×
Ad

ಅಕ್ಷರ ಸಂತರ ಹೊಸ ಮನೆಯಲ್ಲಿ ಪ್ರಶಸ್ತಿಗಳನ್ನು ಇಡಲಿಕ್ಕೇ ಒಂದು ಕೊಠಡಿ!

Update: 2016-02-07 19:45 IST


ಅಕ್ಷರ ಸಂತ’ ಹರೇಕಳ ಹಾಜಬ್ಬರಿಗೆ ನಗರದ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶನ್‌ನವರು 15 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಮನೆಯನ್ನು ರವಿವಾರ ಹಸ್ತಾಂತರಿಸಲಾಯಿತು.

ಗೃಹ ಪ್ರವೇಶ ಕಾರ್ಯಕ್ರಮವನ್ನು ಅಸೋಸಿಯೇಶನ್‌ನ ಅಧ್ಯಕ್ಷ ಅಲ್ಬನ್ ಮಿನೇಜಸ್ ಉದ್ಘಾಟಿಸಿದರು. ಹಾಜಬ್ಬರಿಗೆ ಲಭಿಸಿರುವ ವಿವಿಧ ಪ್ರಶಸ್ತಿಗಳನ್ನಿಡಲು ಮನೆಯೊಳಗೆ ನಿರ್ಮಿಸಲಾದ ಕೊಠಡಿಯನ್ನು ಆರೋಗ್ಯ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು. ನ್ಯೂಪಡ್ಪು ತ್ವಾಹಾ ಜುಮಾ ಮಸೀದಿಯ ಖತೀಬ್ ತಾಜುದ್ದೀನ್ ಮದನಿ ದುಆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸದ ನಳಿನ್‌ಕುಮಾರ್, ಮುಡಾ ಆಯುಕ್ತ ಮುಹಮ್ಮದ್ ನಝೀರ್, ತಾಪಂ ಸದಸ್ಯ ಮುಹಮ್ಮದ್ ಮುಸ್ತಫಾ, ಜಿಪಂ ಸದಸ್ಯ ಎನ್.ಎಸ್.ಕರೀಂ, ಪಂಚಾಯತ್ ಅಧ್ಯಕ್ಷೆ ಅನಿತಾ ಡಿಸೋಜ, ನ್ಯೂಪಡ್ಪು ಮಸೀದಿಯ ಉಸ್ತಾದ್ ಬಿ.ಎಂ.ಶರೀಫ್, ಸದರ್ ಅಬೂಬಕರ್ ಸಿದ್ದೀಕ್ ಸಖಾಫಿ ಉಪಸ್ಥಿತರಿದ್ದರು.
ಎರಡು ಬೆಡ್‌ರೂಂ, ಒಂದು ಹಾಲ್, ಕಿಚನ್ ರೂಂ ಮತ್ತು ಹಾಜಬ್ಬರಿಗೆ ಲಭಿಸಿರುವ ಪ್ರಶಸ್ತಿಗಳನ್ನಿಡಲು ಸೋಕೇಸ್ ಕೊಠಡಿ ಸಹಿತ 760 ಚದರ ಅಡಿಯ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಮನೆಯನ್ನು ನಿರ್ಮಿಸಲಾಗಿದೆ. ಅವರ ಮನೆ ಸಮೀಪದಲ್ಲಿ 20 ಅಡಿ ಇದ್ದ ಬಾವಿಗೆ ಹೆಚ್ಚುವರಿ 27 ರಿಂಗ್‌ಗಳನ್ನು ಅಳವಡಿಸಿ 50 ಅಡಿ ಆಳ ಮಾಡಿ ಉಪಯೋಗಕ್ಕೆ ಯೋಗ್ಯವಾಗುವಂತೆ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶನ್ 
 ಮಾಡಿದೆ. ಅವರ ಮನೆಯ ಕಾಂಪೌಂಡ್ ಕೆಲಸ ಬಾಕಿ ಇದ್ದು, ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣ ಕಾರ್ಯ ಶೀಘ್ರದಲ್ಲಿ ಆರಂಭಿಸುವುದಾಗಿ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶನ್‌ನ ಅಧ್ಯಕ್ಷ ಅಲ್ಬನ್ ಮಿನೇಜಸ್ ತಿಳಿಸಿದ್ದಾರೆ.

ಹಾಜಬ್ಬರ ನೂತನ ಮನೆಯ ಅಂಗಳದಲ್ಲೇ ಅರ್ಧ ನೆಲಸಮಗೊಳಿಸಿರುವ ಹಳೆಮನೆಯನ್ನು ಚಿತ್ರದಲ್ಲಿ ಕಾಣಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor