×
Ad

ಬಟ್ಟೆ ಖರೀದಿಗೆ ವಿದೇಶಕ್ಕೆ ತೆರಳುವ ಎಚ್‌ಡಿಕೆ: ಪ್ರಕಾಶ್

Update: 2016-02-11 23:20 IST

ಬೆಂಗಳೂರು, ಫೆ. 11: ಸಿಎಂ ಸಿದ್ದರಾಮಯ್ಯನವರ ಜನಪ್ರಿಯತೆ ಹಾಗೂ ಅವರ ಜನಪರ ಯೋಜನೆಗಳನ್ನು ಕಂಡು ಹತಾಶರಾಗಿರುವ ಮಾಜಿ ಸಿಎಂ ಕುಮಾರಸ್ವಾಮಿ, ಸರಕಾರದ ವಿರುದ್ಧ ಆರೋಪ ಮಾಡಲು ಯಾವುದೇ ಆಧಾರಗಳು ದೊರೆಯದ ಹಿನ್ನೆಲೆಯಲ್ಲಿ ವಿಚಲಿತರಾಗಿದ್ದಾರೆಂದು ರಾಜ್ಯ ಒಕ್ಕಲಿಗರ ಹೋರಾಟ ಸಮಿತಿ ಅಧ್ಯಕ್ಷ ಜೆ.ಪ್ರಕಾಶ್ ದೂರಿದ್ದಾರೆ.
ಕೊನೆಯದಾಗಿ ಸಿಎಂ ಸಿದ್ದರಾಮಯ್ಯನವರು ಧರಿಸುವ ವಸ್ತ್ರ, ವಾಚು, ಕನ್ನಡಕಗಳ ಮೇಲೆ ಕುಮಾರಸ್ವಾಮಿ ವಕ್ರದೃಷ್ಟಿ ಬಿದ್ದಿದ್ದು, ಅವರ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಕುಮಾರಸ್ವಾಮಿ ಗಾಜಿನ ಮನೆಯಲ್ಲಿ ಕುಳಿತು ಬೇರೆಯವರ ಮೇಲೆ ಕಲ್ಲೆಸೆಯುತ್ತಿದ್ದಾರೆಂದು ಪ್ರಕಾಶ್ ಟೀಕಿಸಿದ್ದಾರೆ.
ತಮ್ಮ ಪುತ್ರನ ಚಿತ್ರರಂಗ ಪಾದಾರ್ಪಣೆ ಸಮಾರಂಭಕ್ಕೆ ಕೋಟ್ಯಂತರ ರೂ.ವೆಚ್ಚ ಮಾಡಿ, ಓಡಾಟಕ್ಕೆ ದುಬಾರಿ ಬೆಲೆಯ ಕಾರು, ಬಟ್ಟೆಗಳ ಖರೀದಿಗೆ ವಿದೇಶಕ್ಕೆ ಹೋಗುವ ಕುಮಾರಸ್ವಾಮಿಗೆ ಸಿದ್ಧರಾಮಯ್ಯನವರ ವಿರುದ್ಧ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬರಿಗೂ ಒಳ್ಳೆಯ ಬಟ್ಟೆ, ವಾಚು, ಕನ್ನಡಕದ ವ್ಯಾಮೋಹ ಇರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವುಗಳನ್ನು ಧರಿಸುವುದರಲ್ಲಿ ತಪ್ಪೇನಿಲ್ಲ. ಆದರೆ, ಕುಮಾರಸ್ವಾಮಿ ಇಂತಹ ಕೀಳು ಮಟ್ಟದ ಆರೋಪಿಗಳನ್ನು ಕೈಬಿಟ್ಟು ಜನಪರ ಹೋರಾಟಕ್ಕೆ ಮುಂದಾಗಲಿ ಎಂದು ಪ್ರಕಾಶ್ ಪ್ರಕಟನೆಯಲ್ಲಿ ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News