ಟಿಪ್ಪು ಜಯಂತಿ ಗಲಭೆ ಪ್ರಕರಣ; 9 ಮಂದಿ ವಿರುದ್ಧ ಚಾರ್ಜ್‌ಶೀಟ್
ಮಡಿಕೇರಿ, ಫೆ. 11: ಟಿಪ್ಪು ಜಯಂತಿ ಸಂದರ್ಭ ನಗರದಲ್ಲಿ ನಡೆದ ಗಲಭೆಯಲ್ಲಿ ಮೃತಪಟ್ಟ ವಿಶ್ವ ಹಿಂದೂ ಪರಿಷತ್‌ನ ಮುಖಂಡ ಕುಟ್ಟಪ್ಪ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣಾ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಸಲ್ಲಿಸಿದ್ದಾರೆ.
9 ಮಂದಿಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು, ನಾಲ್ವರು ಬಂಧನದಲ್ಲಿದ್ದಾರೆ, ಐವರು ತಲೆ ಮರೆಸಿಕೊಂಡಿದ್ದಾರೆ. ಗಲಭೆ ಪ್ರಕರಣದ ತನಿಖಾಧಿಕಾರಿಯಾಗಿರುವ ನಗರ ಠಾಣೆಯ ವೃತ್ತ ನಿರೀಕ್ಷಕ ಐ.ಪಿ. ಮೇದಪ್ಪ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದರು. ನವೆಂಬರ್ 10 ರಂದು ಕುಟ್ಟಪ್ಪ ಅವರ ಸಾವಿನ ಘಟನೆ ನಡೆದಿದ್ದು, ಸೆಕ್ಷನ್ 302ರಂತೆ ಪ್ರಕರಣ ದಾಖಲಾಗಿತ್ತು. ಆದರೆ, ಇದೀಗ ಸೆಕ್ಷನ್ 302ಕ್ಕೆ ಬದಲಾಗಿ ಸೆಕ್ಷನ್ 304ರ ಅನ್ವಯ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಒಟ್ಟು 9 ಮಂದಿಯ ವಿರುದ್ಧ ಸೆಕ್ಷನ್ 304ರಂತೆ ಮೊಕದ್ದಮೆ ದಾಖಲಾಗಿದ್ದು, ಸಿದ್ದಾಪುರದ ಅರೆಕಾಡು ನೇತಾಜಿ ನಗರದ ಟಿ.ಎ. ಖಾಲಿದ್, ನೆಲ್ಯಹುದಿಕೇರಿಯ ಜೀಪ್ ಚಾಲಕ ವಿ.ಎ. ಅಬ್ದುಲ್ ಗಫೂರ್, ವಾಲ್ನೂರು ತ್ಯಾಗತ್ತೂರಿನ ಕೆ.ವೈ. ರಝಾಕ್ ಹಾಗೂ ನಲ್ವತ್ತೆಕರೆಯ ಸಿ.ಟಿ. ಫೈಝಲ್ ಈಗಾಗಲೆ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇವರುಗಳಲ್ಲದೆ ನಲ್ವತ್ತೆಕರೆಯ ಬಿ.ಎಸ್. ಅಕ್ಬರ್ ಅಲಿ, ಬಿ.ಎ. ಸಂಶೀರ್, ತ್ಯಾಗತ್ತೂರಿನ ಪಿ.ಎಂ. ಅಶ್ರಫ್, ಪೊನ್ನತ್ ಮೊಟ್ಟೆಯ ಸೈಫುದ್ದೀನ್ ಹಾಗೂ ಗುಹ್ಯದ ಸಾಹುಲ್ ಹಮೀದ್ ಎಂಬವರು ಪ್ರಕರಣದಲ್ಲಿ ಭಾಗಿಯಾಗಿದ್ದು, ಈ ಐವರು ತಲೆ ಮರೆಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ 9 ಮಂದಿಯ ಹೆಸರನ್ನು ಚಾರ್ಜ್ ಶೀಟ್‌ನಿಂದ ಕೈಬಿಡಲಾಗಿದೆ. ಇವರು ಘಟನೆ ಸಂದರ್ಭ ಕೃತ್ಯ ನಡೆದ ಸ್ಥಳದಲ್ಲಿ ಹಾಜರಿರಲಿಲ್ಲ ಮತ್ತು ಆರೋಪ ದೃಢ ಪಡದ ಹಿನ್ನೆಲೆಯಲ್ಲಿ ಹೆಸರನ್ನು ಕೈಬಿಡಲಾಗಿದೆ. ಅರೆಕಾಡು ನೇತಾಜಿ ನಗರದ ಅಮೀರ್ ಸುಹೈಲ್, ತೊಂಬತ್ತುಮನೆ ಪೈಸಾರಿಯ ಕೆ.ಕೆ. ಲತೀಫ್, ಅಬೂಬಕರ್, ಅಮೀನ್ ಮೊಹ್ಸಿನ್, ಮನ್ಸೂರ್, ಖಲೀಲ್, ಹಫೀಝ್ ಸಾಗರ್, ಸನಾವುಲ್ಲ ಹಾಗೂ ಫಝಲುಲ್ಲಾ ಹೆಸರುಗಳನ್ನು ದೋಷಾರೋಪಣಾ ಪಟ್ಟಿಯಿಂದ ಕೈ ಬಿಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು, ಪೊಲೀಸರು ಹಾಗೂ ಸಾರ್ವಜನಿಕರು ಸೇರಿದಂತೆ 50 ಮಂದಿಯನ್ನು ಸಾಕ್ಷಿಗಳನ್ನಾಗಿ ಪರಿಗಣಿಸಲಾಗಿದೆ. ಸುಮಾರು 30 ದಾಖಲೆಗಳನ್ನು ದೋಷಾರೋಪಣಾ ಪಟ್ಟಿಯೊಂದಿಗೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಆರೋಪಿಗಳಿಗೆ ಕೈಕೋಳ: ಎಸ್ಪಿ, ಡಿವೈಎಸ್ಪಿಗೆ ನೋಟಿಸ್
ಟಿಪ್ಪು ಜಯಂತಿಯಂದು ನಡೆದ ಗಲಭೆ ಸಂದರ್ಭ ಸಾವಿಗೀಡಾದ ಸಾಹುಲ್ ಹಮೀದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಮೂವರು ಆರೋಪಿಗಳನ್ನು ಕೈಕೋಳ ತೊಡಿಸಿ ನ್ಯಾಯಾಲಯಕ್ಕೆ ಕರೆ ತಂದ ಹಿನ್ನೆಲೆ, ಈ ಕುರಿತು ವಿವರಣೆ ನೀಡುವಂತೆ ನ್ಯಾಯಾಲಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಡಿವೈಎಸ್ಪಿಗೆ ನೋಟಿಸ್ ನೀಡಿದೆ.
ಆರೋಪಿಗಳಾದ ಕವನ್, ಭೀಷ್ಮ ಹಾಗೂ ರಮೇಶ್ ನಾಯಕ್‌ನನ್ನು ಕೈಕೋಳ ತೊಡಿಸಿ ಜೈಲಿನಿಂದ ಕರೆ ತಂದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಜಿಲ್ಲಾ ಅಭಿಯೋಜಕರು ಪ್ರಮುಖರು ನ್ಯಾಯಾಧೀಶರಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿದ ನ್ಯಾಯಾಧೀಶರು ವಿವರಣೆ ಕೋರಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆ ಫೆ. 24 ರಂದು ನಡೆಯಲಿದೆ.