×
Ad

ಹೆಲ್ಮೆಟ್ ಅವಾಂತರ ಪತ್ನಿಯರೇ ಅದಲು-ಬದಲು !

Update: 2016-02-09 13:51 IST

ರಾಣೇಬೆನ್ನೂರ್ (ಹಾವೇರಿ) ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಿದ್ದರಿಂದ ಅವಘಟಗಳು ಕಮ್ಕಿಯಾಗಿರೋ ಬಗ್ಗೆ ವರದಿಯೇನೂ ಇಲ್ಲ. ಆದರೆ ಅವಳ ಮುಖ ಇವನಿಗೆ ಕಾಣದೆ ಇವನ ಮುಖ ಅವನಿಗೆ ಕಾಣದೆ ಏನೇನ್ ಯಡವಟ್ ಆಗುತ್ತೆ ಎನ್ನುವುದಕ್ಕೆ ಇಲ್ಲಿದೆ ಒಂದು ಉದಾಹರಣೆ ಎಂದು ವಿಜಯ ಕರ್ನಾಟಕ ವರದಿ ಮಾಡಿದೆ. 

ಇಲ್ಲಿನ ಪೆಟ್ರೋಲ್ ಬಂಕ್ ಗೆ 2 ದ್ವಿಚಕ್ರ ವಾಹನಗಳು ಏಕ ಕಾಲಕ್ಕೆ ಪೆಟ್ರೋಲ್ ಹಾಕಿಸಲು ಬಂದಿದ್ದವು. ಎರಡೂ ಹೊಂಡಾ ಬೈಕ್ ಗಳು. ಪೆಟ್ರೋಲ್ ಹಾಕಿಸೋ ಹೊತ್ತಿಗೆ ಸವಾರರಿಬ್ಬರೂ ತಮ್ಮ ಹಿಂಬದಿಯಲ್ಲಿದ್ದ ಪತ್ನಿಯರನ್ನು ಕೆಳಗಿಳಿಸಿದ್ದಾರೆ. ಇಬ್ಬರೂ ಸರಿಸುಮಾರು ಒಂದೇ ಬಣ್ಣದ ಸೀರೆ ಉಟ್ಟಿದ್ದರು. ಒಬ್ಬಾಕೆ ಹೆಲ್ಮೆಟ್ ಹಾಕಿಕೊಂಡೇ ಮೊಬೈಲ್ ನಲ್ಲಿ ಮಾತನಾಡುತ್ತಲೇ ನಿಂತಿದ್ದು, ಆ ಹೊತ್ತಿಗೇ ತಮ್ಮ ಪಕ್ಕದಲ್ಲಿಯೇ ಬಂದು ನಿಂತ ಬೈಕ್ ಏರಿ ಹೊರಟೇ ಬಿಟ್ಟರು. 

ಆದರೆ ಸ್ವಲ್ಪ ಮುಂದೆ ಹೋಗುವಷ್ಟರಲ್ಲಿ ತಾನೇರಿದ ಬೈಕ್ ಬೇರೆ ದಾರಿ ಹಿಡಿದಿದ್ದು ಕಂಡು ಗಾಬರಿಯಾಗಿದ್ದಾರೆ. ಆಕೆ ಯಾವ್ ಕಡೆ ಹೊಂಟೀರಿ ರ್ರೀ...! ಎಂದು ಪ್ರಶ್ನೆ ಮಾಡಿದ್ದಾರೆ. ಅಚ್ಚರಿಯಾಗಿದ್ದು ಬೈಕ್ ಸವಾರನಿಗೆ; ಇದ್ಯಾವುದೋ ಬೇರೆ ಹೆಣ್ಣು ದ್ವನಿ ಬಂತಲ್ಲ ಎಂದು ಹಿಂತಿರುಗಿ ನೋಡುತ್ತಾನೆ, ಕುಂತವಳು ತನ್ನಾಕೆ ಅಲ್ಲ! ಆತಂಕ, ಉದ್ವೇಗದಲ್ಲಿ ಏನು ಮಾಡ್ಬೇಕು ಅಂತ ತೋಚದೆ ಹೋಗಿತ್ತು. ಹೆಲ್ಮೆಟ್ ಹಾಕಿದ್ದರಿಂದ ಹಿಂದೆ ಕುಳಿತಾಕೆ ತನ್ನ ಪತ್ನಿಯೇ ಎಂದು ತಿಳಿದುಕೊಳ್ಳಲು ಆತ ಮರೆತಿದ್ದ. 

ಆದರೂ ತಾಳ್ಮೆ ಕಳೆದುಕೊಳ್ಳದ ಆತ ಪೆಟ್ರೋಲ್ ಬಂಕ್ ಗೆ ಮರಳಿದ್ದಾನೆ. ಅಲ್ಲಿ ಅಸಲಿ ಪತ್ನಿಯೂ ಉಸಿರು ಬಿಗಿ ಹಿಡಿದು ಕಾದಿದ್ದರು. ಹೀಗೆ ಅದಲು ಬದಲಾದ ಜೋಡಿಗಳ ನಡುವೆ ಸಣ್ಣದೊಂದು ವಾಗ್ವಾದವೂ ನಡೆದಿದೆ ಎಂದು ತಿಳಿದುಬಂದಿದೆ. ಅಂತಿಮವಾಗಿ ತನ್ನಾಕೆ ಮರಳಿ ಸಿಕ್ಕಳಲ್ಲ ಎಂದು ನಿಟ್ಟುಸಿರು ಬಿಟ್ಟರು ಇಬ್ಬರೂ  ಸವಾರರು. ಹೆಲ್ಮೆಟ್ ಹಾಕಿಕೊಂಡಿದ್ದರೆ ತಲೆ ಗಟ್ಟಿ ಆದರೆ ಅಸಲಿ ನಕಲಿ ನೀವೇ ಖಾತ್ರಿ ಮಾಡಿಕೊಳ್ಳಬೇಕು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News