×
Ad

ಜೈವಿಕ ತಂತ್ರಜ್ಞಾನದ ಸದ್ಬಳಕೆ ಅಗತ್ಯ: ಡಾ.ಹರ್ಷವರ್ಧನ್

Update: 2016-02-09 23:14 IST

ಬೆಂಗಳೂರು, ಫೆ.9: ಜೈವಿಕ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ಜನಸಾಮಾನ್ಯರಿಗೆ ಔಷಧಗಳು ಮತ್ತು ವೈದ್ಯಕೀಯ ಸಲಕರಣೆಗಳು ಅತ್ಯಂತ ಕಡಿಮೆ ದರದಲ್ಲಿ ಸಿಗುವಂತೆ ಮಾಡಬೇಕಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಹರ್ಷವರ್ಧನ್ ಕರೆ ನೀಡಿದ್ದಾರೆ.
ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ಇಂಡಿಯಾ ಬಯೋಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಧುಮೇಹ ಹಾಗೂ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಂದ ಬಳಲುತ್ತಿರುವ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಔಷಧಿಗಳು ಲಭ್ಯವಾಗುವಂತೆ ಸಂಶೋಧನೆಗಳು ನಡೆಯಬೇಕು ಎಂದರು.
ಭಾರತವು ಜ್ಞಾನಾಧಾರಿತ ದೇಶವಾಗಿದ್ದು, ವೈದ್ಯಕೀಯ ಕ್ಷೇತ್ರಕ್ಕೆ ಜೈವಿಕ ತಂತ್ರಜ್ಞಾನ ಕ್ಷೇತ್ರ ಉತ್ತಮ ಕೊಡುಗೆ ನೀಡುತ್ತಿದೆ. ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಜೈವಿಕ ತಂತ್ರಜ್ಞಾನದಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಇದರ ಬಗ್ಗೆ ವಿಜ್ಞಾನಿಗಳು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಅವರು ಕರೆ ನೀಡಿದರು.
ಕೇಂದ್ರ ಸರಕಾರ 2025ರವರೆಗೆ ಇಂತಿಷ್ಟು ಸಾಧನೆ ಮಾಡಬೇಕೆಂಬ ಗುರಿಯನ್ನು ನಿಗದಿ ಮಾಡಿದೆ. ಆದರೆ, ಅದಕ್ಕೂ ಮೊದಲು ಐದು ವರ್ಷದ ಅವಧಿಯಲ್ಲಿ ಮಾಡಬೇಕಾದ ಕೆಲಸವನ್ನು ಯಶಸ್ವಿಯಾಗಿ ಮಾಡಬೇಕು. ಅತೀ ಹೆಚ್ಚು ನಿರೀಕ್ಷೆಯೊಂದಿಗೆ ಗುರಿ ಸಾಧಿಸಲು ಹೋಗಿ ವಿಫಲವಾಗುವುದಕ್ಕಿಂತ ಇದು ಉತ್ತಮ ಎಂದು ಅವರು ಅಭಿಪ್ರಾಯಪಟ್ಟರು.
ಮಾಹಿತಿ ತಂತ್ರಜ್ಞಾನ ಎಂದರೆ ಪ್ರಸ್ತುತ ಭಾರತ. ಜೈವಿಕ ತಂತ್ರಜ್ಞಾನವೆಂದರೆ ಭವಿಷ್ಯದ ಭಾರತ. ಜೈಜವಾನ್, ಜೈಕಿಸಾನ್ ಜೊತೆಗೆ ಜೈ ವಿಜ್ಞಾನ್ ಎಂಬ ಘೋಷಣೆಯೂ ಸೇರ್ಪಡೆಯಾಗುವ ಕಾಲ ಸನ್ನಿಹಿತವಾಗಿದೆ. ಮುಂಬರುವ ದಿನಗಳಲ್ಲಿ ಭಾರತವು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುತ್ತದೆ ಎಂದು ಹರ್ಷವರ್ಧನ್ ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕವು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದೆ. ದೇಶದಲ್ಲಿರುವ ಒಟ್ಟಾರೆ ಜೈವಿಕ ತಂತ್ರಜ್ಞಾನ ಸಂಸ್ಥೆಗಳ ಪೈಕಿ ಶೇ.50ಕ್ಕಿಂತ ಹೆಚ್ಚು ಸಂಸ್ಥೆಗಳು ಕರ್ನಾಟಕದಲ್ಲಿರುವುದು ಹೆಮ್ಮೆಯ ಸಂಗತಿ. ಜೈವಿಕ ತಂತ್ರಜ್ಞಾನವನ್ನು ಉತ್ತೇಜಿಸಲು ನೂತನ ಜೈವಿಕ ತಂತ್ರಜ್ಞಾನ ನೀತಿಯನ್ನು ಜಾರಿಗೆ ತರಲಾಗಿದೆ. ಜೈವಿಕ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಯುವ ಸಮೂಹಕ್ಕೆ ಹೆಚ್ಚಿನ ಅವಕಾಶಗಳಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಕೇಂದ್ರ ಸರಕಾರವು 500 ಹೊಸ ಉದ್ಯಮ(ಸ್ಟಾರ್ಟಪ್)ಗಳ ಆರಂಭಕ್ಕೆ ಚಿಂತನೆ ನಡೆಸಿದ್ದು, ಈ ಪೈಕಿ 300 ಹೊಸ ಉದ್ಯಮಗಳು ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ್ದು. 100 ಕಂಪೆನಿಗಳು ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿವೆ. ಯುವಕರನ್ನು ಆಕರ್ಷಿಸಲು 10 ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದು ಅವರು ತಿಳಿಸಿದರು.
ಮೂಲ ಸೌಕರ್ಯ ಮತ್ತು ವಾರ್ತಾ ಸಚಿವ ರೋಷನ್‌ಬೇಗ್ ಮಾತನಾಡಿ, ದೇಶದ 10 ಪ್ರಮುಖ ಜೈವಿಕ ತಂತ್ರಜ್ಞಾನ ಕಂಪೆನಿಗಳಲ್ಲಿ ಬೆಂಗಳೂರು ಒಂದರಲ್ಲೆ 5 ಕಂಪೆನಿಗಳಿವೆ. ಜೈವಿಕ ತಂತ್ರಜ್ಞಾನವನ್ನು ಉತ್ತೇಜಿಸುವ ಸಲುವಾಗಿ ರಾಜ್ಯ ಸರಕಾರ ಹೊಸ ನೀತಿಯನ್ನು ರೂಪಿಸುತ್ತಿದೆ ಎಂದರು.
ನೂತನ ನೀತಿಯಿಂದ 2020ರ ವೇಳೆಗೆ 20 ಸಾವಿರ ಕಂಪೆನಿಗಳು ಬರಲಿದ್ದು, 6 ಲಕ್ಷ ಮಂದಿಗೆ ನೇರ ಉದ್ಯೋಗ, 12 ಲಕ್ಷ ಮಂದಿಗೆ ಪರೋಕ್ಷ ಉದ್ಯೋಗಗಳ ಅವಕಾಶಗಳು ಲಭ್ಯವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಉದ್ದಿಮೆ, ಅಭಿವೃದ್ಧಿ ಹಾಗೂ ಪ್ರಗತಿಪರ ಜೊತೆಗೆ ಪರಿಸರ ಸ್ನೇಹಿಯಾಗಿದೆ ಎಂದು ಅವರು ಹೇಳಿದರು.
ಬಯೋಕಾನ್ ಮುಖ್ಯಸ್ಥೆ ಡಾ.ಕಿರಣ್ ಮಜುಂದಾರ್ ಶಾ ಮಾತನಾಡಿ, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ವಿಶ್ವದ ಗಮನ ಸೆಳೆದಿದೆ. ಪ್ರತಿವರ್ಷ 15 ಸಾವಿರ ಪದವಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಪಡೆಯುತ್ತಿದ್ದು, ಅದರಲ್ಲಿ ಶೇ.80 ರಷ್ಟು ಮಂದಿಗೆ ಉದ್ಯೋಗ ದೊರೆಯುತ್ತಿದೆ ಎಂದರು.
ಜೈವಿಕ ತಂತ್ರಜ್ಞಾನ ಕ್ಷೇತ್ರವೊಂದರಲ್ಲೇ 11 ಶತಕೋಟಿ ಡಾಲರ್ ವಹಿವಾಟು ನಡೆಯುತ್ತಿದ್ದು, 2025ರ ವೇಳೆಗೆ 100 ಶತಕೋಟಿ ಡಾಲರ್‌ಗೆ ಈ ವಹಿವಾಟು ವೃದ್ಧಿಯಾಗುವ ಸಾಧ್ಯತೆಯಿದೆ. ಅಗ್ರಿ ಬಯೋಟೆಕ್ನಾಲಜಿ ಮೂಲಕ ದೇಶದಲ್ಲಿ ಆಹಾರ ಭದ್ರತೆ ಒದಗಿಸಲು ಪ್ರಮುಖ ಪಾತ್ರ ವಹಿಸಲಾಗುತ್ತಿದೆ ಎಂದು ಅವರು ಹೇಳಿದರು.
ಸಮಾವೇಶದಲ್ಲಿ ಐಟಿಬಿಟಿ ಇಲಾಖೆ ಕಾರ್ಯದರ್ಶಿ ಬಿ.ಮಂಜುಳಾ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಪ್ರೊ.ವಿಜಯರಾಘವನ್, ಬೆಂಗಳೂರಿನಲ್ಲಿರುವ ಇಂಗ್ಲೆಡ್ ರಾಯಭಾರಿ ಡಾಮಿಲ್ಕಿ ನೆಕಾಸ್ಟಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News