ಬೆಂಗಳೂರಿನ ವಿಬ್‌ಗಯಾರ್ ಶಾಲೆಯೊಳಗೆ ಚಿರತೆ!
ಬೆಂಗಳೂರು, ಫೆ.7: ನಗರದ ವರ್ತೂರಿನಲ್ಲಿರುವ ಖಾಸಗಿ ಶಾಲೆಯೊಂದರೊಳಗೆ ಇಂದು ಮುಂಜಾವ ಚಿರತೆಯೊಂದು ನುಗ್ಗಿದೆ.
ಇಲ್ಲಿನ ವಿಬ್‌ಗಯಾರ್ ಶಾಲೆಯೊಳಗೆ ಚಿರತೆ ನುಗ್ಗಿರುವುದು ಸಿಸಿಟಿವಿ ದೃಶ್ಯಗಳಿಂದ ದೃಢಗೊಂಡಿದೆ. ಶಾಲೆಯೊಳಗೆ ಚಿರತೆ ಪ್ರವೇಶಿಸಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ ಅಲ್ಲಿನ ಸೆಕ್ಯುರಿಟಿ ಗಾರ್ಡ್ ಮುನಿರಾಜು ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅದರಂತೆ ಅರಣ್ಯ ಇಲಾಖಾಧಿಕಾರಿಗಳು ಶಾಲೆಗೆ ಬಂದು ಪರಿಶೀಲಿಸಿದಾಗ ಎರಡು ಸಿಸಿಟಿವಿ ಕ್ಯಾಮೆರಾಗಳಲ್ಲಿ ಚಿರತೆಯ ಓಡಾಟ ಪತ್ತೆಯಾಗಿರುವುದು ಹೇಳಲಾಗಿದೆ.
ಇಂದು ಮುಂಜಾನೆ 4:30ರ ಸುಮಾರಿಗೆ ಚಿರತೆಯು ಶಾಲೆಯ ಮುಖ್ಯದ್ವಾರದ ಮೂಲಕ ಒಳಪ್ರವೇಶಿಸಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಚಿರತೆ ಮತ್ತೆ ಶಾಲೆಯಿಂದ ಹೊರಹೋಗಿದೆಯೇ ಎಂಬುದು ದೃಢಪಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಬೆಳಗ್ಗೆಯಿಂದ ಶಾಲೆಯೊಳಗೆ ಪರಿಶೀಲನೆ ನಡೆಸುತ್ತಿದ್ದಾರೆ. ನಾಳೆ ಶಾಲೆ ಇರುವುದರಿಂದ ಚಿರತೆಯ ಸಂಚಾರ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.