ಸಿಎಂ ಸಿದ್ದರಾಮಯ್ಯ ವಾಚ್ ವಿವಾದ: ಲೋಕಾಯುಕ್ತಕ್ಕೆ ದೂರು
ಬೆಂಗಳೂರು, ಫೆ.11: ಮುಖ್ಯಮಂತ್ರಿ ಸಿದ್ದರಾಮಯ್ಯ ಧರಿಸಿರುವ ಹ್ಯೂಬ್ಲೋಟ್ ವಾಚ್‌ನ ಮೂಲದ ಬಗ್ಗೆ ತನಿಖೆ ನಡೆಸುವಂತೆ ಕೋರಿ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಕಾರ್ಯಕರ್ತ ರಾಮಮೂರ್ತಿ ಗೌಡ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದಾರೆ.
ಮಾಧ್ಯಮ ವರದಿಗಳನ್ನಾಧರಿಸಿ ವಾಚ್ ಬಗ್ಗೆ ಲೋಕಾಯುಕ್ತ ಪೊಲೀಸ್ ಘಟಕಕ್ಕೆ ದೂರು ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದುಬಾರಿ ಬೆಲೆಯ ವಜ್ರಖಚಿತ ಹ್ಯೂಬ್ಲೋಟ್ ವಾಚ್ ಧರಿಸಿದ್ದಾರೆ. ಈ ವಾಚ್ ಖರೀದಿ ಮಾಡಿದ ಬಗ್ಗೆ 2015 ಮಾ.31ರಂದು ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ವಿವರ ಪ್ರಮಾಣಪತ್ರದಲ್ಲಿ ನಮೂದಿಸಿಲ್ಲ. ಆಸ್ತಿ ವಿವರ ಗಮನಿಸಿದರೆ ಅವರಿಗೆ ಸಾಲವಿರುವುದು ಖಚಿತವಾಗಿದೆ. ಇಷ್ಟಾಗಿಯೂ ಅವರು 80 ಲಕ್ಷ ರೂ. ವೌಲ್ಯದ ವಾಚ್ ಖರೀದಿ ಮಾಡಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪರೋಕ್ಷವಾಗಿ ಭ್ರಷ್ಟಾಚಾರ ಮಾಡಿದ್ದು, ಈ ಉಡುಗೊರೆ ನೀಡಿರಬಹುದೆ: : ಅರ್ಕಾವತಿ ಡಿ-ನೋಟಿಫಿಕೇಷನ್, ಗಣಿ ಗುತ್ತಿಗೆ ಅಕ್ರಮ ಪರವಾನಿಗೆ ವಿತರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಮುಖ್ಯಮಂತ್ರಿ ವಿರುದ್ದ ಲೋಕಾಯುಕ್ತದಲ್ಲಿ ಈಗಾಗಲೇ ರಾಮಮೂರ್ತಿ ಗೌಡ ಅವರು ಮೂರು ದೂರುಗಳನ್ನು ದಾಖಲಿಸಿದ್ದರು. ಇದೀಗ ಮಾಧ್ಯಮಗಳ ವರದಿಗಳನ್ನಾಧರಿಸಿ ಮುಖ್ಯಮಂತ್ರಿ ಅವರ ದುಬಾರಿ ವಾಚ್ ಬಗ್ಗೆ ದೂರು ನೀಡಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ವಾಚ್‌ನ್ನು ಸುಮ್ಮನೆ ನೀಡಲು ಸಾಧ್ಯವಿಲ್ಲ. ಇದು ಉಡುಗೊರೆ ರೂಪದಲ್ಲಿ ಬಂದಿರುವ ಸಾಧ್ಯತೆ ಇದ್ದು, ಯಾವ ಸಹಾಯಕ್ಕಾಗಿ ಯಾರು ನೀಡಿದರು ಎಂಬುದರ ಬಗ್ಗೆ ಮಾಹಿತಿ ದೊರೆತಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ನಂತರ ಅವರ ಪತ್ನಿ ಪಾರ್ವತಿ ಅವರಿಗೆ ಸುಮಾರು 3 ಕೋಟಿ ರೂ. ಸಾಲ ರೂಪದಲ್ಲಿ ನೀಡಿದ್ದಾರೆ. ಅಷ್ಟೆ ಅಲ್ಲದೆ, ಅವರ ಪುತ್ರ ಡಾ.ಯತೀಂದ್ರ ಅವರಿಗೆ 2013ರಲ್ಲಿ 40 ಲಕ್ಷ ರೂ. ನೀಡಿದ್ದಾರೆ.