥಳೀಯರು, ವಿದೇಶಿಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಐವರ ಅಮಾನತು: ವಿದೇಶಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ ಪ್ರಕರಣದಲ್ಲಿ ಕರ್ತವ್ಯಲೋಪವೆಸಗಿದ ಆರೋಪದ ಮೇಲೆ ಎಸಿಪಿ ಅಶ್ವಥ್ ನಾರಾಯಣ ಪಿಸೆ, ಸೋಲದೇವನಹಳ್ಳಿ ಠಾಣಾ ಪೊಲೀಸ್ ಇನ್‌ಸ್ಪೆಕ್ಟರ್ ಜಿ.ಪ್ರವೀಣ್ ಬಾಬು, ಕಾನ್‌ಸ್ಟೇಬಲ್‌ಗಳಾದ ಮಂಜುನಾಥ್, ವಿ.ಜಗದೀಶ್ ಹಾಗೂ ಸಿ.ಕೆ.ಹೊನ್ನೇಶ್ ಸೇರಿದಂತೆ ಒಟ್ಟು ಐದು ಮಂದಿಯನ್ನು ಅಮಾನತು ಮಾಡಲಾಗಿದೆ.
ಜ.31ರ ರಾತ್ರಿ 7:30ರ ಸುಮಾರಿಗೆ ಸುಡಾನ್ ಮೂಲದ ವಿದ್ಯಾರ್ಥಿನಿ ಮದ್ಯ ಸೇವಿಸಿ ಕಾರು ಚಲಾಯಿಸುತ್ತಿದ್ದ ವೇಳೆ ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಹಿಳೆ ಶಬಾನಾ ತಾಜ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಈ ವೇಳೆ ಆಕ್ರೋಶಿತ ಸ್ಥಳೀಯರು ಆ ಕಾರಿಗೆ ಬೆಂಕಿ ಹಚ್ಚಿದ್ದರು. ದೇ ಕಾರಿನಲ್ಲಿದ್ದ ತಾಂಝಾನಿಯಾ ವಿದ್ಯಾರ್ಥಿನಿ ಆ ಬಳಿಕ ಮತ್ತೊಂದು ಕಾರಿನಲ್ಲಿ ಸ್ಥಳಕ್ಕೆ ಬಂದಿದ್ದು, ಉದ್ರಿಕ್ತರು ಅವರನ್ನು ನಿಲ್ಲಿಸಿ ಮನಸೋ ಇಚ್ಛೆ ಥಳಿಸಿ ಆ ಕಾರಿಗೂ ಬೆಂಕಿ ಹಚ್ಚಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ, ಈ ಸಂಬಂಧ ವಿದೇಶಿ ವಿದ್ಯಾರ್ಥಿನಿ ತಾನು ಅಪಘಾತಕ್ಕೀಡಾದ ಕಾರಿನಲ್ಲೇ ಇರಲಿಲ್ಲ ಎಂದು ಸುಳ್ಳು ಹೇಳುತ್ತಿದ್ದಾಳೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News