ಕಾಂಗ್ರೆಸ್‌ಗೆ ಭೈರತಿ ಸುರೇಶ್ ಅನಿವಾರ್ಯವಲ್ಲ: ರೇವಣ್ಣ
ಬೆಂಗಳೂರು, ಫೆ. 8: ವಿಧಾನ ಪರಿಷತ್ ಸದಸ್ಯ ಭೈರತಿ ಸುರೇಶ್ ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯವಲ್ಲ ಎಂದು ಮಾಜಿ ಸಚಿವ ಹಾಗೂ ಮೇಲ್ಮನೆ ಸದಸ್ಯ ಎಚ್.ಎಂ. ರೇವಣ್ಣ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಹೆಬ್ಬಾಳ ಕ್ಷೇತ್ರದಲ್ಲಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ರೆಹ್ಮಾನ್ ಶರೀಫ್ ಪರ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ನನ್ನ ವಿರುದ್ಧ ಧಿಕ್ಕಾರದ ಘೋಷಣೆ ಕೂಗುವವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲ ಎಂದು ಸ್ಪಷ್ಟಪಡಿಸಿದರು.
ಒಬ್ಬ ಆಕಾಂಕ್ಷಿಗೆ ಟಿಕೆಟ್ ಕೈತಪ್ಪಿದೆ ಎಂಬ ಕಾರಣಕ್ಕೆ ಧಿಕ್ಕಾರದ ಘೋಷಣೆ ಕೂಗುವುದು ಸರಿಯಲ್ಲ. ತಾನು ಕಳೆದ ಎಂಟು ವರ್ಷಗಳಿಂದ ಹೆಬ್ಬಾಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಯಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೆಂಬುದು ನನಗೆ ಚೆನ್ನಾಗಿ ಗೊತ್ತು. ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ ಎಂದು ಪ್ರತಿಕ್ರಿಯೆ ನೀಡಿದರು.
ಒಂದು ಚುನಾವಣೆಯಲ್ಲಿ ಟಿಕೆಟ್ ದೊರೆಯಲಿಲ್ಲ ಎಂಬ ಕಾರಣಕ್ಕೆ ಯಾರೂ ಪಕ್ಷದ ವಿರುದ್ಧ ಧಿಕ್ಕಾರದ ಘೋಷಣೆ ಕೂಗುವುದಿಲ್ಲ. ಇದನ್ನು ಸೂಚ್ಯವಾಗಿ ತಿಳಿದು ಕೊಂಡರೆ ಸಾಕು ಎಂದು ರೇವಣ್ಣ ಇದೇ ಸಂದರ್ಭದಲ್ಲಿ ಮಾರ್ಮಿಕವಾಗಿ ನುಡಿದರು.