×
Ad

ರಸ್ತೆ ಅಪಘಾತದಲ್ಲಿ ಯುವಕ ಸಾವು; ಬಸ್‌ಗಳ ಮೇಲೆ ಕಲ್ಲುತೂರಾಟ, ಬೆಂಕಿ

Update: 2016-02-11 23:28 IST

ಬಸ್ ಚಾಲಕ, ನಿರ್ವಾಹಕರ ಮೇಲೆ ಹಲ್ಲೆ; ಸಂಚಾರ ಅಸ್ತವ್ಯಸ್ತ; ಪೊಲೀಸರಿಂದ ಲಾಠಿ ಚಾರ್ಜ್

ಶಿವಮೊಗ್ಗ, ಫೆ. 11: ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದರಿಂದ ರೊಚ್ಚಿಗೆದ್ದ ನಾಗರಿಕರು ಸರಕಾರಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿ, ಬಸ್‌ವೊಂದಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಬಸ್ ಚಾಲಕ, ನಿರ್ವಾಹಕರ ಮೇಲೆ ಹಲ್ಲೆ ಮಾಡಿ ದಾಂಧಲೆ ನಡೆಸಿದ ಘಟನೆ ನಗರದ ಹೊರವಲಯ ಮಾಚೇನಹಳ್ಳಿಯ ಶಿವಮೊಗ್ಗ-ಭದ್ರಾವತಿ ನಡುವಿನ ಬಿ.ಎಚ್.ರ

್ತೆಯಲ್ಲಿ ಬುಧವಾರ ರಾತ್ರಿ ನಡೆದಿದೆ. ದಾಂಧಲೆಯ ಕಾರಣದಿಂದ ಈ ರಸ್ತೆಯಲ್ಲಿ ಕೆಲ ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಢಾಯಿಸಿದ ಪೊಲೀಸರು ದಾಂಧಲೆಯಲ್ಲಿ ತೊಡಗಿದ್ದವರ ಮೇಲೆ ಲಾಠಿ ಚಾರ್ಜ್ ಮಾಡಿ ಚದುರಿಸಿದ್ದಾರೆ. ತದನಂತರ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಏನಾಯ್ತು?:  ಭದ್ರಾವತಿ ಕಡೆಯಿಂದ ಶಿವಮೊಗ್ಗದೆಡೆಗೆ ಆಗಮಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ವೊಂದು ಮಾಚೇನಹಳ್ಳಿಯ ಬಳಿ ಬೈಕ್‌ವೊಂದಕ್ಕೆ ಢಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಪದ್ಮನಯನಹಳ್ಳಿಯ ನಿವಾಸಿ ಮಂಜುನಾಥ (25) ಎಂಬವರು ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯ ನಿವಾಸಿಗಳು ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಜೊತೆಗೆ ರಸ್ತೆ ತಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಂತದಲ್ಲಿ ಕೆಲವರು ಸರಕಾರಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿ, ಅದರ ಚಾಲಕ-ನಿರ್ವಾಹಕರ ಮೇಲೆ ಹಲ್ಲೆ ನಡೆಸಲಾರಂಭಿಸಿದ್ದಾರೆ. ಕೆಲ ಕಿಡಿಗೇಡಿಗಳು ಸರಕಾರಿ ಬಸ್‌ವೊಂದಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಇದರಿಂದ ಸ್ಥಳದಲ್ಲಿ ಕೆಲ ಸಮಯ ಬಿಗುವಿನ ವಾತಾವರಣ ಮನೆ ಮಾಡಿತ್ತು.

30ಕ್ಕೂ ಅಧಿಕ ಜನರ ವಿರುದ್ಧ ಪ್ರಕರಣ ದಾಖಲು
ರಸ್ತೆ ಅಪಘಾತ ಹಾಗೂ ನಂತರ ನಡೆದ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಂಗಾ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಬಸ್‌ಗೆ ಬೆಂಕಿ, ಕಲ್ಲು ತೂರಾಟ, ಚಾಲಕ-ನಿರ್ವಾಹಕರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಸುಮಾರು 30ಕ್ಕೂ ಅಧಿಕ ಜನರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸಂಚಾರ ಅಸ್ತವ್ಯಸ್ತ: ರಸ್ತೆ ತಡೆ ಹಾಗೂ ದಾಂಧಲೆಯ ಕಾರಣದಿಂದ ಶಿವಮೊಗ್ಗ-ಭದ್ರಾವತಿಯ ನಡುವೆ ಕೆಲ ಗಂಟೆಗಳ ಕಾಲ ರಸ್ತೆ ಸಂಚಾರ ವ್ಯವಸ್ಥೆಯು ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ರಸ್ತೆಯ ಎರಡು ಬದಿಗಳಲ್ಲಿ ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂದಿತು. ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News