2014ನೆ ಸಾಲಿನ ಚಲನಚಿತ್ರ ಪ್ರಶಸ್ತಿ ಪ್ರಕಟ: ಬರಗೂರು, ಪಾಟೀಲ್, ಅರಸ್ ಜೀವಿತಾವಧಿ ಸಾಧನೆಗೆ ಗೌರವ

Update: 2016-02-12 18:10 GMT

ಸಂಚಾರಿ ವಿಜಯ್ ಅತ್ಯುತ್ತಮ ನಟ

ಲಕ್ಷ್ಮಿ ಗೋಪಾಲಸ್ವಾಮಿ ಅತ್ಯುತ್ತಮ ನಟಿ

ಹರಿವು ಅತ್ಯುತ್ತಮ ಚಿತ್ರ
 
ಬೆಂಗಳೂರು, ಫೆ.12: 2014ನೆ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, ಅತ್ಯುತ್ತಮ ಚಿತ್ರವಾಗಿ ಹರಿವು, ಅತ್ಯುತ್ತಮ ನಟ ಪ್ರಶಸ್ತಿಗೆ ಸಂಚಾರಿ ವಿಜಯ್, ಅತ್ಯುತ್ತಮ ನಟಿ ಪ್ರಶಸ್ತಿಗೆ ಲಕ್ಷ್ಮಿ ಗೋಪಾಲಸ್ವಾಮಿ ಆಯ್ಕೆಯಾಗಿದ್ದಾರೆ ಎಂದು ವಾರ್ತಾ ಇಲಾಖೆ ಸಚಿವ ರೋಷನ್ ಬೇಗ್ ತಿಳಿಸಿದ್ದಾರೆ. ಶುಕ್ರವಾರ ನಗರದ ವಾರ್ತಾ ಇಲಾಖೆಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪಟ್ಟಿಯನ್ನು ಘೋಷಿಸಿದ ಸಚಿವ ರೋಷನ್ ಬೇಗ್ ಅವರು, ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ್, ಅಧ್ಯಕ್ಷ ಕೆ.ಶಿವರುದ್ರಯ್ಯ ಸೇರಿದಂತೆ ಒಟ್ಟು ಎಂಟು ಮಂದಿ ಒಳಗೊಂಡ ಆಯ್ಕೆ ಸಮಿತಿಯು ಒಟ್ಟು 73 ಚಿತ್ರಗಳನ್ನು ವೀಕ್ಷಿಸಿ 2014ನೆ ಚಲನಚಿತ್ರ ಪ್ರಶಸ್ತಿಯನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.


ಡಾ.ರಾಜ್‌ಕುಮಾರ್ ಪ್ರಶಸ್ತಿ-ಬಸಂತ್‌ಕುಮಾರ್ ಪಾಟೀಲ್, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ- ಡಾ.ಬರಗೂರು ರಾಮಚಂದ್ರಪ್ಪ, ಡಾ.ವಿಷ್ಣುವರ್ಧನ್ ಪ್ರಶಸ್ತಿ - ಸುರೇಶ್ ಅರಸ್. ಪ್ರಶಸ್ತಿ ಪುರಸ್ಕೃತರಿಗೆ ಎರಡು ಲಕ್ಷ ರೂ ಗಳ ನಗದು ಬಹುಮಾನ ಮತ್ತು 50 ಗ್ರಾಂ ಚಿನ್ನದಪದಕ.


ಪ್ರಥಮ ಅತ್ಯುತ್ತಮ ಚಿತ್ರ- ಹರಿವು, ನಿರ್ಮಾಪಕರು ಅವಿನಾಶಿ ಯು. ಶೆಟ್ಟಿ, ನಿರ್ದೇಶಕರು ಮಂಜುನಾಥ್ ಎಸ್. ಪ್ರಶಸ್ತಿ ಪುರಸ್ಕೃತರಿಗೆ ತಲಾ ಒಂದು ಲಕ್ಷ ನಗದು, 50ಗ್ರಾಂ ಚಿನ್ನದ ಪದಕ.


 ದ್ವಿತೀಯ ಅತ್ಯುತ್ತಮ ಚಿತ್ರ- ಅಭಿಮನ್ಯು, ನಿರ್ಮಾಪಕರು, ನಿರ್ದೇಶಕ ಅರ್ಜುನ್ ಸರ್ಜಾ. ಪ್ರಶಸ್ತಿ ಪುರಸ್ಕೃತರಿಗೆ ತಲಾ 75 ಸಾವಿರ ನಗದು, 100 ಗ್ರಾಂ ಬೆಳ್ಳಿ ಪದಕ.


ತೃತೀಯ ಅತ್ಯುತ್ತಮ ಚಿತ್ರ- ಹಗ್ಗದ ಮನೆ, ನಿರ್ಮಾಪಕರು ದಯಾಳ್ ಪದ್ಮನಾಭನ್, ಉಮೇಶ್ ಬಣಕಾರ್. ನಿರ್ದೇಶಕರು ದಯಾಳ್ ಪದ್ಮನಾಭನ್. ಪ್ರಶಸ್ತಿ ಪುರಸ್ಕೃತರಿಗೆ ತಲಾ 50 ಸಾವಿರ ನಗದು, 100 ಗ್ರಾಂ ಬೆಳ್ಳಿ ಪದಕ.


ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ- ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ. ನಿರ್ಮಾಪಕರು ರಾಜಶೇಖರ್ ಕೋಟ್ಯಾನ್, ನಿರ್ದೇಶಕರು ಶೇಖರ್ ಕೋಟ್ಯಾನ್. ಪ್ರಶಸ್ತಿ ಪುರಸ್ಕೃತರಿಗೆ ತಲಾ 75 ಸಾವಿರ ನಗದು ಬಹುಮಾನ, 100 ಗ್ರಾಂ ಬೆಳ್ಳಿ ಪದಕ.


ಅತ್ಯುತ್ತಮ ಮನರಂಜನಾ ಚಿತ್ರ- ಗಜಕೇಸರಿ, ನಿರ್ಮಾಪಕರು ಜಯ್ಯಣ್ಣ ಮತ್ತು ಭೋಗೇಂದ್ರ, ನಿರ್ದೇಶಕರು ಕೃಷ್ಣ. ಅತ್ಯುತ್ತಮ ಮಕ್ಕಳ ಚಿತ್ರ- ಬಾನಾಡಿ, ನಿರ್ಮಾಪಕರು ಎಂ.ನಾಗರಾಜು, ನಿರ್ದೇಶಕರು ನಾಗರಾಜ ಕೋಟೆ. ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ- ಉಳಿದವರು ಕಂಡಂತೆ. ನಿರ್ಮಾಪಕರು ಹೇಮಂತ್, ನಿರ್ದೇಶಕರು ರಕ್ಷಿತ್ ಶೆಟ್ಟಿ. ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ- ವಿಷದ ಮಳೆ. ನಿರ್ಮಾಪಕರು ಶ್ರೀಮತಿ ಆತ್ಮಶ್ರೀ, ನಿರ್ದೇಶಕರು ಅಂಬಳಿಕೆ ರವಿ. ಪ್ರಶಸ್ತಿ ಪುರಸ್ಕೃತರಿಗೆ ತಲಾ 50 ಸಾವಿರ ನಗದು ಬಹುಮಾನ, 100 ಗ್ರಾಂ ಬೆಳ್ಳಿ ಪದಕ.

ಅತ್ಯುತ್ತಮ ನಟ ಪ್ರಶಸ್ತಿ- ಸಂಚಾರಿ ವಿಜಯ್, ಚಿತ್ರ ನಾನು ಅವನಲ್ಲ ಅವಳು. ಅತ್ಯುತ್ತಮ ನಟಿ ಪ್ರಶಸ್ತಿ- ಲಕ್ಷ್ಮೀ ಗೋಪಾಲಸ್ವಾಮಿ, ಚಿತ್ರ ವಿದಾಯ. ಅತ್ಯುತ್ತಮ ಪೋಷಕ ನಟ ಪ್ರಶಸ್ತಿ- ಅರುಣ್ ದೇವಸ್ಯ, ಚಿತ್ರ ನಾಯಕನಹಟ್ಟಿ ಶ್ರೀತಿಪ್ಪೇರುದ್ರಸ್ವಾಮಿ ಮಹಾತ್ಮೆ. ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ- ಡಾ. ಬಿ.ಜಯಶ್ರೀ, ಚಿತ್ರ ಕೌದಿ. ಅತ್ಯುತ್ತಮ ಕತೆ- ಲಿವಿಂಗ್ ಸ್ಮೈಲ್ ವಿದ್ಯಾ, ಚಿತ್ರ ನಾನು ಅವನಲ್ಲ ಅವಳು. ಅತ್ಯುತ್ತಮ ಚಿತ್ರಕತೆ- ಪಿ.ಶೇಷಾದ್ರಿ, ಚಿತ್ರ ವಿದಾಯ. ಅತ್ಯುತ್ತಮ ಸಂಭಾಷಣೆ- ಬಿ.ಎಲ್.ವೇಣು, ಚಿತ್ರ ತಿಪ್ಪಜ್ಜಿ ಸರ್ಕಲ್. ಅತ್ಯುತ್ತಮ ಛಾಯಾಗ್ರಹಣ- ಸತ್ಯ ಹೆಗಡೆ, ಚಿತ್ರ ರಾಟೆ. ಅತ್ಯುತ್ತಮ ಸಂಗೀತ ನಿರ್ದೇಶನ- ಅಜನೀಶ್ ಲೋಕನಾಥ್, ಚಿತ್ರ ಉಳಿದವರು ಕಂಡಂತೆ. ಅತ್ಯುತ್ತಮ ಸಂಕಲನ- ಶ್ರೀಕಾಂತ್, ಚಿತ್ರ ಉಗ್ರಂ. ಅತ್ಯುತ್ತಮ ಬಾಲ ನಟ- ಮಾ.ಸ್ನೇಹಿತ್, ಚಿತ್ರ ಸಚ್ಚಿನ್ ತೆಂಡೂಲ್ಕರ್ ಅಲ್ಲ. ಅತ್ಯುತ್ತಮ ಬಾಲ ನಟಿ- ಕು.ಲಹರಿ, ಚಿತ್ರ ಆಟ ಪಾಠ. ಅತ್ಯುತ್ತಮ ಕಲಾ ನಿರ್ದೇಶನ- ಚಂದ್ರಕಾಂತ್, ಚಿತ್ರ 143. ಅತ್ಯುತ್ತಮ ಗೀತರಚನೆ- ಹುಲಿಕುಂಟೆ ಮೂರ್ತಿ, ಹಾಡು ಬೆಳಕ ಬತ್ತಲೆಯೊಳಗೆ, ಚಿತ್ರ ಕೌದಿ. ಅತ್ಯುತ್ತಮ ಹಿನ್ನಲೆ ಗಾಯಕ- ಚಿಂತನ್, ಹಾಡು ಸಾಹೋರೆ ಸಾಹೋರೆ, ಚಿತ್ರ ಗಜಕೇಸರಿ. ಅತ್ಯುತ್ತಮ ಹಿನ್ನಲೆ ಗಾಯಕಿ- ವಿದ್ಯಾ ಮೋಹನ್, ಹಾಡು ಕಣ್ಣೆ ಇಲ್ಲದ ಮೇಲೆ, ಚಿತ್ರ ಸಚಿನ್ ತೆಂಡೋಲ್ಕರ್ ಅಲ್ಲ. ತೀರ್ಪುಗಾರರ ವಿಶೇಷ ಪ್ರಶಸ್ತಿ- ಜ್ಯೋತಿರಾಜ್, ವಿಭಾಗ ಸಾಹಸ, ಚಿತ್ರ ಜ್ಯೋತಿ ಅಲಿಯಾಸ್ ಕೋತಿರಾಜ್. ಪ್ರಶಸ್ತಿ ಪುರಸ್ಕೃತರಿಗೆ ತಲಾ 20 ಸಾವಿರ ನಗದು ಬಹುಮಾನ, 100 ಗ್ರಾಂ ಬೆಳ್ಳಿ ಪದಕ ನೀಡಿ ಗೌರವಿಸಲಾಗುವುದು ಎಂದು ಬೇಗ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಾರ್ತಾ ಇಲಾಖೆಯ ಕಾರ್ಯದರ್ಶಿ ಡಾ.ಎನ್.ಎಸ್.ಚನ್ನಪ್ಪಗೌಡ, ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯ ಪ್ರಶಸ್ತಿಗೆ ಹರಿವು ಚಿತ್ರ ಆಯ್ಕೆಯಾಗಿರುವುದು ಚಿತ್ರದ ನಿರ್ದೇಶಕನಾದ ನನಗೆ ಅತೀವ ಖುಷಿ ತರಿಸಿದೆ. ಚಿತ್ರರಂಗದ ಯಾವುದೆ ಹಿನ್ನೆಲೆಯಿಲ್ಲದೆ ಕೇವಲ ಶ್ರಮ, ಶ್ರದ್ಧೆಯನ್ನು ನಂಬಿ ‘ಹರಿವು’ ಚಿತ್ರವನ್ನು ನಿರ್ದೇಶಿಸಿದ್ದೆ. ಅದಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಚಿತ್ರವನ್ನು ನಿರ್ದೇಶಿಸಲು ಸ್ಫೂರ್ತಿ ಸಿಕ್ಕಿದೆ.
-ಮಂಸೋರೆ, ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದ ‘ಹರಿವು’ ಚಿತ್ರದ ನಿರ್ದೇಶಕ

ರಾಜ್ಯ ಚಲನಚಿತ್ರ ಪ್ರಶಸ್ತಿಗೆ ‘ನಾನು ಅವನಲ್ಲ ಅವಳು’ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನನಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿರುವುದಕ್ಕೆ ನಾಡಿನ ಜನತೆಗೆ ಕೃತಜ್ಞತೆ ಅರ್ಪಿಸುತ್ತೇನೆ. ಹಾಗೆಯೇ ಈ ಪ್ರಶಸ್ತಿಯನ್ನು ನಾಡಿನ ರೈತರಿಗೆ ಹಾಗೂ ಇತ್ತೀಚಿಗೆ ಸಿಯಾಚಿನ್‌ನಲ್ಲಿ ಹಿಮಕುಸಿತಕ್ಕೆ ಸಿಲುಕಿ ಮೃತಪಟ್ಟ ಯೋಧರಿಗೆ ಅರ್ಪಿಸುತ್ತೇನೆ.
-ಸಂಚಾರಿ ವಿಜಯ್, ಅತ್ಯುತ್ತಮ ನಟ ಪ್ರಶಸ್ತಿ ವಿಜೇತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News