×
Ad

ಬಲಿಜ ಸಮುದಾಯ 2ಎಗೆ ಸೇರ್ಪಡೆ; ಸೂಕ್ತ ಕ್ರಮ ಕೈಗೊಳ್ಳಲು ಸರಕಾರಕ್ಕೆ ಹೈಕೋರ್ಟ್ ಆದೇಶ

Update: 2016-02-09 23:18 IST

ಬೆಂಗಳೂರು, ಫೆ.9: ಶೈಕ್ಷಣಿಕ ಉದ್ದೇಶಕ್ಕಾಗಿ ಬಲಿಜ ಸಮುದಾಯವನ್ನು 3ಎ ನಿಂದ 2ಎಗೆ ಸೇರಿಸಿ ಹೊರಡಿಸಿರುವ ಅಧಿಸೂಚನೆ ಸಂಬಂಧ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳು ಅಹವಾಲು ಆಲಿಸಿ ಆರು ತಿಂಗಳ ಒಳಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
      ಈ ಸಂಬಂಧ ಕರ್ನಾಟಕ ಪ್ರದೇಶ ಕುರುಬರ ಸಂಘ, ರಾಜ್ಯ ಈಡಿಗರ ಸಂಘ, ರಾಜ್ಯ ವಿಶ್ವಕರ್ಮ ಸಮಾಜ ಹಾಗೂ ಇನ್ನಿತರೆ ನಾಲ್ಕು ಸಮುದಾಯಗಳ ವತಿಯಿಂದ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಲೇವಾರಿ ಮಾಡಲಾಯಿತು.
  ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ರವಿ ಮಳೀಮಠ ಅವರಿದ್ದ ವಿಭಾಗೀಯ ಪೀಠವು, ಅರ್ಜಿದಾರರು ಈ ಕುರಿತಂತೆ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗೆ ಮೂರು ವಾರಗಳ ಒಳಗೆ ಮನವಿ ಸಲ್ಲಿಸಬೇಕು ಎಂದು ಸೂಚಿಸಿದೆ.
    ಸಮಾಜ ಕಲ್ಯಾಣ ಇಲಾಖೆ ಕಾರ್ಯ ದರ್ಶಿಯವರು ಹಿಂದುಳಿದ ವರ್ಗಗಳ ಆಯೋಗದಿಂದ ಸೂಕ್ತ ವರದಿ ತರಿಸಿಕೊಳ್ಳ ಬೇಕು. ಸರಕಾರದ ಈ ಅಧಿಸೂಚನೆ ಸರಿಯಿದೆಯೊ ಇಲ್ಲವೋ ಎಂಬುದನ್ನು ಪರಿಶೀಲಿಸಿ ಆರು ತಿಂಗಳ ಒಳಗೆ ಆದಷ್ಟು ಶೀಘ್ರ ಇತ್ಯರ್ಥ ಮಾಡಬೇಕು ಎಂದು ಆದೇಶಿಸಲಾಗಿದೆ.
    2011ರ ಜುಲೈ 16ರಂದು ರಾಜ್ಯ ಸರಕಾರವು ಅಧಿಸೂಚನೆ ಹೊರಡಿಸಿ ಬಲಿಜ ಸಮುದಾಯಕ್ಕೆ 2ಎ ನಲ್ಲಿ ಶಿಕ್ಷಣ ಸೌಲಭ್ಯ ಪಡೆಯಲು ಆದೇಶಿಸಿತ್ತು. ಈ ಅಧಿಸೂಚನೆ ಅವೈಜ್ಞಾನಿಕವಾಗಿದೆ. ಆದೇಶ ಹೊರಡಿಸುವ ಮುನ್ನ ಬಲಿಜ ಸಮುದಾಯದ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿ ಕುರಿತಂತೆ ಯಾವುದೇ ವರದಿ ತರಿಸಿಕೊಂಡಿಲ್ಲ ಮತ್ತು ಹಿಂದುಳಿದ ವರ್ಗಗಳ ಆಯೋಗದಿಂದಲೂ ಈ ಸಂಬಂಧ ಯಾವುದೇ ಮಾಹಿತಿ ಪಡೆದಿಲ್ಲ ಎಂದು ಅರ್ಜಿದಾರರು ದೂರಿದ್ದರು. ಅರ್ಜಿದಾರರ ಪರವಾಗಿ ಎಚ್.ಕೆ.ರವಿ ವಾದ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News