ಸಿದ್ದರಾಮಯ್ಯ ರಾಜ್ಯದ ‘ದುಬಾರಿ’ ಮುಖ್ಯಮಂತ್ರಿ: ಎಚ್‌ಡಿಕೆ
ಬೀದರ್, ಫೆ.9: ಸಮಾಜವಾದಿಯಾಗಿದ್ದ ಸಿದ್ದರಾಮಯ್ಯ, ಮುಖ್ಯಮಂತ್ರಿಯಾದ ನಂತರ ಸರಳ ಜೀವನವನ್ನು ಮರೆತು ಮಜಾವಾದಿಯಾಗಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಧರಿಸುತ್ತಿದ್ದಾರೆ ಎನ್ನಲಾದ ದುಬಾರಿ ಕೈಗಡಿಯಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮಂಗಳವಾರ ನಗರದಲ್ಲಿ ಅವರು ಬಿಡುಗಡೆ ಮಾಡಿದರು.
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರಮೋದಿ 10 ಲಕ್ಷ ರೂ.ಬೆಲೆಬಾಳುವ ಸೂಟು ಧರಿಸಿದ್ದರು ಎಂದು ದೇಶಾದ್ಯಂತ ಆರೋಪಗಳನ್ನು ಮಾಡಿದ್ದ ಕಾಂಗ್ರೆಸ್ ನಾಯಕರಿಗೆ ಅವರ ಪಕ್ಷದ ಮುಖ್ಯಮಂತ್ರಿಯೊಬ್ಬರು 60 ರಿಂದ 70 ಲಕ್ಷ ರೂ.ವೌಲ್ಯದ ಕೈಗಡಿಯಾರ ಧರಿಸುತ್ತಿರುವುದು ಕಾಣುವುದಿಲ್ಲವೇ ಎಂದು ಅವರು ಪ್ರಶ್ನಿಸಿದರು.
ಮುಖ್ಯಮಂತ್ರಿ ಧರಿಸುವ ಕೈಗಡಿಯಾರ ವಜ್ರಖಚಿತ, ಚಿನ್ನಲೇಪಿತವಾದದ್ದು. ಅದನ್ನು ಅವರು ಖರೀದಿಸಿದ್ದಾರೆಯೇ ಅಥವಾ ಯಾರಾದರೂ ಉಡುಗೊರೆಯಾಗಿ ನೀಡಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸಲಿ. ಸಮಾಜವಾದಿ ಹಿನ್ನೆಲೆಯಿಂದ ಬಂದ ನಾನು ಸರಳ ಜೀವನ ನಡೆಸುತ್ತಿದ್ದೇನೆ ಎನ್ನುವ ಸಿದ್ದರಾಮಯ್ಯ, ಮುಖ್ಯಮಂತ್ರಿ ಯಾಗುತ್ತಿದ್ದಂತೆ ಅವರ ಜೀವನ ಶೈಲಿಯನ್ನೇ ಬದಲಾಯಿಸಿಕೊಂಡಿದ್ದಾರೆ ಎಂದು ಅವರು ಟೀಕಿಸಿದರು.
ತಮ್ಮನ್ನು ಜನಸಾಮಾನ್ಯರ ಮುಖ್ಯಮಂತ್ರಿ ಎನ್ನುವ ಸಿದ್ದರಾಮಯ್ಯಗೆ ಬಡವರ ಪರವಾದ ಕಾಳಜಿಯಿಲ್ಲ. ಜೆಡಿಎಸ್ ಪಕ್ಷದ ನಾಯಕರಿಗೆ ಮದುವೆ ಊಟಕ್ಕಿಂತ ತಿಥಿ ಊಟ ಮಾಡಿ ಅಭ್ಯಾಸ ಎಂದು ಟೀಕಿಸುತ್ತಿರುವ ಸಿದ್ದರಾಮಯ್ಯ, ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಯಲ್ಲಿ ಪ್ರತಿ ದಿನ ನಡೆಯುತ್ತಿರುವ ತಿಥಿ ಊಟ ನೋಡಿ ಸಂತೋಷ ಪಡುತ್ತಿರಬಹುದು ಎಂದು ಆರೋಪಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ತಾವು ನಡೆದು ಬಂದ ದಾರಿಯನ್ನು ಮರೆತಿದ್ದಾರೆ. ಅವರಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಲೋಹಿಯಾ ಸಿದ್ಧಾಂತದ ಪ್ರತಿಪಾದಕ ಸಿದ್ದರಾಮಯ್ಯ ಈಗ ಕಾಂಗ್ರೆಸ್ ಸಿದ್ಧಾಂತದವರಾಗಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.