ಫೆ.17ಕ್ಕೆ ರಾಜ್ಯಾದ್ಯಂತ ಕಾಲೇಜು-ವಿವಿಗಳ ಬಂದ್
ಅತಿಥಿ ಉಪನ್ಯಾಸಕರ ಸೇವಾ ಭದ್ರತೆಗೆ ‘ವಿಶೇಷ ನಿಯಮಾವಳಿ’ ರೂಪಿಸಲು ಒತ್ತಾಯ
ಬೆಂಗಳೂರು, ಫೆ. 11: ಅತಿಥಿ ಉಪನ್ಯಾಸಕರ ಸೇವಾ ಭದ್ರತೆಗೆ ‘ವಿಶೇಷ ನಿಯಾಮಾವಳಿ’ ರೂಪಿಸಬೇಕೆಂದು ಒತ್ತಾಯಿಸಿ ಫೆ.17 ರಂದು ರಾಜ್ಯಾದ್ಯಂತ 411 ಕಾಲೇಜುಗಳ ಅತಿಥಿ ಉಪನ್ಯಾಸಕರು ಕಾಲೇಜು-ವಿವಿಗಳನ್ನು ಬಂದ್ ಮಾಡಲಾಗುತ್ತಿದೆಯೆಂದು ಕರ್ನಾಟಕ ರಾಜ್ಯ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಗೌರವಾದ್ಯಕ್ಷ ಬಿ. ರಾಜಶೇಖರ್‌ಮೂರ್ತಿ ತಿಳಿಸಿದ್ದಾರೆ.
ಗುರುವಾರ ಬಹುಮಹಡಿ ಕಟ್ಟಡದಲ್ಲಿನ ಕರ್ನಾಟಕ ಸರಕಾರ ಸಚಿವಾಲಯ ನೌಕರರ ಸಂಘದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರನ್ನು ಕಳೆದ 15 ವರ್ಷಗಳಿಂದ ಅತ್ಯಂತ ಅಮಾನವೀಯವಾಗಿ ದುಡಿಸಿಕೊಳ್ಳಲಾಗುತ್ತಿದೆ. ಆದರೆ ಉಪನ್ಯಾಸಕರ ಸಮಸ್ಯೆಗಳ ಕುರಿತು ಒಂದು ಬಾರಿಯಾದರೂ ಚಕಾರವೆತ್ತಿಲ್ಲ. ಬದಲಿಗೆ ಹಾಲಿ ಸೇವೆಯಲ್ಲಿರುವ ಪ್ರತಿಭಟನಾ ನಿರತ ಉಪನ್ಯಾಸಕರನ್ನು ತೆಗೆದು ಹಾಕಿ ಪರ್ಯಾಯವಾಗಿ ಪದವಿ ತರಗತಿಗಳನ್ನು ನಡೆಸುತ್ತೇವೆ ಎಂಬ ಬೆದರಿಕೆ ಹಾಕಲಾಗುತ್ತಿದೆಯೆಂದು ಸರಕಾರದ ವಿರುದ್ದ ಕಿಡಿಕಾರಿದರು. ಪದವಿ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ 14,531 ಅತಿಥಿ ಉಪನ್ಯಾಸಕರು ಕಳೆದ ಒಂದು ತಿಂಗಳಿಂದ ಬೇಡಿಕೆಗಳ ಈಡೇರಿಕೆಗಾಗಿ ನಿರಂತರ ಹೋರಾಟ ಮಾಡುತ್ತಿದ್ದಾರೆ. ಇದರಿಂದ ರಾಜ್ಯದಾದ್ಯಂತ 5 ಲಕ್ಷಕ್ಕಿಂತ ಹೆಚ್ಚಿರುವ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಆದರೂ ಆಳುವ ಸರಕಾರಗಳು ಈ ಬಗ್ಗೆ ಗಮನ ನೀಡುತ್ತಿಲ್ಲವೆಂದು ಟೀಕಿಸಿದರು.
ಅತಿಥಿ ಉಪನ್ಯಾಸಕರ ಮತ್ತು ಶೈಕ್ಷಣಿಕ ಕ್ಷೇತ್ರದ ಬೇಡಿಕೆಗಳ ಈಡೇರಿಕೆಗಾಗಿ ಬಂದ್ ನಡೆಯುತ್ತಿದೆ. ಈ ಬಂದ್‌ನಲ್ಲಿ ವಿದ್ಯಾರ್ಥಿ ಮತ್ತು ಯುವಜನರು ಹಾಗೂ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಡಿವೈಎಫ್‌ಐ ನ ರಾಜ್ಯ ಕಾರ್ಯದರ್ಶಿ ರಾಜಶೇಖರ ಮೂರ್ತಿ ಮನವಿ ಮಾಡಿದ್ದಾರೆ.
ಬೇಡಿಕೆಗಳು
ಅತಿಥಿ ಉಪನ್ಯಾಸಕರನ್ನು ಖಾಯಂ ನೇಮಕಾತಿ ಮಾಡಬೇಕು, ಸೇವಾ ಭದ್ರತೆಯನ್ನು ನೀಡಬೇಕು. ಮಾಸಿಕ 25 ಸಾವಿರ ವೇತನ ನೀಡಬೇಕು. ಮಹಿಳಾ ಉಪನ್ಯಾಸಕರಿಗೆ ಕೆಲಸದ ವೇಳೆ ವೇತನ ಸಹಿತ ಹೆರಿಗೆ ರಜೆ ನೀಡಬೇಕು. ಶಾಲಾ, ಕಾಲೇಜು, ವಿಶ್ವವಿದ್ಯಾನಿಲಯ ಮತ್ತು ಎಲ್ಲ ಸರಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಶಿಕ್ಷಣಕ್ಕೆ ರಾಜ್ಯ ಬಜೆಟ್‌ನಲ್ಲಿ ಶೇ.30, ಕೇಂದ್ರ ಬಜೆಟ್‌ನಲ್ಲಿ ಶೇ. 6 ಮತ್ತು ಜಿಡಿಪಿಯಲ್ಲಿ ಶೇ. 3ರಷ್ಟು ಹಣವನ್ನು ಮೀಸಲಿಡಬೇಕು. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಗಳನ್ನು ನಡೆಸಬೇಕು. ಸರಕಾರಿ ಶಾಲಾ, ಕಾಲೇಜು ಮತ್ತು ವಿವಿಗಳನ್ನು ಆಧುನೀಕರಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿಯನ್ನು ತಪ್ಪಿಸಬೇಕು.