ಕಾಂಗ್ರೆಸ್‌ಗೆ ‘ಶಾಕ್ ಟ್ರೀಟ್‌ಮೆಂಟ್’ ನೀಡಿ: ವೆಂಕಯ್ಯನಾಯ್ಡು
ಹೆಬ್ಬಾಳ ಕ್ಷೇತ್ರದ ಉಪ ಚುನಾವಣೆ
ಬೆಂಗಳೂರು, ಫೆ.11: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕದನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ಟ್ರೀಟ್‌ಮೆಂಟ್ ನೀಡಬೇಕಾಗಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯನಾಯ್ಡು ಹೇಳಿದ್ದಾರೆ.
ಗುರುವಾರ ಹೆಬ್ಬಾಳದಲ್ಲಿ ಬಿಜೆಪಿ ಅಭ್ಯಥಿರ್1 ಎನ್.ಎ.ನಾರಾ ಯಣಸ್ವಾಮಿ ಪರವಾಗಿ ಚುನಾವಣಾ ಪ್ರಚಾರ ನಡೆಸಿದ ಅವರು, ಪ್ರಧಾನಮಂತ್ರಿ ಕರೆಯುವ ಸಭೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುವುದಿಲ್ಲ. ಇದು ಮುಖ್ಯಮಂತ್ರಿಯ ತಪ್ಪಲ್ಲ. ಅವರ ಮೇಲಿರೊ ಕಾಂಗ್ರೆಸ್ ಹೈಕಮಾಂಡ್ ತಪ್ಪು ಎಂದು ಟೀಕಿಸಿದರು.
ಕೇಂದ್ರ ಸರಕಾರದೊಂದಿಗೆ ಪ್ರತಿಯೊಂದು ವಿಚಾರದಲ್ಲೂ ಸಂಘರ್ಷ ಮುಂದುವರಿಸುವುದು ಕಾಂಗ್ರೆಸ್ ಪದ್ಧತಿಯಾಗಿದೆ ಎಂದ ಅವರು, ದೇಶದ ಅಭಿವೃದ್ಧಿ ಹಾಗೂ ಬೆಳವಣಿಗೆಯ ವಿಚಾರದಲ್ಲಿ ನಾವು ಯಾವುದೇ ರಾಜಕೀಯ ಮಾಡದೆ ಒಂದು ತಂಡವಾಗಿ ಮುಂದುವರಿಯಲು ಇಚ್ಛಿಸುತ್ತಿದ್ದೇವೆ ಎಂದರು.
ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ರಾಜಧಾನಿ ಬೆಂಗಳೂರಿನ ಅಭಿವೃದ್ಧಿಯಾಗಿತ್ತು. ನಂತರ ಬಂದ ಸದಾನಂದಗೌಡ ಹಾಗೂ ಜಗದೀಶ್ ಶೆಟ್ಟರ್ ಅದನ್ನು ಮುಂದುವರಿಸಿದರು. ಆದರೆ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯ ಹಾಗೂ ಬೆಂಗಳೂರಿನ ಅಭಿವೃದ್ಧಿ ಕಡೆಗಣಿಸಲ್ಪಟ್ಟಿದೆ ಎಂದು ವೆಂಕಯ್ಯನಾಯ್ಡು ಟೀಕಿಸಿದರು.
ಕಾಂಗ್ರೆಸ್ ಪಕ್ಷ ಯಾವಾಗಲೂ ರಾಷ್ಟ್ರೀಯ ಭದ್ರತೆಯ ವಿಚಾರದೊಂದಿಗೆ ಜಾತಿ ಹಾಗೂ ವೋಟ್‌ಬ್ಯಾಂಕ್‌ನ್ನು ಬೆರೆಸುವ ಕೆಲಸ ಮಾಡುತ್ತದೆ. 2004ರಲ್ಲಿ ಗುಜರಾತ್‌ನಲ್ಲಿ ಎನ್‌ಕೌಂಟರ್‌ನಲ್ಲಿ ಬಲಿಯಾದ ಇಶ್ರತ್ ಜಹಾನ್ ಭಯೋತ್ಪಾದಕ ಸಂಘಟನೆಯ ಸದಸ್ಯೆಯಾಗಿದ್ದಳು ಎಂಬುದನ್ನು ಉಗ್ರ ಡೇವಿಡ್ ಹೆಡ್ಲಿ ಬಹಿರಂಗಗೊಳಿಸಿದ್ದಾನೆ ಎಂದು ಅವರು ಹೇಳಿದರು.
ಮುಂಬೈ ಸರಣಿ ಬಾಂಬ್ ಸ್ಫೋಟದ ಆರೋಪಿ ಯಾಕುಬ್ ಮೆಮನ್ ಪರವಾಗಿ ಹೋರಾಟ ಮಾಡುವವರಿಗೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡುತ್ತದೆ. ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಗಲಾಟೆ ಮಾಡಿದವರ ಪರವಾಗಿ ಕಾಂಗ್ರೆಸ್ ಪಕ್ಷ ನಿಂತಿದೆ. ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಕಾಂಗ್ರೆಸ್ ಇಂತಹ ಕೀಳು ಮಟ್ಟದ ಕೆಲಸ ಮಾಡುತ್ತಿದೆ ಎಂದು ವೆಂಕಯ್ಯನಾಯ್ಡು ಆಕ್ರೋಶ ವ್ಯಕ್ತಪಡಿಸಿದರು.